ವಿದ್ಯಾರ್ಥಿಗಳ ಶಿಕ್ಷಣ ಸಾಲವೂ ಮನ್ನಾ
ಮೈಸೂರು

ವಿದ್ಯಾರ್ಥಿಗಳ ಶಿಕ್ಷಣ ಸಾಲವೂ ಮನ್ನಾ

October 24, 2018

ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ರೈತರಿಗೆ ಕೊಡುಗೆ ನೀಡಿದಂತೆ, ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಡೆದಿರುವ ಸಾಲವನ್ನೂ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಈಗಾಗಲೇ ಕೃಷಿ ಸಾಲ ಮನ್ನಾ ಮಾಡಲಾಗಿದ್ದು, ನವೆಂಬರ್ 1 ರಿಂದ ರಾಜ್ಯದ 44 ಲಕ್ಷ ರೈತ ಕುಟುಂಬಗಳ ಮನೆ ಬಾಗಿಲಿಗೆ ಸಾಲ ಋಣಮುಕ್ತ ಪತ್ರ ತಲುಪಲಿದೆ. ರೈತರ ಸಾಲ ಋಣಮುಕ್ತ ಪತ್ರಕ್ಕೆ ನಾನೇ ಖುದ್ದಾಗಿ ಸಹಿ ಹಾಕಿ, ಸ್ಥಳೀಯ ಅಧಿಕಾರಿ ಗಳ ಮೂಲಕ ಮನೆ ಬಾಗಿಲಿಗೆ ತಲುಪಿಸ ಲಾಗುವುದು. ಕೃಷಿ ಸಾಲ ಮನ್ನಾಕ್ಕೆ ಸಂಬಂಧಿ ಸಿದಂತೆ ಸರ್ಕಾರ ಕೇಳಿರುವ ಮಾಹಿತಿ ತುಂಬಿ ಅರ್ಜಿ ಸಲ್ಲಿಸುವ ಎಲ್ಲಾ ರೈತರಿಗೂ ಈ ಪತ್ರ ದೊರೆಯಲಿದೆ. ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‍ಕ್ಲಬ್ ಏರ್ಪಡಿಸಿದ್ದ ಸುದ್ದಿಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಲ ಮಾಡಿ ಶಿಕ್ಷಣ ಪಡೆದಿದ್ದಾರೆ. ಆದರೆ ಉದ್ಯೋಗ ದೊರೆ ಯದೆ ನಿರುದ್ಯೋಗಿಗಳಾಗಿದ್ದಾರೆ.

ಪದವಿ ಪಡೆದು ನಿರುದ್ಯೋಗಿಗಳಾಗಿರುವ ಅವರಿಗೆ ಸಾಲ ನೀಡಿದ ಬ್ಯಾಂಕ್ ನವರು ವಿದ್ಯಾರ್ಥಿಗಳ ಪೋಷಕರ ಆಸ್ತಿ-ಪಾಸ್ತಿ ಮುಟ್ಟುಗೋಲಿಗೆ ಮುಂದಾಗಿದ್ದಾರೆ. ರೈತರ ಸಮಸ್ಯೆಯಂತೆ ಇದು ಒಂದು ದೊಡ್ಡ ಸಮಸ್ಯೆಯಾಗಿದೆ, ಇಂತಹ ಪೋಷಕರು ನನ್ನ ಮುಂದೆ ಅಳಲು ತೋಡಿಕೊಂಡಿದ್ದಾರೆ. ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಕಲೆಹಾಕುವಂತೆ ಅಧಿಕಾರಿಗಳಿಗೆ ಸೂಚಿ ಸಿದ್ದೇನೆ. ಬ್ಯಾಂಕ್‍ಗಳಿಂದ ಮಾಹಿತಿ ಬರುತ್ತಿದ್ದಂತೆ ಪದವಿ ಪಡೆದು ಉದ್ಯೋಗ ಇಲ್ಲದೆ ಸಾಲ ಸಮಸ್ಯೆ ಎದುರಿಸುತ್ತಿರು ವವರ ಶಿಕ್ಷಣ ಸಾಲ ಮನ್ನಾ ಮಾಡಲಾ ಗುವುದು ಎಂದರು. ರಾಜ್ಯದ ಖಜಾನೆ ಸುಭದ್ರವಾಗಿದೆ. ಸಂಪನ್ಮೂಲ ಆಧಾರವಾಗಿಟ್ಟುಕೊಂಡು ಕೃಷಿ ಸಾಲ ಮನ್ನಾ ಮಾಡಿದ್ದೇನೆ. ಇದರಿಂದ ಬೇರೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ ಎನ್ನುವ ವಿರೋಧಿಗಳ ಟೀಕೆಗೆ ಅಂಕಿ-ಅಂಶಗಳ ಸಮೇತ ಉತ್ತರಿಸಿದರು. ಕಳೆದ ವರ್ಷಕ್ಕಿಂತ ಈ ವರ್ಷ ಅಭಿವೃದ್ಧಿ ಕಾರ್ಯಗಳಿಗೆ ಶೇಕಡಾ 1ರಷ್ಟು ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ. ನಮ್ಮ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ, ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂಬ ಅಪಪ್ರಚಾರ ಆಗಾಗ್ಯೆ ನಡೆಯುತ್ತಿದೆ. ರಾಜ್ಯದ ಸರ್ಕಾರಿ ಶಾಲಾ-ಕಾಲೇಜು ಕಟ್ಟಡಗಳ ದುರಸ್ತಿಗೆ 1200 ಕೋಟಿ ರೂ. ನೀಡಲಾಗಿದೆ, ಸಮಾಜ ಕಲ್ಯಾಣ ಇಲಾಖೆಗೆ 29 ಸಾವಿರ ಕೋಟಿ ರೂ. ಹಂಚಿಕೆ ಮಾಡಿ ವಸತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಿಂದ 56 ಸಾವಿರ ಕುಟುಂಬಗಳಿಗೆ ಸೌಲಭ್ಯ ದೊರಕುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆ ಹಣ ಖರ್ಚು ಮಾಡದ ಅಧಿಕಾರಿಗಳನ್ನು ಶಿಕ್ಷಿಸಲು ಅಧಿಸೂಚನೆ ಹೊರಡಿಸಲಾಗಿದೆ. ನಾನು ಟೆಂಪಲ್ ರನ್ ಅಷ್ಟೇ ಮಾಡುತ್ತಿಲ್ಲ, ಅಭಿವೃದ್ಧಿ ಕಡೆಗೂ ಗಮನ ಕೊಡುತ್ತಿದ್ದೇನೆ ಎನ್ನುವುದಕ್ಕೆ ಇದೇ ಉದಾಹರಣೆ. ನಮ್ಮ ಕುಟುಂಬ ದೇವರ ಮೇಲೆ ನಂಬಿಕೆ ಇಟ್ಟಿದೆ, ಆದ್ದರಿಂದ ದೇವರ ದರ್ಶನಕ್ಕೆ ಹೋಗುವುದು ಸಹಜ.

ನಾನು ಸಮಯ ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ಆಕ್ಷೇಪಗಳಿವೆ, ಆದರೆ ದಿನನಿತ್ಯ ಜನಸಾಮಾನ್ಯರನ್ನು ಭೇಟಿ ಮಾಡುವ ಮುಖ್ಯಮಂತ್ರಿ ನಾನು, ಈ ಒತ್ತಡಗಳಿಂದ ಸಮಯ ಪಾಲನೆ ಕಷ್ಟವಾಗುತ್ತಿದೆಯೇ ಹೊರತು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಲೋಕೋಪಯೋಗಿ ಇಲಾಖೆಯಲ್ಲಿ 12,000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯಿಂದ 500 ಕೋಟಿ ರೂ.ಗಳಿಗೆ ಬೇಡಿಕೆ ಬಂದಿದೆ. ಅನ್ನಭಾಗ್ಯ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ 3600 ಕೋಟಿ ರೂ. ಮೀಸಲಿರಿಸಿತ್ತು. ಪ್ರತಿ ಕುಟುಂಬಕ್ಕೆ 7 ಕೆಜಿ ಅಕ್ಕಿ ನೀಡಬೇಕೆಂಬ ಒತ್ತಡ ಹೆಚ್ಚಾಗಿದ್ದು, ಅದನ್ನು ಜಾರಿ ಮಾಡಲು 5,500 ಕೋಟಿ ರೂ. ಹೊಂದಿಸಬೇಕಿದೆ.

ಈ ಯೋಜನೆ ಫಲಾನುಭವಿಗಳ ಸಂಖ್ಯೆ 1.04 ಕೋಟಿಯಿಂದ 1.29 ಕೋಟಿ ಕುಟುಂಬಕ್ಕೆ ಏರಿಕೆಯಾಗಿದೆ, ಹಿಂದಿನ ಸರ್ಕಾರದ ಯೋಜನೆಗಳಲ್ಲಿ ಏನೋ ಲೋಪವಾಗಿದೆ ಎಂಬ ಕಾರಣಕ್ಕೆ ಹಣ ಹೊಂದಿಸಲಾಗದು ಎನ್ನಲು ಸಾಧ್ಯವಿಲ್ಲ.

ಹನ್ನೆರಡು ವರ್ಷಗಳ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರ ಹೊರವಲಯದ ಫೆರಿಫೆರಲ್ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಪ್ರಸ್ತಾಪಿಸಲಾ ಗಿತ್ತು. ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯೂ ಜಾರಿಯಾಗಿತ್ತು. ಆನಂತರ ಯೋಜನೆ ನೆನೆಗುದಿಗೆ ಬಿದ್ದಿತ್ತು. ಮತ್ತೆ ಈಗ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗುವುದು.

ಮೊದಲ ಕಂತಿನಲ್ಲಿ 2,000 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಮುಂದಿನ ವರ್ಷ 4,500 ಕೋಟಿ ರೂ. ವೆಚ್ಚ ಮಾಡಲಾಗುವುದು, ಶೀಘ್ರ ಟೆಂಡರ್ ಕರೆದು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಮುಂದಿನ ತಿಂಗಳಿನಿಂದಲೇ ಯೋಜನೆ ಪ್ರಾರಂಭಿಸಲಾಗುವುದು. ಈ ಯೋಜನೆಯನ್ನು 6,500 ಕೋಟಿ ರೂ. ವೆಚ್ಚದಲ್ಲಿ 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ರಸ್ತೆ ಮಧ್ಯೆ ಮೆಟ್ರೋ ರೈಲು ಸಂಚಾರಕ್ಕೂ ಜಾಗ ಕಲ್ಪಿಸಲಾಗುವುದು ಎಂದರು. ಎಲಿವೇಟೆಡ್ ರಸ್ತೆ ನಿರ್ಮಾಣ ಪ್ರಸ್ತಾಪವೂ ಇದ್ದು, 102 ಕಿ.ಮೀ. ಉದ್ದದ ಈ ಯೋಜನೆ ಜಾರಿಗೆ ಬದ್ಧರಾಗಿದ್ದೇವೆ.

ಎಲಿವೇಟೆಡ್ ರಸ್ತೆ ನಿರ್ಮಾಣದಿಂದ ಇಂಧನ ಹಾಗೂ ಸಮಯ ಉಳಿತಾಯವಾಗಲಿದೆ, ಯೋಜನೆಯ ಎಲ್ಲಾ ಲಾಭ-ನಷ್ಟಗಳ ವೈಜ್ಞಾನಿಕ ಚಿತ್ರಣವನ್ನು ಸಾರ್ವಜನಿಕಗೊಳಿಸಲಾಗು ವುದು. ವರ್ಷಕ್ಕೆ 9 ಸಾವಿರ ಕೋಟಿ ರೂ. ಉಳಿತಾಯದ ಅಂದಾಜಿದೆ. ಒಂದೂವರೆ ತಿಂಗಳಲ್ಲಿ ನೀಲನಕ್ಷೆ ಸಿದ್ಧಪಡಿಸಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಯಿಂದ ಬಡವರ ಮನೆಗಳಿಗೆ ಧಕ್ಕೆಯಾಗದಂತೆ ನಕಾಶೆ ತಯಾರಿಸಲು ಸೂಚಿಸಲಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡುತ್ತಿರುವ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲವೇ ಎಂದು ಅವರು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

Translate »