ಕಾಂಗ್ರೆಸ್ ನಾಮಾವಶೇಷ ಎಂಎಲ್‍ಸಿ ಸಿಎಂ ಲಿಂಗಪ್ಪ ಎಚ್ಚರಿಕೆ
ಮೈಸೂರು

ಕಾಂಗ್ರೆಸ್ ನಾಮಾವಶೇಷ ಎಂಎಲ್‍ಸಿ ಸಿಎಂ ಲಿಂಗಪ್ಪ ಎಚ್ಚರಿಕೆ

May 26, 2019

ರಾಮನಗರ: ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಹಿಂದೆ ಸರಿಯಬೇಕು, ಒಂದೊಮ್ಮೆ ಮೈತ್ರಿ ಮುಂದು ವರಿಸಿದರೆ, ಪಕ್ಷ ನಾಮಾವಶೇಷವಾಗಲಿದೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಮೇಲ್ಮನೆ ಸದಸ್ಯ ಸಿ.ಎಂ.ಲಿಂಗಪ್ಪ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಅತಿ ದೊಡ್ಡ ಪ್ರಮಾದ ಎಸಗಿದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲನ್ನು ಪ್ರಸ್ತಾಪಿಸಿದ ಲಿಂಗಪ್ಪ, ದೇಶದ ಚುನಾವಣಾ ಇತಿಹಾಸದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಇಂತಹ ಅತೀ ಕೆಟ್ಟ ಸೋಲು ಎಂದೂ ಕಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜೆಡಿಎಸ್‍ನೊಂದಿಗೆ ಮೈತ್ರಿ ಒಪ್ಪಂದಕ್ಕೆ ಕಾರಣರಾದ ಪಕ್ಷದ ಕೆಲ ರಾಜ್ಯ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು, ಕೆಲವರಿಗೆ ಅಧಿಕಾರ ದಾಹ ಹೆಚ್ಚಾಗಿದ್ದು, ಅವರಿಗೆ ಪಕ್ಷದ ಹಿತಾಸಕ್ತಿ ಬೇಕಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. 37 ಶಾಸಕರನ್ನು ಹೊಂದಿರುವ ಜೆಡಿಎಸ್ ಪಕ್ಷದ ನಾಯಕ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದನ್ನು ನೋಡಿ, 105 ಶಾಸಕರನ್ನು ಹೊಂದಿರುವ ಪಕ್ಷ ಸುಮ್ಮನಿರಲು ಸಾಧ್ಯವೇ .? ಎಂದು ಪ್ರಶ್ನಿಸಿದರಲ್ಲದೇ, ಅಧಿಕಾರ ಹಿಡಿಯಲು ಬಿಜೆಪಿ ನಾಯಕರು ನಡೆಸುತ್ತಿರುವ ಪ್ರಯತ್ನದಲ್ಲಿ ತಪ್ಪೇನಿದೆ, ಇದು ಸಹಜ ಕೂಡ ಎಂದು ಹೇಳಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎದುರು ಯಶಸ್ವಿ ಹೋರಾಟ ನಡೆಸಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಅಭಿನಂದಿಸಿದ ಲಿಂಗಪ್ಪ, ಕೆಲ ಕಾಂಗ್ರೆಸ್ ನಾಯಕರು ಬೆಂಬ ಲಿಸಿದ ಕಾರಣ ಆಕೆಗೆ ಜಯ ಸಾಧ್ಯವಾಯಿತು ಎಂದು ಹೇಳಿದರು.

Translate »