ರೈತರ ಸಾಲ ಮನ್ನಾಗೆ ಸಮನ್ವಯ ಸಮಿತಿ ಅಸ್ತು
ಮೈಸೂರು

ರೈತರ ಸಾಲ ಮನ್ನಾಗೆ ಸಮನ್ವಯ ಸಮಿತಿ ಅಸ್ತು

July 2, 2018
  • 5 ವರ್ಷದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ, ನಿರ್ಗತಿಕರಿಗೆ 20 ಲಕ್ಷ ಮನೆ ನಿರ್ಮಾಣ
  • ನೀರಾವರಿಗೆ ಹೆಚ್ಚು ಅನುದಾನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಬಜೆಟ್‍ನಲ್ಲಿ ರೈತರ ಸಾಲ ಮನ್ನಾಗೆ ಸಮ್ಮತಿ ಸೂಚಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ ಆದ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿದ್ದ ಸಮನ್ವಯ ಸಮಿತಿ ಸಭೆ ಇಂದು ಮಧ್ಯಾಹ್ನ ಕುಮಾರ ಕೃಪ ಅತಿಥಿ ಗೃಹದಲ್ಲಿ ನಡೆಯಿತು.

ಸಂಸದ ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯು ನೀಡಿದ್ದ ವರದಿಯನ್ನು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಸಮನ್ವಯ ಸಮಿತಿ ಅಂಗೀಕರಿಸಿದೆ ಎಂದು ಸಭೆಯ ನಂತರ ಸಮನ್ವಯ ಸಮಿತಿ ಸಂಚಾಲಕರೂ ಆದ ಡ್ಯಾನಿಷ್ ಅಲಿ ಸುದ್ದಿಗಾರರಿಗೆ ತಿಳಿಸಿದರು.

ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಮಾಡಲು ಸಮನ್ವಯ ಸಮಿತಿ ಒಪ್ಪಿಗೆ ಸೂಚಿಸಿದೆ. ಅದರ ಪ್ರಮಾಣ ಏನೆಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ಮಂಡನೆ ವೇಳೆ ತಿಳಿಸಲಿದ್ದಾರೆ ಎಂದರು. ನೀರಾವರಿ ಯೋಜನೆಗಳಿಗೆ 1.25 ಲಕ್ಷ ಕೋಟಿ ಮೀಸಲಿರಿಸಲಾಗಿದೆ. 5 ವರ್ಷದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ, ನಿರ್ಗತಿಕರಿಗೆ 20 ಲಕ್ಷ ಮನೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಗಳು ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ರೈತರ ಸಾಲ ಮನ್ನಾ ಆಗಲಿದೆ. ಆದರೆ ಅದರ ವಿವರಗಳನ್ನು ಪಡೆಯಲು ನೀವು (ಸುದ್ದಿಗಾರರು) ಬಜೆಟ್‍ವರೆಗೆ ಕಾಯಬೇಕಾಗಿದೆ ಎಂದರು. ಸಮನ್ವಯ ಸಮಿತಿ ಸಭೆ ಸೌಹಾರ್ಧಯುತವಾಗಿ ನಡೆದಿದ್ದು, ಉಭಯ ಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ಹೇಳಿದರು.

ರೈತರ ಸಾಲ ಮನ್ನಾದಿಂದ ಹಣಕಾಸಿನ ಹೊಂದಾಣಿಕೆ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರದ ಕೆಲ ಕಾರ್ಯಕ್ರಮಗಳನ್ನು ಮುಂದುವರಿಸದಿರಲು ಸಮನ್ವಯ ಸಮಿತಿ ನಿರ್ಣಯಿಸಿದೆ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಅವರು ಮಂಡಿಸಿದ್ದ ಕೊನೇ ಬಜೆಟ್‍ನಲ್ಲಿ ಘೋಷಿಸಿದ್ದ `ಆರೋಗ್ಯ ಕರ್ನಾಟಕ’ ಯೋಜನೆಗೆ ಸಮ್ಮತಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

Translate »