ಮೃಗಾಲಯದ ಸುಪರ್ದಿಗೆ ಅಕ್ವೇರಿಯಂ ನೀಡಿ ಪಾಲಿಕೆಗೆ ಸಚಿವ ಸಾ.ರಾ.ಮಹೇಶ್ ಸೂಚನೆ
ಮೈಸೂರು

ಮೃಗಾಲಯದ ಸುಪರ್ದಿಗೆ ಅಕ್ವೇರಿಯಂ ನೀಡಿ ಪಾಲಿಕೆಗೆ ಸಚಿವ ಸಾ.ರಾ.ಮಹೇಶ್ ಸೂಚನೆ

July 2, 2018

ಮೈಸೂರು:  ಮೈಸೂರಿನ ಕಾರಂಜಿಕೆರೆ ಬಳಿ ನೆನೆಗುದಿಗೆ ಬಿದ್ದಿರುವ ಅಕ್ವೇರಿಯಂ ಅನ್ನು ಶೀಘ್ರವೇ ಮೃಗಾಲಯದ ಸುಪರ್ದಿಗೆ ಒಪ್ಪಿಸುವಂತೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಮೈಸೂರು ನಗರ ಪಾಲಿಕೆ ಐದು ಕೋಟಿ ರೂ ವೆಚ್ಚದಲ್ಲಿ ಕಳೆದ ಆರು ವರ್ಷದ ಹಿಂದೆ ಭಾಗಶಃ ನಿರ್ಮಿಸಿರುವ ಅಕ್ವೇರಿಯಂ ಕಟ್ಟಡವನ್ನು ಭಾನುವಾರ ಬೆಳಿಗ್ಗೆ ಮೃಗಾಲಯ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಸಾ.ರಾ.ಮಹೇಶ್, ಕಳೆದ ಕೆಲವು ವರ್ಷಗಳಿಂದ ಪಾಳುಬಿದ್ದಿರುವ ಅಕ್ವೇರಿಯಂ ಕಟ್ಟಡವನ್ನು ಕಂಡು ನೆನೆಗುದಿಗೆ ಬೀಳಲು ಕಾರಣದ ಬಗ್ಗೆ ಮಾಹಿತಿ ಪಡೆದು ವಿಷಾದ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಕಾರಂಜಿಕೆರೆಗೆ ಹೊಂದಿಕೊಂಡಂತೆ ಅರ್ಧಂಬರ್ದ ನಿರ್ಮಿಸಿರುವ ಅಕ್ವೇರಿಯಂ ಕಟ್ಟಡವನ್ನು ಪಾಲಿಕೆಯಿಂದ ಮೃಗಾಲಯದ ಸುಪರ್ದಿಗೆ ವಹಿಸಿದರೆ ಅದನ್ನು ಪುನಶ್ಚೇತನಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್‍ಗಳಾದ ಆರ್.ಲಿಂಗಪ್ಪ ಹಾಗೂ ಎಂ.ಜೆ.ರವಿಕುಮಾರ್ ಅವರು ಪ್ರತಿಕ್ರಿಯಿಸಿ, ಈ ಹಿಂದೆಯೇ ಅಕ್ವೇರಿಯಂ ಕಟ್ಟಡವನ್ನು ಮೃಗಾಲಯದ ಸುಪರ್ದಿಗೆ ನೀಡುವುದಕ್ಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅಕ್ವೇರಿಯಂನಿಂದ ಬಂದ ಲಾಭದಲ್ಲಿ ಪಾಲಿಕೆಗೆ ಶೇ.50ರಷ್ಟು ನೀಡುವಂತೆ ಪಾಲಿಕೆಯಿಟ್ಟಿದ್ದ ಬೇಡಿಕೆಯನ್ನು ಮೃಗಾಲಯದ ಅಧಿಕಾರಿಗಳು ನಿರಾಕರಿಸಿದ್ದರು. ಇದರಿಂದ ಇದುವರೆಗೂ ನೆನೆಗುದಿಗೆ ಬಿದ್ದಿದೆ ಎಂದು ಸ್ಪಷ್ಟಪಡಿಸಿದರು.

ಪರಿಶೀಲನೆ ಮತ್ತು ಸೂಚನೆ: ಅಕ್ವೇರಿಯಂ ಕಟ್ಟಡವನ್ನು ಪರಿಶೀಲಿಸಿದ ಬಳಿಕ ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅವರಿಗೆ ಅಕ್ವೇರಿಯಂ ಕಟ್ಟಡದ ಕಾಮಗಾರಿಯನ್ನು ಮೃಗಾಲಯದ ವತಿಯಿಂದಲೇ ಖರ್ಚು ಮಾಡಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದರೊಂದಿಗೆ, ಕಟ್ಟಡ ಕಾಮಗಾರಿಗಾಗಿ ಮಾಡಿದ ಸಾಲದ ಮೊತ್ತ ತೀರಿಸಿದ ನಂತರ ಅಕ್ವೇರಿಯಂನಿಂದ ಬರುವ ಆದಾಯದಲ್ಲಿ ಶೇ.50ರಷ್ಟು ನಗರ ಪಾಲಿಕೆಗೆ ನೀಡುವುದಾಗಿ ಬರೆದು ಕೊಡಿ ಎಂದು ಸೂಚಿಸಿದರಲ್ಲದೆ, ಮೃಗಾಲಯದ ಸುಪರ್ದಿಗೆ ಅಕ್ವೇರಿಯಂ ಕಟ್ಟಡವನ್ನು ಒಪ್ಪಿಸುವುದಕ್ಕೆ ದಾಖಲೆಗಳನ್ನು ಸಿದ್ಧಪಡಿಸುವಂತೆ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರಿಗೆ ತಿಳಿಸಿದರು.

28 ಕೋಟಿ ವೆಚ್ಚ: ಅಕ್ವೇರಿಯಂ ಕಟ್ಟಡವನ್ನು ಪೂರ್ಣಗೊಳಿಸಲು ಸುಮಾರು 25ರಿಂದ 28 ಕೋಟಿ ರೂ ವೆಚ್ಚವಾಗಲಿದೆ. ಮೈಸೂರು ನಗರಕ್ಕೆ ಬರುವ ಪ್ರವಾಸಿಗರಿಗೆ ಅಕ್ವೇರಿಯಂ ನೋಡುವ ಅವಕಾಶ ಶೀಘ್ರವೇ ಒದಗಿ ಬರಲಿದೆ. ಕೆಲವು ಕಾರಣಗಳಿಂದ ಇದುವರೆಗೆ ಅಕ್ವೇರಿಯಂ ಕಟ್ಟಡ ನೆನೆಗುದಿಗೆ ಬಿದ್ದಿತ್ತು. ಇದೀಗ ಪಾಲಿಕೆ ಹಾಗೂ ಮೃಗಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಗರ ಪಾಲಿಕೆಯಿಂದ ಮೃಗಾಲಯ ವ್ಯಾಪ್ತಿಗೆ ಅಕ್ವೇರಿಯಂ ಕಟ್ಟಡ ನೀಡಲಾಗುತ್ತದೆ. ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಮೃಗಾಲಯ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಆರು ತಿಂಗಳಲ್ಲಿ ಕಾಯಕಲ್ಪ: ಈ ಕುರಿತು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಗರ ಪಾಲಿಕೆ ಮೃಗಾಲಯಕ್ಕೆ ಅಕ್ವೇರಿಯಂ ಕಟ್ಟಡವನ್ನು ನೀಡಿದ ನಂತರ ಕಟ್ಟಡವನ್ನು ವಶಕ್ಕೆ ಪಡೆಯಲಾಗುತ್ತದೆ. ಅತಿಕ್ರಮ ಪ್ರವೇಶಕ್ಕೆ ಅವಕಾಶ ನೀಡದೆ, ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲಾಗುತ್ತದೆ. ಮುಂದಿನ ಆರು ತಿಂಗಳಲ್ಲಿ ಪ್ರವಾಸಿಗರು ವೀಕ್ಷಿಸುವುದಕ್ಕೆ ಒಂದು ಹಂತದಲ್ಲಿ ಕಾಯಕಲ್ಪ ನೀಡಲಾಗುತ್ತದೆ. ಮಾದರಿಯನ್ನು ಇಟ್ಟು ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಲಾಗುತ್ತದೆ. ಕಾಮಗಾರಿ ಸಂಪೂರ್ಣವಾಗಬೇಕಾದರೆ ಎರಡು ವರ್ಷ ಬೇಕಾಗುತ್ತದೆ ಎಂದರಲ್ಲದೆ, ಇದಕ್ಕೆ ಪೂರಕವಾದ ನಕ್ಷೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.

ಮೃಗಾಲಯದ ಕ್ಯಾಂಟೀನ್ ಲೈಸನ್ಸ್ ನವೀಕರಿಸಬೇಡಿ..

ಅಕ್ವೇರಿಯಂ ಕಟ್ಟಡದ ಪರಿಶೀಲನೆಯ ಬಳಿಕ ಮೃಗಾಲಯದ ಆಂಪಿಥೇಟರ್ ಅನ್ನು ವೀಕ್ಷಿಸಿದರು. ಇದೇ ವೇಳೆ ಮೃಗಾಲಯದಲ್ಲಿರುವ ಏಕೈಕ ಕ್ಯಾಂಟೀನ್‍ನಲ್ಲಿ ತಿಂಡಿ-ತಿನಿಸುಗಳ ಬೆಲೆ ಹೆಚ್ಚಾಗಿದೆ ಎಂಬ ದೂರುಗಳು ಸಚಿವ ಸಾ.ರಾ.ಮಹೇಶ್ ಅವರಿಗೆ ಸಲ್ಲಿಕೆಯಾದವು. ಇದರಿಂದ ಮೃಗಾಲಯದ ಅಧಿಕಾರಿಗಳಿಗೆ ಕೇಳಿದರು. ಅಲ್ಲದೆ ಮೃಗಾಲಯದ ಹೊರಗೆ ಇರುವ ಕ್ಯಾಂಟೀನ್‍ಗಳಲ್ಲಿರುವ ತಿಂಡಿ-ತಿನಿಸುಗಳ ಬೆಲೆಗೆ ಹೋಲಿಸಿದರು. ಆದರೆ ಮೃಗಾಲಯದ ಕ್ಯಾಂಟೀನ್‍ನಲ್ಲಿ 10ರಿಂದ 25 ರೂ ಹೆಚ್ಚಳವಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನ ಹೊಟೇಲ್‍ಗಳಲ್ಲಿರುವ ದರದಂತೆ ಮೃಗಾಲಯದಲ್ಲಿರುವ ಕ್ಯಾಂಟೀನ್‍ನಲ್ಲಿಯೂ ತಿಂಡಿ-ತಿನಿಸು ಪ್ರವಾಸಿಗರಿಗೆ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಯಾವುದೆ ಕಾರಣಕ್ಕೂ ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ ಅವಧಿಯನ್ನು ವಿಸ್ತರಿಸಬಾರದು. ಮುಂದಿನ ಸಾಲಿನಿಂದ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸಂಸ್ಥೆಯ ವತಿಯಿಂದಲೇ ಕ್ಯಾಂಟೀನ್ ನಡೆಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.

ಥಂಡಿ ಸಡಕ್ ರಸ್ತೆ ಬಂದ್‍ಗೆ ಕ್ರಮ

ಗನ್‍ಹೌಸ್‍ನಿಂದ ಗಣಪತಿ ಆಶ್ರಮದವರೆಗೂ ನಂಜನಗೂಡು ರಸ್ತೆ ದುರಸ್ತಿಯಾಗುತ್ತಿದೆ. ಶೀಘ್ರದಲ್ಲಿಯೇ ಆ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ನಂಜನಗೂಡು ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾದರೆ ಥಂಡಿ ಸಡಕ್ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಲಿದೆ. ಇದರಿಂದ ಈ ರಸ್ತೆಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿರ್ಬಂಧಿಸಬೇಕು. ಇದರಿಂದ ವಾಕಿಂಗ್ ಮಾಡುವವರಿಗೆ ನೆರವಾಗುತ್ತದೆ. ಅಲ್ಲದೆ ವಸ್ತು ಪ್ರದರ್ಶನ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳದಿಂದ ಮೃಗಾಲಯದವರೆಗೂ ಇರುವ ಅಡ್ಡ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದರೆ ಪ್ರವಾಸಿಗರಿಗೆ ಬ್ಯಾಟರಿ ವಾಹನದ ವ್ಯವಸ್ಥೆ ಮಾಡಬಹುದು ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ನೀಡಿದ ಸಲಹೆಗೆ ಸಚಿವರು ಸಮ್ಮತಿಸಿದರು.

Translate »