ಮೈಸೂರು ರೇಸ್‍ಕೋರ್ಸ್‍ಗೆ ಸಚಿವ ಸಾ.ರಾ.ಮಹೇಶ್ ಭೇಟಿ: ಪರಿಶೀಲನೆ
ಮೈಸೂರು

ಮೈಸೂರು ರೇಸ್‍ಕೋರ್ಸ್‍ಗೆ ಸಚಿವ ಸಾ.ರಾ.ಮಹೇಶ್ ಭೇಟಿ: ಪರಿಶೀಲನೆ

July 2, 2018
  •  ಅವ್ಯವಸ್ಥೆ ಕಂಡು ಕೆಂಡಾಮಂಡಲವಾದ ಸಚಿವರು
  • ನಗರ ಪಾಲಿಕೆ ಅಧಿಕಾರಿಗೆ ತರಾಟೆ

ಮೈಸೂರು: ಮೈಸೂರಿನ ರೇಸ್ ಕೋರ್ಸ್‍ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವು ಮಾಡಿ ಸ್ವಚ್ಛತೆ ಕಾಪಾಡುವುದಕ್ಕೆ ಮೂರು ತಿಂಗಳ ಗಡುವು ನೀಡಲಾಗಿದ್ದು, ಗಡುವು ಉಲ್ಲಂಘಿಸಿದರೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಎಚ್ಚರಿಸಿದ್ದಾರೆ.

ಭಾನುವಾರ ಬೆಳಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರೇಸ್‍ಕೋರ್ಸ್‍ಗೆ ಭೇಟಿ ನೀಡಿದ ಸಚಿವರು, ಅಕ್ರಮವಾಗಿ ನಿರ್ಮಿಸಿರುವ ಕುದುರೆ ಸಾಕಾಣಿಕೆಯ ಲಾಯದ ಕಟ್ಟಡ ಹಾಗೂ ರೇಸ್‍ಕೋರ್ಸ್ ಆವರಣದಲ್ಲಿರುವ ಅನೈರ್ಮಲ್ಯ ಕಂಡು ವಿಷಾದಿಸಿದರಲ್ಲದೆ, ಪಾಲಿಕೆಯ ಸಹಾಯಕ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ರೇಸ್ ಕೋರ್ಸ್ ಆವರಣಕ್ಕೆ ಬರುತ್ತಿದ್ದಂತೆಯೇ ಸಚಿವರು ಕುದುರೆ ಕಟ್ಟುವ ಲಾಯಗಳನ್ನು ಪರಿಶೀಲಿಸಿದರು. ಅಲ್ಲದೇ ಕುದುರೆಗಳ ಪಾಲನೆಗಾಗಿ ಅಲ್ಲಿಯೇ ವಾಸ್ತವ್ಯ ಇರುವ ಸಿಬ್ಬಂದಿಗಳ ಮನೆಗಳ ಕಟ್ಟಡ, ಶೌಚಾಲಯ, ಕುದುರೆಗಳನ್ನು ತೊಳೆಯುವ ಜಾಗ, ಅವುಗಳ ಲದ್ದಿಯನ್ನು ಸಂಗ್ರಹಿಸಿರುವ ಜಾಗ ಪರಿಶೀಲಿಸಿ ನಗರ ಪಾಲಿಕೆ ಅಧಿಕಾರಿಗಳಿಂದ ಸ್ಪಷ್ಟನೆ ಕೋರಿದರು.

ಈ ವೇಳೆ ನಗರಪಾಲಿಕೆಯ ಸಹಾಯಕ ಆಯುಕ್ತ ಮುರಳೀಧರ್ ಎಂಬುವರು ರೇಸ್ ಕೋರ್ಸ್ ಆಡಳಿತ ಮಂಡಳಿ ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಲು ಮುಂದಾದರು. ಇದರಿಂದ ಕೋಪಗೊಂಡ ಸಚಿವ ಸಾ.ರಾ.ಮಹೇಶ್, ಸಹಾಯಕ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡು ನಿಮಗೆ ಕೆಲಸ ಮಾಡಲು ಆಸಕ್ತಿ ಇಲ್ಲವೇ? ಬಡವರು ಸರ್ಕಾರಕ್ಕೆ ಸೇರಿದ ಸಣ್ಣ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ವೀರಾವೇಶದಿಂದ ತೆರವು ಕಾರ್ಯಾಚರಣೆ ಮಾಡುತ್ತೀರಿ. ಹೃದಯ ಭಾಗದಲ್ಲಿರುವ ಸರ್ಕಾರಿ ಜಾಗದಲ್ಲಿ ನಿಯಮ ಗಾಳಿಗೆ ತೂರಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇವುಗಳ ತೆರವಿಗೆ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದೀರಿ. ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನನಗೆ ಹೇಳಿ, ರಿಲೀವ್ ಮಾಡಿಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಿಂದಲೋ ಬಂದವರು: ರೇಸ್ ಕೋರ್ಸ್‍ನಲ್ಲಿ ಕುದುರೆ ಪಾಲನೆ ಮಾಡಲು ಸುಮಾರು 1800ಕ್ಕೂ ಹೆಚ್ಚು ಮಂದಿ ಅಕ್ರಮವಾಗಿ ನೆಲೆಸಿದ್ದಾರೆ. ಬಿಹಾರ, ಅಸ್ಸಾಂ ಸೇರಿದಂತೆ ಉತ್ತರ ಭಾರತದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿರುವ ಇವರು, ರಾತ್ರಿ ವೇಳೆ ಏನು ಮಾಡುತ್ತಾರೆ ಎಂಬುದು ತಿಳಿದಿಲ್ಲ. ಕುದುರೆ ಸಾಕಲು ರೇಸ್ ಕೋರ್ಸ್‍ನಲ್ಲಿರುವ ಹೊರ ರಾಜ್ಯದವರು ರಾತ್ರಿ ವೇಳೆ ಎಲ್ಲಿಯಾದರೂ ಡಕಾಯಿತಿ ನಡೆಸಿ ಬಂದರೂ ಹೇಳುವವರು-ಕೇಳುವವರು ಇಲ್ಲದಂತಾಗಿದೆ. ಕಾನೂನು-ಸುವ್ಯವಸ್ಥೆ ಹದಗೆಡಲು ಇಲ್ಲಿರುವವರೂ ಕಾರಣವಾಗುವರು ಎಂದು ಆರೋಪಿಸಿದರಲ್ಲದೆ, ನಗರ ಪೊಲೀಸ್ ಆಯುಕ್ತ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಸೂಚನೆ ನೀಡಿ ಇಲ್ಲಿರುವವರನ್ನು ಪರಿಶೀಲಿಸುವಂತೆ ಹೇಳಿದರು.

ಎಲ್ಲಿದೆ ಸ್ವಚ್ಛತೆ: ಮೈಸೂರು ನಗರ ಸ್ವಚ್ಛ ನಗರ ಎಂದು ಹೇಳಿಕೊಳ್ಳುತ್ತೇವೆ. ನಂ.1 ಸ್ಥಾನದಲ್ಲಿದ್ದ ಮೈಸೂರು ಈ ಬಾರಿ 8ನೇ ಸ್ಥಾನಕ್ಕೆ ಕುಸಿದಿದೆ. ರೇಸ್ ಕೋರ್ಸ್‍ನಲ್ಲಿ ಅನೈರ್ಮಲ್ಯದ ವಾತಾವರಣ ಇದೆ. ಇಲ್ಲಿರುವ ಸಿಬ್ಬಂದಿಗಳು ಬಳಸುವ ಶೌಚಾಲಯಕ್ಕೆ ಇಲ್ಲಿಯೇ ಫಿಟ್ ಗುಂಡಿಗಳನ್ನು ತೆಗೆದಿದ್ದಾರೆ ಎಂಬ ಶಂಕೆ ಇದೆ. ಕುದುರೆ ತೊಳೆಯುವ ಇಲ್ಲಿನ ನೌಕರರು ಸ್ನಾನ ಮಾಡುವ ನೀರು ಎಲ್ಲಿಗೆ ಬಿಡುತ್ತಾರೆ ಎಂಬ ಮಾಹಿತಿ ಇಲ್ಲ. ಕುದುರೆ ಲದ್ದಿಗಳನ್ನು ಗಾಲ್ಫ್ ಕ್ಲಬ್ ಪಕ್ಕದ ರಸ್ತೆಯಲ್ಲಿ ರಾಶಿ ಸುರಿಯಲಾಗಿದೆ. ಇದರಿಂದ ಸ್ಥಳೀಯರು ಮತ್ತು ಮೃಗಾಲಯದಲ್ಲಿರುವ ಪ್ರಾಣ ಗಳಿಗೆ ದುಷ್ಪರಿಣಾಮ ಬೀರುತ್ತಿದೆ. ಇವೆಲ್ಲವನ್ನು ಅವಲೋಕಿಸಿದರೆ ಸ್ವಚ್ಛತೆ ಎಲ್ಲಿದೆಯೆಂದು ಹುಡುಕಾಡಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಗುರವಾಗಿ ಪರಿಗಣಿಸಬೇಡಿ: ಪರಿಶೀಲನೆ ವೇಳೆ ಉಪಸ್ಥಿತರಿದ್ದ ಕೆ.ಜಿ.ಅನಂತರಾಜ್ ಅರಸ್ ಅವರಿಗೆ ಸಚಿವ ಸಾ.ರಾ.ಮಹೇಶ್ ಅವರು, ರೇಸ್ ಕೋರ್ಸ್‍ನಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಪ್ರಕ್ರಿಯೆಯಿಂದ ನಾನು ಹಿಂದೆ ಸರಿಯುವುದಿಲ್ಲ. ನಿಮಗೆ ಯಾರಾದರೂ ಭರವಸೆ ನೀಡಬಹುದು, ಆದರೆ ಆ ಭರವಸೆಯನ್ನು ನಿಜವೆಂದು ಭಾವಿಸಿ ಹಗುರವಾಗಿ ಪರಿಗಣಿಸಬೇಡಿ. ನಿಮಗೆ ಮೂರು ತಿಂಗಳು ಗಡುವು ನೀಡಿದ್ದೇನೆ. ಈ ಅವಧಿಯೊಳಗೆ ಅಕ್ರಮ ಕಟ್ಟಡ ತೆರವು ಮಾಡಬೇಕು. ಪ್ರತೀ ದಿನ ರೇಸ್‍ನಲ್ಲಿ ಪಾಲ್ಗೊಳ್ಳುವ ಕುದುರೆಯನ್ನು ಮಾತ್ರ ರೇಸ್ ಕ್ಲಬ್‍ನಲ್ಲಿ ಇಡುವುದಕ್ಕೆ ಅವಕಾಶ ನೀಡಲಾಗುತ್ತದೆ. ನಗರದಿಂದ 6-7 ಕಿ.ಮೀ. ದೂರದಲ್ಲಿ ಭೂಮಿಯೊಂದನ್ನು ತೆಗೆದುಕೊಂಡು ಅಲ್ಲಿ ಕುದುರೆಗಳನ್ನು ಇಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ರೇಸ್‍ಗೆ ಅಲ್ಲಿಂದಲೇ ಕುದುರೆಗಳನ್ನು ಕರೆತಂದು ರೇಸ್ ಮುಗಿದ ನಂತರ ಆ ಸ್ಥಳಕ್ಕೆ ಕುದುರೆಗಳನ್ನು ವಾಪಸ್ಸು ಕರೆದೊಯ್ಯುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮೈಸೂರು ಉಪ ವಿಭಾಗಾಧಿಕಾರಿ ಹೆಚ್.ಎನ್.ಶಿವೇಗೌಡ, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ನಗರ ಪೊಲೀಸ್ ಆಯುಕ್ತ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಯುವಜನಾಧಿಕಾರಿ ಲೋಕನಾಥ್, ಮಾಜಿ ಮೇಯರ್‍ಗಳಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಜಿಪಂ ಮಾಜಿ ಸದಸ್ಯ ದ್ವಾರಕೀಶ್, ಮುಖಂಡ ರಾಮು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮೂರು ತಿಂಗಳು ಗಡುವು ನೀಡಿದ್ದೇನೆ

ರೇಸ್ ಕೋರ್ಸ್‍ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲು ಮೂರು ತಿಂಗಳ ಕಾಲ ಗಡುವು ನೀಡಲಾಗಿದೆ. ಈ ಹಿಂದೆ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‍ಗಳ ತೆರವಿಗೆ ಜೂ.30ರಂದು ಗಡುವು ನೀಡಲಾಗಿತ್ತು. ಇದರಿಂದ ಈಗಾಗಲೇ ರೇಸ್ ಕೋರ್ಸ್ ಆಡಳಿತ ಮಂಡಳಿಯೇ ಕೆಲವು ಶೆಡ್‍ಗಳನ್ನು ತೆರವು ಮಾಡಿತ್ತು. ಇಂದು ಪರಿಶೀಲನೆ ಮಾಡಿದ ವೇಳೆ ಹಲವು ಶೆಡ್‍ಗಳು ಅಕ್ರಮವಾಗಿ ತಲೆ ಎತ್ತಿರುವುದು ಕಂಡು ಬಂದಿದೆ. ಅವುಗಳನ್ನು ತೆರವುಗೊಳಿಸಲು ರೇಸ್ ಕೋರ್ಸ್ ಆಡಳಿತ ಮಂಡಳಿಗೆ ಕಾಲಾವಕಾಶ ನೀಡಲಾಗಿದೆ. ಮೂರು ತಿಂಗಳ ನಂತರವೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಕಾನೂನಿನಂತೆ ಕ್ರಮ ಕೈಗೊಳ್ಳುವುದಾಗಿ ಸಚಿವ ಸಾ.ರಾ.ಮಹೇಶ್ ಎಚ್ಚರಿಸಿದರು.

2006ರಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ಆಗ ಕೇವಲ ಶಾಸಕನಾಗಿದ್ದೆ. ಸ್ಥಳಾಂತರಕ್ಕೆ ಒತ್ತಾಯಿಸಿ ನಡೆಸಿದ ಹೋರಾಟವನ್ನು ರೇಸ್ ಕ್ಲಬ್‍ನ ಸದಸ್ಯತ್ವ ನೀಡಲಿಲ್ಲ ಎಂಬ ಕಾರಣದಿಂದ ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ನನಗೆ ಯಾವ ಕ್ಲಬ್‍ನ ಸದಸ್ಯತ್ವವೂ ಬೇಡ. ನಗರದ ಮಧ್ಯ ಭಾಗದಲ್ಲಿರುವ ಸರ್ಕಾರಿ ಆಸ್ತಿಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸುವ ಏಕೈಕ ಗುರಿ ನನ್ನ ಮುಂದೆ ಇದೆ. ಇದರಿಂದ ರೇಸ್ ಕೋರ್ಸ್ ಸ್ಥಳಾಂತರ ಮಾಡಿ, ಆ ಸ್ಥಳದಲ್ಲಿ ದೇಶದಲ್ಲಿಯೇ ಇಲ್ಲದಂತಹ ಉದ್ಯಾನವನ ನಿರ್ಮಿಸಿ ಮೈಸೂರಿನ ಜನತೆಗೆ ಕೊಡುಗೆ ನೀಡಬೇಕೆಂದು ನನಗೆ ಬಯಕೆಯಾಗಿದೆ ಎಂದರು.

Translate »