ಇಂದು ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಆರಂಭ
ಮೈಸೂರು

ಇಂದು ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಆರಂಭ

July 2, 2018
  •  ಜು.12ರವರೆಗೆ ನಡೆಯಲಿರುವ ಅಧಿವೇಶನ
  • ಜು.5ರಂದು ಬಜೆಟ್ ಮಂಡನೆ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ನಾಳೆ (ಜು.2)ಯಿಂದ ಆರಂಭವಾಗಲಿದೆ. ಜು.12ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜು.5ರಂದು ಬಜೆಟ್ ಮಂಡಿಸಲಿದ್ದಾರೆ.

ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಘೋಷಣೆ ಮಾಡಲಿದ್ದಾರೆ. ಒಟ್ಟು 53 ಸಾವಿರ ಕೋಟಿ ರೈತರ ಸಾಲ ಪೈಕಿ ಸುಮಾರು 28 ಸಾವಿರ ಕೋಟಿಯಷ್ಟು ಸಾಲ ಮನ್ನಾ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 50 ಲಕ್ಷಕ್ಕೂ ಮೇಲ್ಪಟ್ಟು ಮಾಡಿರುವ ಸಾಲವನ್ನು ಮನ್ನಾ ಮಾಡಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆ ಆಧಾರದ ಮೇರೆಗೆ ಸಂಸದ ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಕನಿಷ್ಠ ಸಾಮಾನ್ಯ ಕಾರ್ಯಕ್ರಮ ಸಮಿತಿ ನೀಡಿರುವ ವರದಿಯನ್ನು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಸಮನ್ವಯ ಸಮಿತಿ ಅಂಗೀಕರಿಸಿದ್ದು, ಅದರಂತೆ ಬಜೆಟ್ ರೂಪು-ರೇಷೆ ಸಿದ್ಧವಾಗುತ್ತಿದೆ.

ನಾಳೆ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಮೈತ್ರಿ ಸರ್ಕಾರದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಸರ್ಕಾರದಲ್ಲಿನ ಸಮನ್ವಯ ಕೊರತೆ, ಮೈತ್ರಿ ಪಕ್ಷಗಳಲ್ಲಿನ ಭಿನ್ನಾಭಿಪ್ರಾಯ, ಇತ್ತೀಚೆಗೆ ಉಂಟಾದ ಕಾಂಗ್ರೆಸ್ ಪಕ್ಷದ ಭಿನ್ನಮತ ವಿಚಾರಗಳು ವಿಪಕ್ಷ ಬಿಜೆಪಿಗೆ ಆಹಾರವಾಗಲಿದೆ. ಅಲ್ಲದೇ ಕಾನೂನು-ಸುವ್ಯವಸ್ಥೆ, ಬೆಂಗಳೂರಿನ ಕಸದ ಸಮಸ್ಯೆ, ಅಧಿಕಾರಿಗಳ ವರ್ಗಾವಣೆ ವಿಚಾರಗಳು ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ.

Translate »