ರಾಜ್ಯದಲ್ಲಿ ಪಕ್ಷ ಬಲಪಡಿಸಲು ಶ್ರಮಿಸುತ್ತೇನೆ: ಹರಿರಾಮ್
ಚಾಮರಾಜನಗರ

ರಾಜ್ಯದಲ್ಲಿ ಪಕ್ಷ ಬಲಪಡಿಸಲು ಶ್ರಮಿಸುತ್ತೇನೆ: ಹರಿರಾಮ್

July 3, 2018

ಚಾಮರಾಜನಗರ:  ‘ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸಲಾಗುವುದು’ ಎಂದು ಪಕ್ಷದ ನೂತನ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಹರಿರಾಮ್ ಹೇಳಿದರು.

ನಗರದ ಕೆ.ಸಿ.ರಂಗಯ್ಯ ಹಾಸ್ಟೆಲ್‍ನ ಪಕ್ಕದಲ್ಲಿರುವ ಸಭಾಂಗಣ ದಲ್ಲಿ ಸೋಮವಾರ ನಡೆದ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ಸಭೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

2017ರ ವಿಧಾನಸಭಾ ಚುನಾವಣೆಯ ನಂತರ ಪಕ್ಷಕ್ಕೆ ಹೊಸ ಉತ್ಸಾಹ, ಹುಮ್ಮಸ್ಸು ಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಿದೆ. ಇದಕ್ಕೆ ಜೆಡಿಎಸ್, ಬಿಎಸ್‍ಪಿ ಮೈತ್ರಿಕಾರಣ ಎಂದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಆದೇಶದ ಮೇರೆಗೆ ರಾಜ್ಯದಲ್ಲಿ ಪಕ್ಷದ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ತಾಲೂಕು ಸಮಿತಿ ವಿಸರ್ಜನೆ ಮಾಡಿ ಪುನರ್ ರಚನೆ ಮಾಡಲಾ ಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪ್ರವಾಸ ಕೈಗೊಂಡು ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪದಾಧಿಕಾರಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ, ಸಮಸ್ಯೆ ಇಲ್ಲದೆ ಹೋದರೆ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಏನಾದರೂ ಪದಾಧಿಕಾರಿಗಳ ಆಯ್ಕೆ ಸ್ಪರ್ಧೆ ಎದುರಾದರೆ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಸಮಿತಿ ರವಾನೆ ಮಾಡಲಾಗುತ್ತದೆ. ಪದಾಧಿಕಾರಿಯಾಗುವವರಿಗೆ ಪಕ್ಷ ನಡೆÀಸುವ ಶಿಬಿರದಲ್ಲಿ ಭಾಗವಹಿಸಬೇಕು ಎಂದರು.

ಮುಂದಿನ ಸ್ಥಳೀಯ ಸಂಸ್ಥೆ, ಲೋಕಸಭಾ ಚುನಾವಣೆಗೆ ಸಜ್ಜಾಗಲು ಪಕ್ಷದ ತಳಮಟ್ಟದಿಂದ ಬಲಿಷ್ಠಗೊಳಿಸಲು ರಾಜ್ಯ ಸಮಿತಿ ಸೇರಿದಂತೆ ಬೂತ್, ತಾಲೂಕು, ಜಿಲ್ಲಾ ಸಮಿತಿಗಳಲ್ಲಿ ಶೇ. 50ರಷ್ಟು ಯುವಕರು, ಶೇ. 50ರಷ್ಟು ಹಿರಿಯ ಅನುಭವಿಗಳಿಗೆ ಸ್ಥಾನಮಾನ ನೀಡಲಾಗುವುದು. ರಾಜ್ಯದಲ್ಲಿ ಪಕ್ಷವನ್ನು ಬೆಂಗಳೂರು, ಮೈಸೂರು, ಗುಲ್ಬರ್ಗಾ ವಿಭಾಗಗಳಾಗಿ ಮಾಡಲಾಗುವುದು. ಹಂತ-ಹಂತವಾಗಿ ಕೆಲಸ ಮಾಡಲಾಗುತ್ತಿದ್ದು, ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಜೆಡಿಎಸ್, ಬಿಎಸ್‍ಪಿ ಮೃತ್ರಿಯಿಂದಾಗಿರುವ ಹೊಸ ಬೆಳವಣಿಗೆಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಬಿಎಸ್‍ಪಿ ಜೊತೆ ಹೊಂದಾಣಿಕೆಗೆ ಮುಂದೆ ಬಂದಿವೆ. ರಾಜ್ಯದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ಅವರಿಗೆ ಇಬ್ಬರು ಸಂಸದರನ್ನು ಕೊಡುಗೆ ನೀಡಿದರೆ ಮಾಯಾವತಿ ಅವರು ಪ್ರಧಾನಿಯಾಗಲಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿನಾಗೇಂದ್ರ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಸಜ್ಜಾಗಬೇಕಿದೆ. ಕರ್ನಾಟಕ ರಾಜ್ಯದಲ್ಲಿ ಬಿಎಸ್‍ಪಿ, ಜೆಡಿಎಸ್ ಮೈತ್ರಿ ಪಕ್ಷಕ್ಕೆ ವರ್ಚಸ್ಸು ತಂದುಕೊಟ್ಟಿದ್ದು, ಇಡೀ ದೇಶದ ಗಮನ ಸೆಳೆದಿದೆ. 2019ರ ಚುನಾವಣೆಯ ದೇಶದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಬಿಜೆಪಿ ಬಿಟ್ಟು ಜೆಡಿಎಸ್, ಕಾಂಗ್ರೆಸ್, ಬಿಎಸ್‍ಪಿ ಹಾಗೂ ಇತರ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಮಾಯಾವತಿಯವರು ಪ್ರಧಾನಿಯಾಗಲಿದ್ದಾರೆ. ಚಾಮರಾಜನಗರ, ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅವಕಾಶವಿದೆ ಎಂದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಾಗಳಿ ರೇವಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಾದೇಶ್‍ಉಪ್ಪಾರ, ಕರಾಟೆ ಸಿದ್ದರಾಜು, ಜಿಲ್ಲಾ ಉಪಾಧ್ಯಕ್ಷ ಕಣ್ಣೇಗಾಲ ಮಹದೇವನಾಯಕ, ಸೋಮಣ್ಣ ಉಪ್ಪಾರ್, ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಬಸವಣ್ಣ ಬ್ಯಾಡಮೂಡ್ಲು, ತಾಲೂಕು ಅಧ್ಯಕ್ಷ ದೌಲತ್‍ಪಾಷ, ಟೌನ್ ಅಧ್ಯಕ್ಷ ಚಿನ್ನಸ್ವಾಮಿ, ಮುಖಂಡರಾದ ಎಸ್.ಪಿ.ಮಹೇಶ್, ಆಲೂರು ಮಲ್ಲು, ಲೋಕೆಶ್, ಶಂಕರಪ್ಪ ರಾಹುಲ್, ಕೃಷ್ಣಯ್ಯ, ಕೃಷ್ಣಮೂರ್ತಿ, ಜಕಾವುಲ್ಲಾ, ಸೋಮೇಶ್, ಶಿವನಂಜಪ್ಪ, ಜಗದೀಶ್ ಇತರರು ಹಾಜರಿದ್ದರು.

Translate »