ಅಪರಿಚಿತ ವಾಹನ ಡಿಕ್ಕಿ, ಪುನುಗು ಬೆಕ್ಕು ಸಾವು
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ, ಪುನುಗು ಬೆಕ್ಕು ಸಾವು

July 3, 2018

ಯಳಂದೂರು: ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪರೂಪದ ಪುನುಗು ಬೆಕ್ಕು ಸಾವನ್ನಪ್ಪಿರುವ ಘಟನೆ ನಡೆದಿದೆ. ನಿಶಾಚಾರಿ ಜೀವಿಯಾಗಿರುವ ಪುನುಗು ಬೆಕ್ಕು ರಾತ್ರಿ ವೇಳೆ ತನ್ನ ಆಹಾರ ಅರಸಿ ಹೋಗುತ್ತದೆ. ಅಂಬಳೆ, ಹೊಮ್ಮ, ಕಂದಹಳ್ಳಿ ಸೇರಿದಂತೆ ಸುವರ್ಣಾವತಿ ನದಿಯ ದಡದಲ್ಲಿ ಹೆಚ್ಚಾಗಿ ಇವು ಕಾಣಸಿಗುತ್ತದೆ. ಜೊತೆಗೆ, ಇಲ್ಲಿ ನವಿಲು, ಚುಕ್ಕೆ ಜಿಂಕೆಗಳು, ಮೊಲ, ಕಾಡು ಅಳಿಲು, ಹಾವು ಸೇರಿದಂತೆ ವಿರಳ ಪ್ರಬೇಧದ ಸರಿಸೃಪಗಳು ಹಾಗೂ ಹಲವು ಕಾಡು ಪ್ರಾಣಿಗಳು ಅಡ್ಡಾಡುತ್ತವೆ. ಆದರೆ, ಅವುಗಳ ಸ್ವಚ್ಛಂದ ಓಡಾಟಕ್ಕೆ ಅಡ್ಡಿಯುಂಟಾಗುತ್ತಿದೆ. ಹಲವು ಪ್ರಾಣಿಗಳು ಅಪರಿಚಿತ ವಾಹನಗಳ ಚಕ್ರಕ್ಕೆ ಸಿಲುಕಿ ಮೃತಪಡುತ್ತ್ತಿವೆ.

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ವಾಹನ ಸಂಚಾರ ಅಧಿಕವಾಗಿರುತ್ತದೆ. ಹಾಗಾಗಿ, ಇಂತಹ ಸಣ್ಣಪುಟ್ಟ ಅಪರೂಪದ ಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಾಣಿಗಳು ಓಡಾಡುವ ಸ್ಥಳಗಳಲ್ಲಿ ಚಾಲಕರು ನಿಧಾನವಾಗಿ ವಾಹನ ಚಲಿಸುವಂತೆ ಸೂಚನಾ ಫಲಕಗಳನ್ನು ಅರಣ್ಯ ಇಲಾಖೆಯವರು ಅಳವಡಿಸ ಬೇಕು. ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಪರಿಸರ ಪ್ರೇಮಿಗಳ ಆಗ್ರಹ.

‘ಬಿಳಿಗಿರಿರಂಗನಬೆಟ್ಟ ಸನಿಹದಲ್ಲಿರುವುದರಿಂದ ಹಾಗೂ ಸುವರ್ಣಾವತಿ ನದಿ ದಡದಲ್ಲಿ ವಿವಿಧ ವೃಕ್ಷ ಸಂಕುಲ ಇರುವುದರಿಂದ ಇಂತಹ ಪ್ರಾಣಿಗಳು ಸಾಮಾನ್ಯವಾಗಿ ಇಲ್ಲಿ ಕಾಣಸಿಗುತ್ತವೆ. ಪುನುಗು ಬೆಕ್ಕು ಅಪರೂಪದ ಜೀವಿಯಾಗಿದೆ. ಸಂಕೋಚ ಸ್ವಭಾವದ ಇದು ರಾತ್ರಿವೇಳೆ ಬೇಟೆಗೆ ಹೊರಡುತ್ತದೆ. ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ ಆಗಾಗ ಇಂತಹ ಘಟನೆಗಳು ಸಂಭವಿಸುತ್ತದೆ. ಚಾಲಕರು ಜಾಗರೂಕ ರಾಗಿ ವಾಹನ ಚಾಲನೆ ಮಾಡಿ ಇಂತಹ ಅಪರೂಪದ ಪ್ರಾಣಿಗಳನ್ನು ಕಾಪಾಡ ಬೇಕು’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವ್ ತಿಳಿಸಿದರು.

Translate »