ಕೊರೊನಾ ಎರಡನೇ ಅಲೆ ಆರ್ಭಟ ಜಾತ್ರೆ, ಮೆರವಣಿಗೆ, ಧರಣಿ, ಹಬ್ಬಕ್ಕೆ ಬ್ರೇಕ್
ಮೈಸೂರು

ಕೊರೊನಾ ಎರಡನೇ ಅಲೆ ಆರ್ಭಟ ಜಾತ್ರೆ, ಮೆರವಣಿಗೆ, ಧರಣಿ, ಹಬ್ಬಕ್ಕೆ ಬ್ರೇಕ್

April 6, 2021

ಮೈಸೂರು, ಏ.5(ಎಂಕೆ)- ರಾಜ್ಯದಲ್ಲಿ ಕೋವಿಡ್-19 2ನೇ ಅಲೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಜಾತ್ರೆ, ಮೆರವಣಿಗೆ, ಧರಣಿ, ಹಬ್ಬಗಳ ಆಚರಣೆ ಮಾಡದಂತೆ ಆದೇಶ ಹೊರಡಿಸಿದೆ. ಈ ಕುರಿತು ಮೈಸೂರು ನಗರದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಲವು ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ಪ್ರಕಾಶ್‍ಗೌಡ ತಿಳಿಸಿದ್ದಾರೆ.

ನಗರದ ಎಲ್ಲಾ ಪೊಲೀಸ್ ಠಾಣೆಗಳ ವತಿಯಿಂದ ನಿರಂತರ ವಾಗಿ ಕೊರೊನಾ ಜಾಗೃತಿ ಜಾಥಾ, ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ ಮಾಸ್ಕ್ ಹಾಕಿಕೊಳ್ಳದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮತ್ತಷ್ಟು ಹೆಚ್ಚಾಗಲಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಮಾಸ್ಕ್ ಬಳಕೆ ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಬೇಕು ಎಂದು ಹೇಳಿದರು.

100 ಮಂದಿ ಹೋಂ ಗಾರ್ಡ್: ಹೆಚ್ಚಿನ ಜನಸಂದಣಿಯಾಗುವ ಸಾರ್ವಜನಿಕ ಸ್ಥಳ ಗಳಲ್ಲಿ ಪೊಲೀಸರ ಜೊತೆಗೆ 100 ಮಂದಿ ಹೋಂ ಗಾರ್ಡ್‍ಗಳನ್ನು ನೇಮಿಸಲಾಗು ವುದು. ಸ್ವಯಂಸೇವಕರೊಂದಿಗೆ ಕೊರೊನಾ ಜಾಗೃತಿ ಮೂಡಿಸಲಾಗುವುದು. ಚಿತ್ರ ಮಂದಿರ, ದೇವಸ್ಥಾನ, ಬಸ್ ನಿಲ್ದಾಣ, ಕಲ್ಯಾಣ ಮಂಟಪಗಳ ಎದುರು ಕೊರೊನಾ ಜಾಗೃತಿ ಮಾಹಿತಿಯುಳ್ಳ ಬ್ಯಾನರ್, ಪ್ಲೆಕ್ಸ್ ಗಳನ್ನು ಹಾಕಲಾಗುವುದು ಎಂದು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

Translate »