ಕೊರೊನಾ ಭೀತಿ: ಕೊನೆಗೂ ಎಚ್ಚೆತ್ತ ಗ್ರಾಮಸ್ಥರು
ಮೈಸೂರು

ಕೊರೊನಾ ಭೀತಿ: ಕೊನೆಗೂ ಎಚ್ಚೆತ್ತ ಗ್ರಾಮಸ್ಥರು

March 27, 2020
  • ಗ್ರಾಮಕ್ಕೆ ದಿಗ್ಭಂದನ
  • ಹೊಸಬರಿಲ್ಲ ಪ್ರವೇಶ
  • ಇಸ್ಪೀಟ್ ಆಡಿದರೆ ಸಾವಿರ ದಂಡ

ಮೈಸೂರು,ಮಾ.27( ಎಂಟಿವೈ)- ಮಹಾಮಾರಿ ಕೊರೊನಾ ಭೀಕರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೊನೆಗೂ ಮುಂಜಾಗ್ರತಾ ಕ್ರಮಕೈಗೊಂಡು ಗ್ರಾಮಕ್ಕೆ ದಿಗ್ಭಂದನ ವಿದಿಸಿದ್ದಾರೆ.

ವಿವಿದ ಕೆಲಸ ಅರಸಿ ಬೆಂಗಳೂರು ಸೇರಿದಂತೆ ನಗರ , ಪಟ್ಟಣಕ್ಕೆ ವಲಸೆ ಹೋಗಿದ್ದ ಹಲವು ಕುಟುಂಬಗಳು ನೊವೆಲ್ ಕೊರೊನಾ ವೈರಸ್ ಗೆ ಹೆದರಿ ಕುಟುಂಬದ ಸದಸ್ಯರೊಂದಿಗೆ ಮರಳಿ ಗ್ರಾಮಗಳತ್ತ ಮುಖಮಾಡುತ್ತಿದ್ದಾರೆ. ಹೊರಗಿನಿಂದ ಬಂದವರು ಕೊರೊನಾ ಸೋಂಕು ಹರಡಿಸಬಹುದೆಂಬ ಭಯದಿಂದ ಇದೀಗ ಗ್ರಾಮಗಳಲ್ಲಿ ದಿಗ್ಭಂದನ ಮಾಡುವ ಕ್ರಮ ಅನುಸರಿಸುತ್ತಿದ್ದಾರೆ. ಇದುವರೆಗೂ ಕೊರೊನಾ ವೈರಸ್ ಹರಡದಂತೆ ಸರ್ಕಾರದ ನಿರ್ದೇಶನ ಪಾಲಿಸುವಲ್ಲಿ ಉದಾಸೀನ ತೋರುತ್ತಿದ್ದ ಗ್ರಾಮಸ್ಥರು ಇದೀಗ ನಗರ ಪ್ರದೇಶದ ಜನರಿಗಿಂತ ನಾವೇ ಮೇಲು ಎಂಬಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ದಾರಿಗೆ ದಾರಿಗೆ ಅಡ್ಡಿ: ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೆಲವೆಡೆ ಕಲ್ಲು, ಮಣ್ಣು, ಮರದ ಕೊಂಬೆಯನ್ನು ಅಡ್ಡ ಇಟ್ಟು ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಮತ್ತೆ ಕೆಲವೆಡೆ ಜೆಸಿಬಿ ಮೂಲಕ ಮೂರು ಅಡಿ ಅಗಲ, ಎರಡು ಅಡಿ ಅಗಲದ ಗುಂಡಿ ತೋಡಲಾಗಿದೆ. ಗ್ರಾಮಕ್ಕೆ ಯಾವುದೇ ವಾಹನಗಳ ಪ್ರವೇಶ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಹೊರಗಿನಿಂದ ಬಂದವರಿಂದ ಅಂತರ: ಕೆಲಸಕ್ಕಾಗಿ ಬೇರೆ ಊರುಗಳಲ್ಲಿ ನೆಲೆಸಿರುವ ಹಲವು ಕುಟುಂಬಗಳು ಕೊರೊನಾ ವೈರಸ್ ಸೋಂಕಿಗೆ ಹೆದರಿ ವಾಪಸ್ಸು ತಮ್ಮ ಸ್ವಗ್ರಾಮಕ್ಕೆ ಬಂದಿದ್ದಾರೆ. ಈಗಾಗಲೇ ಮಾದ್ಯಮಗಳಲ್ಲಿ ಸುದ್ದಿ ನೋಡಿ ಜಾಗೃತರಾಗಿರುವ ಗ್ರಾಮಸ್ಥರು ಇದೀಗ ಹೊರಗಿನಿಂದ ಬಂದವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಜನರೊಂದಿಗೆ ಸೇರದಂತೆ ಸೂಚಿಸಲ‍ಾಗಿದೆ.

ಇಸ್ಪೀಟ್ ಗೆ ಕಡಿವಾಣ: ಯುಗಾದಿ ಹಿನ್ನೆಲೆಯಲ್ಲಿ ವಾರಕ್ಕೂ ಹೆಚ್ಚು ದಿನ ಗ್ರಾಮಗಳಲ್ಲಿ ಇಸ್ಪೀಟ್ ಆಡುವುದು ವಾಡಿಕೆಯಾಗಿದೆ. ಪ್ರತಿವರ್ಷ ನಗರ ಹಾಗೂ ವಿವಿಧೆಡೆಯಿಂದ ಬಂದು ಗ್ರಾಮಗಳಲ್ಲಿ ಇಸ್ಪೀಟ್ ಆಡಿ ಸಾವಿರಾರು ರೂ. ಗೆದ್ದು ವಾಪಸ್ಸಾಗುತ್ತಿದ್ದರು. ಆದರೆ ಈ ಬಾರಿ ಕೊರೊನಾ ವೈರಸ್ ಹರಡುತ್ತದೆ ಎಂಬ ಕಾರಣದಿಂದ ಇಡಿ ಗ್ರಾಮದಲ್ಲೇ ಇಸ್ಪೀಟ್ ಆಡುವುದನ್ನು ನಿರ್ಬಂಧಿಸಲಾಗಿದೆ. ಇಸ್ಪೀಟ್ ಆಡಿದರೆ ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ.

Translate »