ಮಂಡ್ಯ,ಮಾ.11(ನಾಗಯ್ಯ)-ಕೊರೊನಾ ಭೀತಿ ಹಿನ್ನಲೆಯಲ್ಲಿ ಮದ್ದೂರು ಪಟ್ಟಣದ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಮಾಸ್ಕ್, ಗ್ಲೌಸ್ ಧರಿಸಿ ಬರುವಂತೆ ಆಡಳಿತ ಮಂಡಳಿ ಸೂಚಿಸಿದೆ.
ಮದ್ದೂರು ಪಟ್ಟಣ್ಣದಲ್ಲಿರುವ ಸೆಂಟ್ ಆನ್ಸ್ ಕಾನ್ವೆಂಟ್ ಆಡಳಿತ ಮಂಡಳಿ ಈ ಸೂಚನೆ ನೀಡಿದ್ದು ಒಂದು ವೇಳೆ ಮಾಸ್ಕ್, ಗ್ಲೌಸ್ ಧರಿಸಿಕೊಂಡು ಬರದಿದ್ದರೆ ಅಂತಹ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವುದಿಲ್ಲ ಎಂದು ತಿಳಿಸಲಾಗಿದೆ.
ಒಂದರಿಂದ 10ನೇ ತರಗತಿಯವರೆಗೆ ಸುಮಾರು 1 ಸಾವಿರ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆ ಆಡಳಿತ ಮಂಡಳಿಯ ಈ ನಿರ್ಧಾರ ದಿಂದ ವಿದ್ಯಾರ್ಥಿಗಳ ಪೋಷಕರು ಮಾಸ್ಕ್ ಹಾಗೂ ಗ್ಲೌಸ್‍ಗಾಗಿ ಮದ್ದೂರು, ಮಂಡ್ಯ, ಚನ್ನಪಟ್ಟಣ ಸೇರಿದಂತೆ ವಿವಿಧ ಪಟ್ಟಣದ ಮೆಡಿಕಲ್ ಶಾಪ್‍ಗಳಲ್ಲಿ ಹುಡುಕಾಟ ನಡೆಸಿದ್ದು, ಕೆಲವರಿಗೆ ಮಾಸ್ಕ್ ಹಾಗೂ ಗ್ಲೌಸ್ ದೊರೆತರೆ ಕೆಲವರಿಗೆ ಸ್ಟಾಕ್ ಖಾಲಿ ಎಂಬ ಹಿನ್ನೆಲೆಯಲ್ಲಿ ವಾಪಸ್ ಬರುವ ಅನಿವಾರ್ಯತೆ ಉಂಟಾಗಿದೆ.
ಕೆಲ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಗ್ಲೌಸ್ ದೊರೆತಿದ್ದು, ಇಂದಿನ ತರಗತಿಗಳಿಗೆ ಧರಿಸಿ ಬಂದಿದ್ದರೆ ಇನ್ನು ಕೆಲವು ವಿದ್ಯಾರ್ಥಿ ಗಳು ಸ್ಟಾಕ್ ಇಲ್ಲ ನಾಳೆ ಧರಿಸಿ ಬರುವುದಾಗಿ ತಿಳಿಸಿ ಇಂದು ಪರೀಕ್ಷೆಗೆ ಹಾಜರಾದರು.
ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕಿ ಮೀನಾ ಅವರು, ಕೊರೊನಾ ವೈರಸ್ ಅತಿ ಭಯಕಂರವಾದದ್ದು, ವೈರಸ್ ಹರಡ ದಂತೆ ಮುನ್ನೆಚ್ಚರಿಕೆ ಕ್ರಮ ಅಗತ್ಯ. ಹೀಗಾಗಿ ಎಲ್ಲಾ ಮಕ್ಕಳು ಮಾಸ್ಕ್, ಗ್ಲೌಸ್ ಧರಿಸಿ ಖಡ್ಡಾಯವಾಗಿ ಡೆಟಾಲ್ ತರುವಂತೆ ಸೂಚಿಸಲಾಗಿದೆ. ಶೌಚಾಲಾಯಗಳಲ್ಲಿ ಕೈ ತೊಳೆಯಲು ಈಗಾಗಲೇ ಶಾಲೆಯ ವತಿ ಯಿಂದಲೇ ಸಾಬೂನುಗಳನ್ನು ಇಡಲಾ ಗಿದೆ. ಇದು ದೊಡ್ಡ ಶಾಲೆಯಾದ್ದರಿಂದ ಈ ಕ್ರಮ ಅನಿವಾರ್ಯವಾಗಿದೆ. ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಆದೇಶದ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇಂದು ಸಾಕಷ್ಟು ವಿದ್ಯಾರ್ಥಿಗಳು ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ಬಂದಿದ್ದಾರೆ. ಮೆಡಿ ಕಲ್ ಶಾಪ್‍ಗಳಲ್ಲಿ ಸಹ ಸ್ಟಾಕ್ ಇಲ್ಲದೆ ಕೆಲವು ವಿದ್ಯಾರ್ಥಿಗಳು ನಾಳೆ ತರುವುದಾಗಿ ಹೇಳಿ ದ್ದಾರೆ. ಪೋಷಕರಿಗೂ ಸಹ ಈ ವೈರಸ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ವಿದ್ಯಾರ್ಥಿ ಗಳ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಇದರಲ್ಲಿ ಬೇರೆ ಉದ್ದೇಶ ಇಲ್ಲವೆಂದು ತಿಳಿಸಿದರು.
ಯಾವುದೇ ಸೂಚನೆಯನ್ನು ನೀಡಿಲ್ಲ; ಡಿಡಿಪಿಐ ಸ್ಪಷ್ಟನೆ
ಮಂಡ್ಯ,ಮಾ.11(ನಾಗಯ್ಯ)-ಕಡ್ಡಾಯವಾಗಿ ವಿದ್ಯಾರ್ಥಿಗಳು ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ಶಾಲೆಗೆ ಹಾಜರಾಗಬೇಕು ಎಂದು ಜಿಲ್ಲೆಯ ಯಾವ ಶಾಲೆಗೂ ಸೂಚನೆ ನೀಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ರಘುನಂದನ್ ಸ್ಪಷ್ಟಪಡಿಸಿದರು.
ಈ ಸಂಬಂಧ ಮೈಸೂರು ಮಿತ್ರ ಜೊತೆ ಮಾತನಾಡಿದ ಅವರು, ಮಾಸ್ಕ್ ಇಲ್ಲದಿದ್ದರೆ ಕರವಸ್ತ್ರ ಕಟ್ಟಿಕೊಂಡು ಬರ ಬಹುದು. ಗ್ಲೋಸ್ ಹಾಕಿಕೊಂಡು ಬರಬೇಕೆಂದು ತಿಳಿಸಿಲ್ಲ. ಗ್ಲೌಸ್ ಹಾಕಿಕೊಂಡರೆ ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋದಾಗ ಕೈ ತೊಳೆಯುವುದು ಕಷ್ಟವಾಗುತ್ತದೆ. ಮದ್ದೂರಿನ ಸೇಂಟ್‍ಆನ್ಸ್ ಕಾನ್ವೆಂಟ್‍ನ ಆಡಳಿತ ಮಂಡಳಿ ಏಕೆ ಈ ನಿರ್ಧಾರ ಕೈಗೊಂಡಿದೆ ಎಂಬುದು ತಮ್ಮ ಗಮನಕ್ಕೆ ಬಂದಿಲ್ಲ ಎಂದರು.
ಜಿಲ್ಲೆಯಲ್ಲಿ ಒಂದರಿಂದ 6ನೇ ತರಗತಿಯವರೆಗೆ 1606 ಹಾಗೂ 7ರಿಂದ 9ನೇ ತರಗತಿಯವರೆಗೆ 214 ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿವೆ. ಈ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಮುಖ್ಯ ಶಿಕ್ಷಕರಿಗೆ ಕೊರನಾ ವೈರಸ್ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಬಿಸಿ ನೀರಿನಲ್ಲಿ ಕೈತೊಳೆಯಬೇಕು, ಉತ್ತಮ ಆಹಾರ ಸೇವನೆ ಮಾಡಬೇಕು, ಯಾವ ವಿದ್ಯಾರ್ಥಿಗಾದರೂ ಕೆಮ್ಮು, ನೆಗಡಿ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇಂದಿನಿಂದಲೇ ಮಾ. 16ರವರೆಗೆ 1ರಿಂದ 6ನೇ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸಿ ರಜೆ ನೀಡುವಂತೆ ಹಾಗೂ 7 ರಿಂದ 9ನೇ ತರಗತಿಯವರೆಗೆ ಮಾ. 16 ರಿಂದ 23ರವರೆಗೆ ಪರೀಕ್ಷೆ ನಡೆಸಿ ರಜಾ ನೀಡುವಂತೆ ಸೂಚಿಸಲಾಗಿದೆ. ಮುಂದೆ ಈ ಮುಂದೆ ಶಾಲೆಯ ಆರಂಭದ ದಿನಾಂಕವನ್ನು ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿದರು.