ಪರಿಷತ್ ಚುನಾವಣೆ; ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ವೈಯಕ್ತಿಕ ನಿಂದನೆ ಆರೋಪ
ಮೈಸೂರು

ಪರಿಷತ್ ಚುನಾವಣೆ; ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ವೈಯಕ್ತಿಕ ನಿಂದನೆ ಆರೋಪ

December 2, 2021

ಜೆಡಿಎಸ್‌ನಿಂದ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಡಿಸಿಗೆ ದೂರು

ಮೈಸೂರು,ಡಿ.೧(ಪಿಎಂ)-ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ವೈಯಕ್ತಿಕವಾಗಿ ನಿಂದಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚುನಾ ವಣೆಯ ಮಾದರಿ ನೀತಿ ಸಂಹಿತೆ ನಿಯಮ-೨ರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜೆಡಿಎಸ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಬುಧವಾರ ಜೆಡಿಎಸ್ ರಾಜ್ಯ ವಕ್ತಾರರೂ ಆದ ಪಕ್ಷದ ಕಾನೂನು ಘಟಕದ ಮುಖ್ಯಸ್ಥ ಎನ್.ಆರ್.ರವಿಚಂದ್ರೇಗೌಡ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಕೆ.ವಿ.ಮಲ್ಲೇಶ್, ವಿ. ಶೈಲೇಂದ್ರ ಅವರು ಜಿಲ್ಲಾಧಿಕಾರಿ
ಡಾ.ಬಗಾದಿ ಗೌತಮ್ ಅವರಿಗೆ ದೂರು ಸಲ್ಲಿಸಿದರು. ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕರೂ ಆದ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆ ಮಾಡುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜೇಗೌಡ ಅವರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಕಿಡ್ನಿ ಮಾರಾಟ ಮಾಡುತ್ತಿದ್ದರು ಹಾಗೂ ಒಂದೇ ನಿವೇಶನವನ್ನು ನಾಲ್ವರಿಗೆ ಮಾರಾಟ ಮಾಡುತ್ತಿದ್ದರು ಎಂದು ಆಧಾರವಿಲ್ಲದ ಆರೋಪ ಮಾಡುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ. ಅಲ್ಲದೆ, ಈ ರೀತಿಯ ವೈಯಕ್ತಿಕ ಟೀಕೆಯು ಚುನಾವಣಾ ಮಾದರಿ ನೀತಿ ಸಂಹಿತೆಯ ನಿಯಮ ೨ರ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಎಸ್.ಟಿ.ಸೋಮಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೂರಿನಲ್ಲಿ ಕೋರಲಾಗಿದೆ. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಆರ್. ರವಿಚಂದ್ರೇಗೌಡ, ಚುನಾವಣಾ ಪ್ರಚಾರ ಸಭೆಯಲ್ಲಿ ಎಸ್.ಟಿ.ಸೋಮಶೇಖರ್ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯ ನಿಯಮ ೨ರ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಮಂಜೇಗೌಡರ ತೇಜೋವಧೆ ಮಾಡಬೇಕೆಂಬ ಏಕೈಕ ಕಾರಣದಿಂದ ವೈಯಕ್ತಿಕ ಟೀಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ನಮ್ಮ ಪಕ್ಷದ ಅಭ್ಯರ್ಥಿಯನ್ನು ಯಾವ ರೀತಿಯಲ್ಲದರೂ ಸೋಲಿಸಬೇಕೆಂಬ ದುರುದ್ದೇಶದಿಂದ ಅವರ ಬಗ್ಗೆ ಕಿಡ್ನಿ ಮಾರಾಟ ಮಾಡುತ್ತಿದ್ದರು ಮತ್ತು ಒಂದೇ ಸೈಟ್ ಅನ್ನು ನಾಲ್ವರಿಗೆ ಮಾರಾಟ ಮಾಡುತ್ತಿದ್ದರು ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದು ಆಧಾರರಹಿತ ಹೇಳಿಕೆ. ಒಂದು ವೇಳೆ ಅವರು ಆಧಾರಸಹಿತ ಹೇಳಿಕೆ ಕೊಟ್ಟಿದ್ದರೆ ಒಪ್ಪಿಕೊಳ್ಳಬಹುದು. ಆಕಸ್ಮಾತ್ ಅವರು ಆರೋಪಿಸುವಂತೆ ಮಂಜೇಗೌಡರು ತಪ್ಪೇ ಮಾಡಿದ್ದರೂ ಮಾದರಿ ಚುನಾವಣೆ ನೀತಿ ಸಂಹಿತೆ ನಿಯಮ ೨ರಂತೆ ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಹೀಗೆ ಟೀಕೆ ಮಾಡುವಂತಿಲ್ಲ. ಮಂಜೇಗೌಡ ಒಬ್ಬ ಮಾಜಿ ಯೋಧರು. ಅವರ ಬಗ್ಗೆ ಈ ರೀತಿ ಅವಹೇಳಕಾರಿ ಮಾತನಾಡಿರುವುದು ಎಸ್.ಟಿ.ಸೋಮಶೇಖರ್ ಅವರಿಗೆ ಶೋಭೆಯಲ್ಲ ಎಂದು ಕಿಡಿಕಾರಿದರು.

ಈಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಎಫ್‌ಐಆರ್ ದಾಖಲಿಸುವಂತೆ ದೂರು ನೀಡಿದ್ದೇವೆ. ಅವರ ಆರೋಪ ಸಂಬAಧ ದಾಖಲೆ ಇದ್ದರೂ ಈ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವಂತಿಲ್ಲ. ದಾಖಲೆ ಇದ್ದರೆ, ಚುನಾವಣೆ ಘೋಷಣೆ ಪೂರ್ವದಲ್ಲೇ ಮಾಡಬಹುದಿತ್ತು. ಚುನಾವಣೆ ಸಂದರ್ಭದಲ್ಲೇ ದಾಖಲೆ ಬಿಡುಗಡೆ ಮಾಡಿದರೆ ಅದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಕಳೆದ ಅವಧಿಯ ಪರಿಷತ್ ಸದಸ್ಯರು ನಮ್ಮ ಪಕ್ಷದವರೇ ಇದ್ದು, ಹೀಗಾಗಿ ಇವರ ಗೆಲುವು ಸುಲಭವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೀಗೆ ಅಪಪ್ರಚಾರ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿದರು.

 

Translate »