ಕೃಪೆ ತೋರಿದ ವರುಣ: ಕೃಷಿ ಚಟುವಟಿಕೆ ಆರಂಭ
ಹಾಸನ

ಕೃಪೆ ತೋರಿದ ವರುಣ: ಕೃಷಿ ಚಟುವಟಿಕೆ ಆರಂಭ

July 9, 2019

* ಸಕಲೇಶಪುರದಲ್ಲಿ ಜೂನ್‍ನಲ್ಲಿ ಶೇ.30 ಕಡಿಮೆ ಮಳೆ; ಜುಲೈನಲ್ಲಿ ಚುರುಕು
* ಹೇಮಾವತಿ ನದಿಯಲ್ಲಿ ಹೆಚ್ಚಿದ ಒಳ ಹರಿವು-ಅಣೆಕಟ್ಟೆ ನೀರಿನ ಮಟ್ಟ ಏರಿಕೆ
ಹಾಸನ, ಜು.8- ಮುಂಗಾರು ಈ ಬಾರಿ ತಡವಾಗಿ ಆಗಮಿಸಿದರೂ, ಈಗ 2-3 ದಿನಗಳಿಂದ ಜಿಲ್ಲೆಯ ಕೆಲವೆಡೆ ಉತ್ತಮ ಮಳೆ ಸುರಿಸುತ್ತಿದೆ. ಮುಖ್ಯವಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಕಳೆದ 3 ದಿನಗಳಿಂದ ಸಕಲೇಶಪುರ ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾ ಗುತ್ತಿದೆ. ಕೊನೆಗೂ ಮುನಿಸು ಕೈಬಿಟ್ಟು ಅವತರಿಸಿದ ವರುಣನನ್ನು ಹರ್ಷದಿಂದ ಬರಮಾಡಿಕೊಂಡಿರುವ ತಾಲೂಕಿನ ರೈತರು ಖುಷಿಯಿಂದಲೇ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವೆಡೆ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ.

ನೈರುತ್ಯ ಮುಂಗಾರು ಮಾರುತಗಳು ಕೇರಳ ರಾಜ್ಯವನ್ನು ಜೂನ್ ತಿಂಗಳಲ್ಲೇ ಪ್ರವೇಶಿಸಿದ್ದರೂ ಕರ್ನಾಟಕದ ಕರಾವ ಳಿಗೆ ಬರುವಾಗ, ಬಳಿಕ ಮಲೆನಾಡಿಗೆ ಅವ ತರಿಸುವಾಗ ತಡವಾಯಿತು. ಜೂನ್‍ನಲ್ಲಿ 1,882 ಮಿ.ಮೀ. ವಾಡಿಕೆ ಮಳೆಯಾಗಬೇಕಿ ದ್ದರೂ ಈ ಬಾರಿ 1,318 ಮಿ.ಮೀ. ನಷ್ಟು (ಶೇ.30 ಕಡಿಮೆ) ಮಳೆಯಾಗಿತ್ತು. ಪರಿ ಣಾಮ ಜೂನ್‍ನಲ್ಲಿ ಹೇಮಾವತಿಯ ಒಳ ಹರಿವಿನ ಪ್ರಮಾಣ ಕಡಿಮೆಯಿತ್ತು.

ಜುಲೈ ಆರಂಭವಾದರೂ ಕಾಫಿಯ ನಾಡಿನಲ್ಲಿ ಉತ್ತಮ ಮಳೆಯಾಗದ್ದರಿಂದ ಭತ್ತದ ನಾಟಿ ಕಾರ್ಯ ಆರಂಭಗೊಂಡಿರ ಲಿಲ್ಲ. ಕಳೆದ 3 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹೇಮಾವತಿ ನದಿ ಯಲ್ಲಿ ನೀರಿನ ಮಟ್ಟ ನಿಧಾನವಾಗಿ ಏರು ತ್ತಿದೆ. ಸತತ ಮಳೆಯಿಂದ ಹರ್ಷಗೊಂಡಿ ರುವ ಕೃಷಿಕರು, ಭತ್ತದ ನಾಟಿಯಲ್ಲಿ ಪೂರ್ಣ ಮಗ್ನರಾಗಿದ್ದಾರೆ.

ಅಣೆಕಟ್ಟೆಗೆ ನೀರು: ಮುಂಗಾರು ಮಳೆ ವಿಳಂಬದಿಂದ ಸೃಷ್ಟಿಯಾಗಿದ್ದ ಆತಂಕ ಈಗ ಮಲೆನಾಡಿನಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ದೂರವಾಗಿದೆ. ಹೇಮಾ ವತಿ ಉಗಮ ಸ್ಥಾನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗು ತ್ತಿದ್ದು, ಜಲಾಶಯಕ್ಕೆ 3 ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. 37.103 ಟಿಎಂಸಿ ಅಡಿ ನೀರು ಸಂಗ್ರಹ ಸಾಮಥ್ರ್ಯದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಲಾರಂಭಿಸಿದೆ. ಜು.4ರಲ್ಲಿ 5.93 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದ ಜಲಾಶಯದಲ್ಲಿ, ಜು.5ರ ವೇಳೆಗೆ ನೀರಿನ ಮಟ್ಟ 6.23 ಟಿಎಂಸಿ ಅಡಿಗೆ, ಜು.6ರಂದು 6.52 ಟಿಎಂಸಿ ಅಡಿಗೆ ಏರಿಕೆ ಕಂಡಿತು. ಜು.7 ರಂದು ಅಣೆಕಟ್ಟೆಗೆ ಒಳಹರಿವು 9814 ಕ್ಯೂಸೆಕ್‍ಗೆ ಹೆಚ್ಚಿದ್ದರಿಂದ ಭಾನುವಾರದ ವೇಳೆಗೆ ಅಣೆಕಟ್ಟೆಯ ನೀರಿನ ಮಟ್ಟ 7.35 ಟಿಎಂಸಿ ಅಡಿಗೆ ಮುಟ್ಟಿದೆ.

ನಾಲೆಗಳಿಗೆ `ಕಾವೇರಿ’ ನೀರು: ರೈತರ ಒತ್ತಾಯ
ರಾಮನಾಥಪುರ, ಜು.8- ತಲಕಾವೇರಿಯಲ್ಲಿ ಉತ್ತಮ ಮಳೆಯಾಗಿ ಕೊಡಗಿನಿಂದ ಕಾವೇರಿ ನದಿಯಲ್ಲಿ ಜೋರಾಗಿ ನೀರು ಹರಿಯುತ್ತಿದೆ. ಹಾಗಾಗಿ ನದಿ ವ್ಯಾಪ್ತಿಯ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ನಾಲೆಗಳಿಗೆ ನೀರು ಬಿಟ್ಟು ಈ ಭಾಗದ ಕೆರೆ-ಕಟ್ಟೆಗಳಿಗೆ ನೀರು ಹಾಯಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಕಳೆದ 3 ವರ್ಷಗಳಿಂದ ತಾಲೂಕಿ ನಲ್ಲಿ ಬರಗಾಲವಿದೆ. ಕೆಲವೆಡೆ ಕುಡಿಯುವ ನೀರಿಗೂ ಕಷ್ಟ ಎದುರಾಗಿದೆ. ಹಲವೆಡೆ ಮಳೆ ಇಲ್ಲದೇ ವ್ಯವಸಾಯಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಭಾವಿಗಳೂ ಬತ್ತಿಹೋಗಿವೆ. ಅದ್ದರಿಂದ ಕಾವೇರಿ ನದಿಯಿಂದ ಕಟ್ಟೇಪುರ, ಹಾರಂಗಿ ನಾಲೆಗಳು ಮತ್ತು ಕರಡಿಲಕ್ಕನಕಟ್ಟೆಯ ಸೀಳು ನಾಲೆಗೆ ನೀರು ಬಿಟ್ಟು, ಈ ಭಾಗದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕು ಎಂದು ಈ ಭಾಗದ ರೈತರು ಶಾಸಕ ಎ.ಟಿ.ರಾಮಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.

Translate »