ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಹಾಸನ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

July 9, 2019

ಹಾಸನ: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ (ಎಐಯು ಟಿಯುಸಿ) ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ಸೋಮವಾರ ಬೆಳಿಗ್ಗೆ ನಗರದ ಕಲಾಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಆಶಾ ಕಾರ್ಯಕರ್ತೆಯರು ಎನ್.ಆರ್.ವೃತ್ತ ಮೂಲಕ ಡಿಸಿ ಕಚೇರಿ ಆವರಣಕ್ಕೆ ಬಂದರು. ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರೋತ್ಸಾಹಧನ ಒಟ್ಟು ಸೇರಿಸಿ ಮಾಸಿಕ 12 ಸಾವಿರ ರೂ. ಗೌರವಧನ ನಿಗದಿಪಡಿಸಬೇಕು. ಆಶಾ ಸಾಫ್ಟ್ ಇಲ್ಲವೇ ಆರ್.ಸಿ.ಹೆಚ್ ಪೋರ್ಟಲ್‍ಗೆ ಆಶಾ ಪ್ರೋತ್ಸಾಹಧನ ಜೋಡಣೆ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

10 ತಿಂಗಳಿನಿಂದ ಬಾಕಿ ಇರುವ ಎಂಸಿಟಿಎಸ್ ಸೇವೆಗಳ ಪ್ರೋತ್ಸಾಹಧನವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಬಾಕಿ ಪ್ರೋತ್ಸಾಹಧನವನ್ನು ಒಂದೇ ಗಂಟಿನಲ್ಲಿ ನೀಡಬೇಕು. ಹಿಂದಿನ ಆರೋಗ್ಯ ಸಚಿವರು ನೀಡಿದ ಭರವಸೆ ಈಡೇರಿಸಬೇಕು. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ, ಮಾರಣಾಂತಿಕ ಖಾಯಿಲೆ ಚಿಕಿತ್ಸೆಗೆ, ಕಾರ್ಯಕರ್ತೆ ಮಡಿದರೆ ಕುಟುಂಬಕ್ಕೆ ಪರಿಹಾರ, ಕಾರ್ಪಸ್ ಫಂಡ್ ಮೀಸಲು ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರಧಾನ ಮಂತ್ರಿ ಜೀವನಜ್ಯೋತಿ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಕೂಡಲೇ ಜಾರಿಗೊಳಿಸಿ ಪೂರ್ಣ ವಿಮೆ ಕಂತನ್ನು ಸರಕಾರವೇ ಭರಿಸಬೇಕು. ಕಾರ್ಯಕರ್ತೆಯರಿಗೆ ಹೆರಿಗೆ ರಜೆ ನೀಡಿ, ಗೌರವಧನವನ್ನೂ ಪಾವತಿಸ ಬೇಕು. ಪ್ರತಿದಿನದ ಸರ್ವೆ, ಜಾಥಾ, ತಾಲೂಕು ಕೇಂದ್ರದ ಸಭೆಗೆ ಹಾಜರಿಗೆ ಕನಿಷ್ಠ 300 ರೂ. ನಿಗದಿಪಡಿಸಿ ಅಂದೇ ಪಾವತಿಸಬೇಕು. ಆಶಾ ಕುಂದುಕೊರತೆ ನಿವಾರಣೆ ಸಭೆಯನ್ನು ಸಂಘದ ಪದಾಧಿಕಾರಿಗಳ ಜೊತೆ 3 ತಿಂಗಳಿಗೊಮ್ಮೆ ನಡೆಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷೆ ಮಮತಾ, ಜಿಲ್ಲಾ ಕಾರ್ಯದರ್ಶಿ ಪುಷ್ಪಲತಾ, ಜಿಲ್ಲಾ ಸಲಹೆಗಾರ ಜಿ.ಹನುಮಾನ್ ಸೇರಿದಂತೆ ನೂರಾರು ಕಾರ್ಯಕರ್ತೆಯರು ಹಾಜರಿದ್ದರು.

Translate »