ಮೇ 31ರವರೆಗಿನ ಬೆಳೆ ಸಾಲ ಮನ್ನಾ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ನಿರ್ಧಾರ
ಮೈಸೂರು

ಮೇ 31ರವರೆಗಿನ ಬೆಳೆ ಸಾಲ ಮನ್ನಾ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ನಿರ್ಧಾರ

June 30, 2018

ಬೆಂಗಳೂರು: ಸಂಸದ ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ರಾಜ್ಯ ಬಜೆಟ್‍ಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ಅಂತಿಮಗೊಳಿಸಿದೆ ಎಂದು ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

2018ರ ಮೇ 31ಕ್ಕೆ ಅನ್ವಯವಾಗುವಂತೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲ ಮನ್ನಾ ಸೇರಿದಂತೆ ಹಲವಾರು ವಿಷಯಗಳನ್ನು ಸರ್ವಾನುಮತದಿಂದ ಅಂತಿಮಗೊಳಿಸಿ ವರದಿ ಸಿದ್ಧಪಡಿಸಲಾಗಿದೆ. ಕಾರ್ಯಕ್ರಮಗಳಿಗೆ ಹಣಕಾಸು ಹೊಂದಾಣಿಕೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಮಾಡಿಕೊಳ್ಳಬೇಕಾಗುತ್ತದೆ. ಸಮಿತಿಯ ವರದಿಯನ್ನು ನಾಳೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದ ಅವರು, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯ ವರದಿ ಆಧಾರದ ಮೇರೆಗೆ ರಾಜ್ಯ ಬಜೆಟ್ ರೂಪು-ರೇಷೆ ಸಿದ್ಧಪಡಿಸಲು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ತೀರ್ಮಾನಿಸಿದೆ. ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನಾ ದಿನ ಅಂದರೆ ಜುಲೈ 1ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಮನ್ವಯ ಸಮಿತಿಯ ಸಂಚಾಲಕ ಡ್ಯಾನಿಷ್ ಅಲಿ ಭಾಗವಹಿಸಲಿದ್ದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ನೀಡಿರುವ ವರದಿ ಆಧಾರದ ಮೇರೆಗೆ ಚರ್ಚೆ ನಡೆಸಿ ಬಜೆಟ್ ರೂಪು-ರೇಷೆಗಳನ್ನು ಸಿದ್ಧಪಡಿಸಲಿದ್ದಾರೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜುಲೈ 5ರಂದು ಬಜೆಟ್ ಮಂಡಿಸಲಿದ್ದಾರೆ.

Translate »