ಕೊಡಗು ಮಾರ್ಗ ತಲಚೇರಿ-ಮೈಸೂರು ರೈಲ್ವೆ ಮಾರ್ಗ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದ ಕೇರಳ
ಮೈಸೂರು

ಕೊಡಗು ಮಾರ್ಗ ತಲಚೇರಿ-ಮೈಸೂರು ರೈಲ್ವೆ ಮಾರ್ಗ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದ ಕೇರಳ

June 30, 2018
  • ನಾಳೆ ತಿರುವನಂತಪುರಂನಲ್ಲಿ ಟೆಕ್ನಿಕಲ್ ಬಿಡ್ ಓಪನ್
  • ಡಿಪಿಆರ್ ತಯಾರಿಸಲು ವಿದೇಶಿ ಕಂಪನಿಗಳ ಆಸಕ್ತಿ

ಮೈಸೂರು: ಕೊಡಗು ಮತ್ತು ಮೈಸೂರು ಜನತೆ, ಜನಪ್ರತಿನಿಧಿಗಳು, ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಕೇರಳ ಸರ್ಕಾರವು ದಕ್ಷಿಣ ಕೊಡಗಿನ ವನಸಿರಿ ನಾಶಪಡಿಸಿ ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆಗೆ ಡಿಪಿಆರ್ ತಯಾರಿಸಲು ಮುಂದಾಗಿದೆ.

ಕೇವಲ ಕೇರಳ ರಾಜ್ಯಕ್ಕೆ ಮಾತ್ರ ಅನುಕೂಲವಾಗುವ ಈ ಯೋಜನೆಗೆ ಸಮಗ್ರ ಯೋಜನಾ ವರದಿ (DPR) ತಯಾರಿಸಲು ಹಲವು ವಿದೇಶಿ ಕಂಪನಿಗಳು ಆಸಕ್ತಿ ತೋರಿಸಿವೆ. ತಿರುವನಂತಪುರಂನಲ್ಲಿ ನಾಳೆ (ಜೂ.29) ತಾಂತ್ರಿಕ ಬಿಡ್ ಓಪನ್ ಆಗಲಿದೆ.

ಮಾನಂದವಾಡಿ, ಕುಟ್ಟ, ಕಾನೂರು, ಬಾಳೆಲೆ, ತಿತಿಮತಿ ಮತ್ತು ಆನೆಚೌಕೂರು ಮಾರ್ಗವಾಗಿ ತಲಚೇರಿ ಮತ್ತು ಮೈಸೂರು ರೈಲ್ವೆ ಹಳಿ ಮಾರ್ಗ 181 ಕಿ.ಮೀ. ಯೋಜನೆಗೆ 5 ಸಾವಿರದ 3 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ.

ಕೇರಳ ಸರ್ಕಾರವು ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಆದೇಶಿಸಿದೆ ಎಂದು ತಿರುವನಂತಪುರಂ ಮೂಲಕ ವರದಿಯನ್ನು ರಾಷ್ಟ್ರಮಟ್ಟದ ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಲಾಗಿದೆ. ಕೇರಳ ರೈಲ್ವೇ ಅಭಿವೃದ್ಧಿ ನಿಗಮ ನಿಯಮಿತದ (KRDCL) ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಸೇರಿದಂತೆ ರೈಲ್ವೆ ಇಲಾಖೆ ಮತ್ತು ಕೇರಳ ಸರ್ಕಾರ ವೆಚ್ಚ ಭರಿಸಿ, ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಲಾಗಿದೆ.

ನಗರ ಸಾರಿಗೆ ಮತ್ತು ರೈಲ್ವೆ ಕ್ಷೇತ್ರ ಇಂಟರ್‍ನ್ಯಾಷನಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅನುಭವವಿರುವ ಹಲವು ಕಂಪನಿಗಳು ರೈಲ್ವೆ ಹಳಿ ಮಾರ್ಗದ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಮುಂದೆ ಬಂದಿವೆ ಎಂದು ತಿಳಿದು ಬಂದಿದೆ.

ಕೆಆರ್‍ಡಿಸಿಎಲ್ ಎಕ್ಸ್‍ಪ್ರೆಷನ್ ಆಫ್ ಇಂಟರೆಸ್ಟ್ ಫ್ಲೋಟ್ ಮಾಡುತ್ತಿದ್ದಂತೆಯೇ ಹೈದರಾಬಾದ್ ಮೂಲದ ಆರ್‍ವಿ ಅಸೋಷಿಯೇಟ್ಸ್, ಸ್ಪೇನ್ ದೇಶದ Iಓಇಅಔ, ಡೆಲ್ಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡ್ ಟ್ರಾನ್ಸಿಟ್ ಸಿಸ್ಟಮ್ (DIMTS) ಹಾಗೂ ಇಟಲಿಯ ಜಿಯೋಡೆಟಾ ಕಂಪನಿಗಳು ಸಮಗ್ರ ಯೋಜನಾ ವರದಿ (DPR) ತಯಾರಿಸಲು ತುದಿಗಾಲಲ್ಲಿ ನಿಂತಿವೆ.

ಜರ್ಮನಿಯ ರಾಂಬೋಲ್ ಅಂಡ್ ಪ್ರೈಸ್‍ವಾಚರ್ ಹೌಸ್ ಕೂಪರ್ಸ್ ಮತ್ತು ಪ್ಯಾರಿಸ್‍ನ ನಿಟ್ರಾದಂತಹ ಅರ್ಬನ್ ಹೈ-ಸ್ಪೀಡ್ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಶ್ವಮಟ್ಟದ ಖ್ಯಾತಿ ಪಡೆದಿರುವ ಕಂಪನಿಗಳಲ್ಲೂ ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆಗೆ ಡಿಪಿಆರ್ ತಯಾರಿಸಲು ಸ್ಪರ್ಧೆಗಿಳಿದಿದೆ.

ಆಶ್ಚರ್ಯವೆಂದರೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಮತ್ತು ರೈಲ್ವೆ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸ್ (RITES) ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡಿಲ್ಲ. ಇತ್ತೀಚೆಗಷ್ಟೇ ದಕ್ಷಿಣ ಕೊಡಗಿನಲ್ಲಿ ಅರಣ್ಯ ಭೂಮಿ ಸಮೀಕ್ಷೆ ನಡೆಸಿದ ಕೊಂಕಣ ರೈಲ್ವೆ ನಿಗಮದ ಅಧಿಕಾರಿಗಳಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದೆ ಬಂದಿರುವ ಕಂಪನಿಗಳ ಪೈಕಿ ಒಂದನ್ನು ರೈಲ್ವೆ ಹಳಿ ಮಾರ್ಗಕ್ಕೆ ಡಿಪಿಆರ್ ಸಿದ್ಧಪಡಿಸಲು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಕೆಆರ್‍ಡಿಸಿಎಲ್ ಅಧಿಕಾರಿಗಳು ತಿಳಿಸಿದರೆನ್ನಲಾಗಿದೆ. ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕೆಆರ್‍ಡಿಸಿಎಲ್ ಸಭೆ ನಡೆಸಿ ಅನುಮತಿ ಪಡೆದ ನಂತರ ಕನ್ಸಲ್ಟೆಂಟ್ ಅನ್ನು ನೇಮಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »