ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ನಾವು ಬಿಡುವುದಿಲ್ಲ
ಮೈಸೂರು

ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ನಾವು ಬಿಡುವುದಿಲ್ಲ

June 30, 2018

ಮೈಸೂರು:  ಕೊಡಗು ಭಾಗದ ಅರಣ್ಯ ನಾಶವಾಗುವ ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಮುಂದಾಗಿರುವ ಕೇರಳ ರಾಜ್ಯದ ಕ್ರಮ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಇಲ್ಲದಿದ್ದರೂ, ಕೊಡಗು ಭಾಗದ ನಾಗರಿಕರು, ಪರಿಸರ ಪ್ರೇಮಿಗಳು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಡಿಪಿಆರ್ ತಯಾರಿಕೆಗೆ ಬಿಡ್ ಕರೆದಿರುವುದು ಜನವಿರೋಧಿ ನೀತಿಯಾಗಿದೆ ಎಂದು ದೂರಿದ್ದಾರೆ.

ಮೈಸೂರು-ತಲಚೇರಿ ರೈಲ್ವೇ ಮಾರ್ಗದಿಂದ ಕೇವಲ ಕೇರಳ ರಾಜ್ಯಕ್ಕೆ ಅನುಕೂಲವಾಗುತ್ತದೆಯೇ ಹೊರತು ಕೊಡಗು ಭಾಗದವರಿಗಾಗಲೀ ಅಥವಾ ಮೈಸೂರಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಯಾರದೋ ಅನುಕೂಲಕ್ಕಾಗಿ ಕರ್ನಾಟಕದ ಅರಣ್ಯ, ಪ್ರಾಣ ಸಂಪತ್ತು ನಾಶವಾಗುವುದನ್ನು ನಮ್ಮ ಜನರು ಸಹಿಸುವುದಿಲ್ಲ ಎಂದು ಸಂಸದರು ತಿಳಿಸಿದ್ದಾರೆ.

ಯೋಜನೆಗೆ ಅನುಮತಿ ನೀಡಬಾರದೆಂದು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದೆ. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರೈಲ್ವೇ ಯೋಜನೆಗೆ ನಾವು ಗ್ರೀನ್ ಸಿಗ್ನಲ್ ನೀಡಲ್ಲ ಎಂದು ಭರವಸೆ ನೀಡಿದ್ದರು ಎಂದಿರುವ ಪ್ರತಾಪ್ ಸಿಂಹ, ಈ ಯೋಜನೆ ಬೇಕೆಂದು ಕರ್ನಾಟಕದ ಯಾರೊಬ್ಬರೂ ಕೇಳದಿದ್ದರೂ ಕೇರಳ ರೈಲ್ವೇ ಅಭಿವೃದ್ಧಿ ನಿಗಮವು ಹಠ ಹಿಡಿದು ಈಗ ಡಿಪಿಆರ್ ತಯಾರಿಸಲು ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಆಕ್ಷೇಪಣೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದ ಹಿತ ಬಲಿ ಕೊಟ್ಟು ಕೇರಳ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ತಾವು ಕೊಡಗಿನ ಇಬ್ಬರು ಶಾಸಕರು ಹಾಗೂ ಪರಿಸರವಾದಿಗಳೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಿ, ಸಮೀಕ್ಷೆ ನಡೆಸಲು ಬರುವ ಅಧಿಕಾರಿಗಳಿಗೆ ಸ್ಥಳದಲ್ಲೇ ಅಡ್ಡಿಯುಂಟು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಸಂಪತ್ತು ನಾಶಪಡಿಸುವ ಜತೆಗೆ ಪ್ರಾಣ ಸಂಕುಲದ ಜೀವಕ್ಕೆ ಮಾರಕವಾಗುವ ಈ ಯೋಜನೆ ಅನುಷ್ಠಾನಕ್ಕೆ ತಾವು ಬಿಡುವುದಿಲ್ಲ ಎಂದು ಪ್ರತಾಪ್ ಸಿಂಹ ನುಡಿದರು.

Translate »