ರೇಸ್‍ಕೋರ್ಸ್ ಸ್ಥಳಾಂತರಕ್ಕೆ ಬದ್ಧ
ಮೈಸೂರು

ರೇಸ್‍ಕೋರ್ಸ್ ಸ್ಥಳಾಂತರಕ್ಕೆ ಬದ್ಧ

June 30, 2018

ಮೈಸೂರು : ಮೈಸೂರು ರೇಸ್ ಕೋರ್ಸ್ ಸ್ಥಳಾಂತ ರಕ್ಕೆ ಬದ್ಧವಾಗಿದ್ದು, ಅನಧಿಕೃತವಾಗಿ ನಿರ್ಮಿಸಿರುವ ಶೆಡ್‍ಗಳ ತೆರವು ಕಾರ್ಯಾ ಚರಣೆಯನ್ನು ರೇಸ್ ಕೋರ್ಸ್ ಆಡಳಿತ ಮಂಡಳಿಯೇ ಇಂದಿನಿಂದ ಆರಂಭಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸ್ಪಷ್ಟಪಡಿಸಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿ ಸರ್ಕಾರದ 139 ಎಕರೆ ಜಾಗದಲ್ಲಿ ನಡೆಯುತ್ತಿರುವ ರೇಸ್ ಕೋರ್ಸ್‍ನಿಂದ ಹಲವಾರು ತೊಂದರೆ ಉಂಟಾಗುತ್ತಿದೆ. ಮರಳು ಲಾರಿ ನಿಲು ಗಡೆಯ ರಸ್ತೆಯುದ್ದಕ್ಕೂ ಕುದುರೆ ಲದ್ದಿಯ ರಾಶಿಹಾಕಲಾಗಿದೆ. ಇದರಿಂದ ಸ್ಥಳೀಯರು ಹಾಗೂ ಮೃಗಾಲಯದ ಪ್ರಾಣಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಸರ್ಕಾರಿ ಜಾಗವನ್ನು ಜನರ ಉಪಯೋಗ ಕ್ಕಾಗಿ, ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಹಿಂದೆ ಆರಂಭಿಸಿದ್ದ ಹೋರಾಟಕ್ಕೆ ಬದ್ಧ ನಾಗಿದ್ದೇನೆ. ನಾನು ಮಾಡಿದ ಹೋರಾಟದ ಫಲವಾಗಿ ರೇಸ್ ಕೋರ್ಸ್‍ಗೆ ಸರ್ಕಾರ ಇನ್ನು ಗುತ್ತಿಗೆಯನ್ನು ನವೀಕರಿ ಸಿಲ್ಲ. ನ್ಯಾಯಾಲಯದ ಮೆಟ್ಟಿಲೇರಿದ್ದ ರೇಸ್ ಕೋರ್ಸ್ ಆಡಳಿತ ಮಂಡಳಿ, ಕೋರ್ಟ್ ಆದೇಶದ ಅನುಸಾರ ಚಟುವಟಿಕೆ ಮುಂದುವರೆಸಿದೆ ಎಂದರು. ನ್ಯಾಯಾಲಯದ ಆದೇಶದಲ್ಲಿ ಕೇವಲ ಕುದುರೆ ಓಡಿಸಲು ಅವಕಾಶವಿದೆ. ಆದರೆ ರೇಸ್ ಕೋರ್ಸ್‍ನಲ್ಲಿ ಅನಧಿಕೃತವಾಗಿ 600 ಕುದುರೆ ಸಾಕಲಾಗುತ್ತಿದೆ. ಇವುಗಳಿಗೆ ಲಾಯ ನಿರ್ಮಿಸಲಾಗಿದೆ. ಒಂದು ಕುದುರೆಗೆ ಮೂವರು ಕೆಲಸಗಾರರಂತೆ 1800 ಮಂದಿ ಅನಧಿಕೃತವಾಗಿ ಇಲ್ಲಿ ವಾಸಿಸುತ್ತಿದ್ದಾರೆ. ಈ ಎಲ್ಲವನ್ನು ತೆರವುಗೊಳಿಸುವುದಕ್ಕೆ ಜೂ.30ರ ಗಡುವು ನೀಡಲಾಗಿತ್ತು.

ಗುರುವಾರ(ಜೂ.28) ಬೆಂಗಳೂರಿಗೆ ರೇಸ್ ಕೋರ್ಸ್ ಅಧ್ಯಕ್ಷರು ಹಾಗೂ ಕಾರ್ಯ ದರ್ಶಿಗಳು ಮಾತುಕತೆ ನಡೆಸಲು ಬಂದಿದ್ದರು. ಆದರೆ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿದ ನಂತರವಷ್ಟೇ ಮಾತುಕತೆಗೆ ಬರುವಂತೆ ಸೂಚಿಸಿದ್ದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗಿನಿಂದಲೇ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡ, ಲಾಯಗಳನ್ನು ತೆರವು ಮಾಡುವ ಕೆಲಸವನ್ನು ರೇಸ್ ಕೋರ್ಸ್ ಆಡಳಿತ ಮಂಡಳಿಯೇ ಆರಂಭಿಸಿದೆ. ನಾಳೆ ಅಥವಾ ನಾಡಿದ್ದು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸುತ್ತೇನೆ. ಅನಧಿಕೃತವಾಗಿ ನಿರ್ಮಾಣ ಮಾಡಿರುವ ಯಾವುದೇ ಕಟ್ಟಡ ಅಲ್ಲಿದ್ದರೂ ಜಿಲ್ಲಾಡಳಿತದ ಮೂಲಕ ತೆರವು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ ಅವರು, ರೇಸ್‍ನಲ್ಲಿ ದಿನಕ್ಕೆ 70ರಿಂದ 80 ಕುದುರೆಗಳನ್ನು ಮಾತ್ರ ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರೇಸ್‍ನಲ್ಲಿ ಪಾಲ್ಗೊಳ್ಳುವ ಕುದುರೆಗಳನ್ನು ಹೊರತುಪಡಿಸಿ ಹೆಚ್ಚುವರಿ ಕುದುರೆಗಳನ್ನು ಅಲ್ಲಿಟ್ಟುಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ನಿಯಮಾನುಸಾರ ರೇಸ್ ಕೋರ್ಸ್‍ನಿಂದ ಸರ್ಕಾರಕ್ಕೆ ವರ್ಷಕ್ಕೆ 39 ಕೋಟಿ ರೂ. ಕಂದಾಯ ಕಟ್ಟಬೇಕಾಗಿತ್ತು. ಆದರೆ ವಹಿವಾಟಿನಲ್ಲಿ ಶೇ.2ರಷ್ಟು ಮಾತ್ರ, ಅಂದರೆ ವರ್ಷಕ್ಕೆ 2.15 ಕೋಟಿ ರೂ. ಕಂದಾಯ ಪಾವತಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೇಸ್ ಕೋರ್ಸ್ ಸ್ಥಳಾಂತರಿಸುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಬಯಸುತ್ತೇನೆ ಎಂದು ತಿಳಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಉಪಾಧ್ಯಕ್ಷ ಸುಬ್ರಹ್ಮಣ್ಯ, ಖಜಾಂಚಿ ದಕ್ಷಿಣಾಮೂರ್ತಿ ಇದ್ದರು.

Translate »