ಕಾಡಾನೆ ದಾಳಿಯಿಂದ ಸಂತ್ರಸ್ಥ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ವಿಳಂಬ ನೀತಿ ಸಂಸದ ಆರ್.ಧ್ರುವನಾರಾಯಣ್ ಅಸಮಾಧಾನ
ಮೈಸೂರು

ಕಾಡಾನೆ ದಾಳಿಯಿಂದ ಸಂತ್ರಸ್ಥ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ವಿಳಂಬ ನೀತಿ ಸಂಸದ ಆರ್.ಧ್ರುವನಾರಾಯಣ್ ಅಸಮಾಧಾನ

June 30, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯಿಂದ ನೊಂದ ರೈತರಿಗೆ ಪರಿಹಾರ ನೀಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು (ಅರಣ್ಯ, ಕೃಷಿ ಮತ್ತು ತೋಟಗಾರಿಕೆ ಇತ್ಯಾದಿ) ನಿರ್ಲಕ್ಷ್ಯ ಮನೋಭಾವ ತೋರುತ್ತಿರುವುದರ ಬಗ್ಗೆ ಸಂಸದ ಆರ್.ಧ್ರುವನಾರಾಯಣ್ ಇಂದಿಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಲು ವಿಳಂಬವಾಗಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೈಸೂರು ಜಿಲ್ಲೆಯ ಹೆಚ್‍ಡಿ.ಕೋಟೆ, ಹುಣಸೂರು ತಾಲೂಕು ಸೇರಿದಂತೆ ಚಾಮರಾಜನಗರ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಇತ್ತೀಚೆಗೆ ಕಾಡಾನೆ ದಾಳಿಯಿಂದ ರೈತರು ಬೆಳೆದ ವಿವಿಧ ಫಸಲುಗಳು ಹಾಳಾಗಿವೆ. ಇದಕ್ಕೆ ಪರಿಹಾರ ನೀಡುವಂತೆ ಕಳೆದ 5 ತಿಂಗಳ ಹಿಂದೆ ನಡೆದ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ನೊಂದ ರೈತರಿಗೆ ನಷ್ಟ ಪರಿಹಾರ ನೀಡಲು ವಿಳಂಬ ಮಾಡಿರುವ ಬಗ್ಗೆ ಸಂಸದರು, ಅರಣ್ಯ ಅಧಿಕಾರಿ ವಿರುದ್ಧ ಕಿಡಿ ಕಾರಿದರು. ಮಹತ್ವದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಡಿಎಫ್‍ಓ ಕಡ್ಡಾಯವಾಗಿ ಹಾಜರಿರಬೇಕು. ಆದರೆ ಅವರು ತಮ್ಮ ಅಧೀನ ಅಧಿಕಾರಿಗಳನ್ನು ಕಳುಹಿಸಿ ಗೈರು ಹಾಜರಾಗಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ನೋಟೀಸ್ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನದಿ ಮೂಲದಿಂದ ನೀರು: ಮೈಸೂರು ಜಿಲ್ಲೆಯ ಸುತ್ತಲೂ ಕಬಿನಿ, ಕಾವೇರಿ ನದಿ ಹರಿಯುತ್ತಿದ್ದು, ನದಿ ಮೂಲದಿಂದ ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಇದೆ. ಈ ಪೈಕಿ ಹುಲ್ಲಹಳ್ಳಿ ಹೋಬಳಿಯಲ್ಲಿ 125 ಕೋಟಿ ರೂ. ಅನುದಾನ ನೀಡಿದ್ದರೂ ಗ್ರಾಮಗಳಿಗೆ ನೀರು ಕೊಡದಿದ್ದರೆ ಅನುದಾನ ನೀಡಿ ಪ್ರಯೋಜನವೇನು? ಎಂದು ಪ್ರಶ್ನಿಸಿದರು. ನಿಗದಿತ ಅವಧಿಯೊಳಗೆ ಗ್ರಾಮಗಳಿಗೆ ನದಿ ಮೂಲದಿಂದ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಾಲ ಸೌಲಭ್ಯ ನೀಡದ ಬ್ಯಾಂಕ್‍ಗಳಲ್ಲಿ ಹಣ ಇಡಬೇಡಿ: ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡದ ಖಾಸಗಿ ಬ್ಯಾಂಕ್‍ಗಳಲ್ಲಿ ಇಲಾಖೆ ಅಧಿಕಾರಿಗಳು ಹಣವನ್ನು ಠೇವಣ ಮಾಡದಂತೆ ಸಂಸದ ಆರ್.ಧ್ರುವನಾರಾಯಣ್ ನಿರ್ದೇಶನ ನೀಡಿದರು. ಯಾವ ಖಾಸಗಿ ಬ್ಯಾಂಕ್‍ಗಳು ಸಾಲಸೌಲಭ್ಯ ನೀಡುತ್ತವೆಯೋ ಅಂಥ ಬ್ಯಾಂಕ್‍ಗಳಲ್ಲಿ ಠೇವಣ ಇಡುವಂತೆಯೂ ಸಲಹೆ ನೀಡಿದರು.

ಟವರ್ ಇಲ್ಲ.. ಸ್ಪೀಡ್ ಇಲ್ಲ: ಗ್ರಾಮಾಂತರ ಪ್ರದೇಶಗಳಲ್ಲಿ ಬಿಎಸ್‍ಎನ್‍ಎಲ್ ಟವರ್ ಸಮರ್ಪಕವಾಗಿಲ್ಲದ, ಶೀಘ್ರ ಸಂಪರ್ಕ ಸಾಧ್ಯವಾಗದೆ ಗ್ರಾಹಕರಿಗೆ ಕರೆಗಳು ಸಿಗುತ್ತಿಲ್ಲ. ಸಿಕ್ಕಿದರೂ ಕಡಿತಗೊಳ್ಳುತ್ತವೆ. ಅಲ್ಲದೆ ಎಲ್ಲಾ ಗ್ರಾಪಂಗಳ ಮೂಲಕ ಸರ್ಕಾರದ ಎಲ್ಲಾ ಯೋಜನೆಗಳನ್ನೂ ಆನ್‍ಲೈನ್‍ನ ಮೂಲಕವೇ ಮಾಡಲಾಗುತ್ತಿರುವುದರಿಂದ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ಈ ಸಂಬಂಧ ಬಿಎಸ್‍ಎನ್‍ಎಲ್ ಪ್ರಧಾನ ವ್ಯವಸ್ಥಾಪಕರನ್ನು ಕರೆದು ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಎಲ್ಲೆಲ್ಲಿ, ಯಾವ ಗ್ರಾಮಗಳಲ್ಲಿ ನೆಟ್‍ವರ್ಕ್ ಸಮಸ್ಯೆ ಇದೆಯೋ ಅಂಥ ಗ್ರಾಮಗಳ ಮಾಹಿತಿ ಸಂಗ್ರಹಿಸಿ, ಮುಂದಿನ ಸಭೆಯಲ್ಲಿ ವರದಿ ನೀಡುವಂತೆ ಬಿಎಸ್‍ಎನ್‍ಎಲ್ ಅಧಿಕಾರಿಗೆ ಜಿಲ್ಲಾಧಿಕಾರಿ ಅಭಿರಾಂಮ್ ಜಿ.ಶಂಕರ್ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

ನೀರಿನಲ್ಲಿ ಹೆಚ್ಚಿದ ಕ್ಲೋರಿನ್ ಅಂಶ: ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ಕವಲಂದೆ, ತರದೆಲೆ ಗ್ರಾಮಗಳು ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಸರಬರಾಜು ಮಾಡುವ ಶುದ್ಧ ಕುಡಿಯುವ ನೀರಿನಲ್ಲಿ ಕ್ಲೋರಿನ್ ಅಂಶ ಹೆಚ್ಚಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂಬ ದೂರುಗಳಿವೆ. ನೀವೇ ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗೆ ಸಂಸದರು ಸೂಚಿಸಿದರು.
ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಗುರುತಿಸಿರುವ 124 ಗ್ರಾಮಗಳ ಪೈಕಿ 111 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ 13 ಗ್ರಾಮಗಳ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಅಧಿಕಾರಿ ಸಭೆಗೆ ತಿಳಿಸಿದರು.

ಈ ವರ್ಷ ಮೊರಾರ್ಜಿ ವಸತಿ ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದ್ದು, ಅಧಿಕಾರಿಗಳು ಇದನ್ನು ಪ್ರತಿ ವರ್ಷ ಕಾಯ್ದುಕೊಂಡು ಹೋಗಬೇಕು. – ಆರ್.ಧ್ರುವನಾರಾಯಣ್, ಸಂಸದ

ಪಡಿತರ ಸಮಸ್ಯೆಗೆ ಪರಿಹಾರ: ಜಿಲ್ಲೆಯಲ್ಲಿ ಕೆಲವೆಡೆ ಪಡಿತರ ವಿತರಣೆ ಕುರಿತ ದೂರುಗಳಿರುವ ಬಗ್ಗೆ ಸಂಸದ, ಶಾಸಕರು ಆಹಾರ ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಪಡಿತರ ಧಾನ್ಯ ಪಡೆಯಲು ವಿನಾಯಿತಿ ಇದ್ದು, ಇಂಟರ್‍ನೆಟ್ ಸಂಪರ್ಕ ಸಮಸ್ಯೆಯಿಂದಾಗಿ ಕೆಲವೆಡೆ ಹೀಗಾಗುತ್ತಿದೆ. ಇದಕ್ಕೂ ಪರಿಹಾgವಿÀದೆ. ಪಡಿತರ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 161ಗೆ ಕರೆ ಮಾಡಿ, ಅಲ್ಲಿ ಆಹಾರ ಇಲಾಖೆಗೆ ಸಂಬಂಧಿಸಿದಂತೆ 4 ಸಂಖ್ಯೆಯನ್ನು ಒತ್ತಬೇಕಾಗುತ್ತದೆ. ಆಗ ಆಧಾರ್ ಸಂಖ್ಯೆ ಕೇಳಲಾಗುತ್ತದೆ. ಆಧಾರ್ ಸಂಖ್ಯೆಯನ್ನು ಒತ್ತಿದರೆ ಮೋಬೈಲ್‍ಗೆ ಪಡಿತರ ಕೂಪನ್ ಕೋಡ್ ಸಂಖ್ಯೆಯ ಎಸ್‍ಎಂಎಸ್ ಬರುತ್ತದೆ. ಅದನ್ನು ಸಂಬಂಧಿತ ನ್ಯಾಯ ಬೆಲೆ ಅಂಗಡಿಗೆ ತೋರಿಸಿ ಪಡಿತರ ಪಡೆಯಬಹುದಾಗಿದೆ ಎಂದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ, ಶಾಸಕರಾದ ಹೆಚ್.ವಿಶ್ವನಾಥ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಸಿದ್ದರಾಮಯ್ಯ, ಹರ್ಷವರ್ಧನ್, ಎಂ.ಅಶ್ವಿನ್‍ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಓ ಪಿ.ಶಿವಶಂಕರ್ ಇನ್ನಿತರರು ಉಪಸ್ಥಿತರಿದ್ದರು.

 

ಹೆಚ್.ಡಿ.ಕೋಟೆ ತಾಲೂಕು ಆಸ್ಪತ್ರೆಯಲ್ಲಿ ಡಿ.ಗ್ರೂಪ್ ನೌಕರರಿಗೆ 6 ತಿಂಗಳಿಂದ ಸಂಬಳ ಆಗಿಲ್ಲ. ಅವರು ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ? – ಅನಿಲ್ ಚಿಕ್ಕಮಾದು, ಶಾಸಕ, ಹೆಚ್.ಡಿ,ಕೋಟೆ.

 

ನಂಜನಗೂಡಿನಲ್ಲಿ ಪಡಿತರ ನೀಡದೇ ಶಾಲಾ ಮಕ್ಕಳ ದಾಖಲಾತಿ ಕಾರ್ಯ ಆಗುತ್ತಿಲ್ಲ. ವರುಣಾದ ಚಿಕ್ಕಯ್ಯನಛತ್ರ ಇನ್ನಿತರ ಕಡೆ ವರ್ಷಗಳಿಂದ ಪಡಿತರ ವಿತರಣೆ ಆಗಿಲ್ಲ. – ಹರ್ಷವರ್ಧನ್, ಶಾಸಕ, ನಂಜನಗೂಡು

 

ತಿ.ನರಸೀಪುರದ ಕೆಲವೆಡೆ ಹಿರಿಯ ವಯಸ್ಕರ ಹೆಬ್ಬೆರಳಿನ ಗುರುತು ಸ್ಪಂದಿಸದೇ ಪಡಿತರ ಪಡೆಯಲಾಗುತ್ತಿಲ್ಲ.– ಎಂ.ಅಶ್ವಿನ್‍ಕುಮಾರ್, ಶಾಸಕ, ತಿ.ನರಸೀಪುರ.

 

ತಾಲೂಕು ಆಸ್ಪತ್ರೆಗಳ ನಿರ್ವಹಣೆ ಸರಿಯಿಲ್ಲ ಎಂಬ ದೂರುಗಳಿವೆ. ಡಿಹೆಚ್‍ಓ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿಯೇ ಸಭೆಗಳನ್ನು ನಡೆಸಿ, ಮೆಷ್, ಬಿಸಿ ನೀರು ಇನ್ನಿತರೆ ಸಮಸ್ಯೆ ಕುರಿತ ದೂರುಗಳನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. – ಅಭಿರಾಮ್ ಜಿ.ಶಂಕರ್, ಜಿಲ್ಲಾಧಿಕಾರಿ.

Translate »