ದರ್ಶನ್ ಕಾರು ಅಪಘಾತ ಪ್ರಕರಣ: ಮೈಸೂರು ವಿವಿ ಪುರಂ ಸಂಚಾರಿ ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಕೆ
ಮೈಸೂರು

ದರ್ಶನ್ ಕಾರು ಅಪಘಾತ ಪ್ರಕರಣ: ಮೈಸೂರು ವಿವಿ ಪುರಂ ಸಂಚಾರಿ ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಕೆ

November 4, 2018

ಮೈಸೂರು: ನಟ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಪ್ರಕರಣ ಸಂಬಂಧ ಮೈಸೂರಿನ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ತನಿಖೆ ಪೂರ್ಣಗೊಳಿಸಿ, ಮೈಸೂರಿನ 3ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಮೈಸೂರಿನ ರಿಂಗ್ ರಸ್ತೆ, ಜೆಎಸ್‍ಎಸ್ ಅರ್ಬನ್ ಹಾತ್ ಸಮೀಪ, ಕಳೆದ ಸೆ.23ರಂದು ಬೆಳಗಿನ ಜಾವ, ನಟ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ದರ್ಶನ್ ಸೇರಿ ದಂತೆ ಕಾರಿನಲ್ಲಿದ್ದ ಹಿರಿಯ ನಟ ದೇವರಾಜ್, ಅವರ ಪುತ್ರ ಪ್ರಜ್ವಲ್ ದೇವರಾಜ್, ದರ್ಶನ್ ಸ್ನೇಹಿತರಾದ ಪ್ರಕಾಶ್ ಹಾಗೂ ಅಂಟೋನಿ ರಾಯ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಅಪಘಾತದಲ್ಲಿ ಹೆಚ್ಚು ಗಾಯಗೊಂಡಿದ್ದ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅಪಘಾತಕ್ಕೀಡಾದ ಕಾರು ಚಲನಚಿತ್ರ ನಿರ್ಮಾಪಕ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಒಡೆತನದ ಹೋಟೆಲ್ ‘ಸಂದೇಶ್ ದಿ ಪ್ರಿನ್ಸ್’ ಹೆಸರಿನಲ್ಲಿ ನೋಂದಣಿಯಾಗಿದ್ದು, ದರ್ಶನ್‍ಗೆ ಉಡುಗೊರೆ ನೀಡಲಾಗಿತ್ತು. ಅಪಘಾತದ ನಂತರ ಕಾರನ್ನು ಅಲ್ಲಿಂದ ತರಾತುರಿಯಲ್ಲಿ ತೆರವು ಮಾಡಿ, ಯಾವುದೋ ಫಾರಂಹೌಸ್‍ನಲ್ಲಿಟ್ಟಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರದ ವಿಚಾರಣೆಯಲ್ಲಿ ದರ್ಶನ್ ಸ್ನೇಹಿತ ಅಂಟೋನಿ ರಾಯ್, ಕಾರು ಚಾಲನೆ ಮಾಡುತ್ತಿದ್ದರು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧ ಅ.29ರಂದು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ನಟರಾದ ದರ್ಶನ್, ದೇವರಾಜ್, ಪ್ರಜ್ವಲ್ ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ ಪ್ರಕರಣ ಸಂಬಂಧ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ.

Translate »