25 ತಂಡಗಳಿಂದ ಮೈಸೂರಲ್ಲಿ ಪಾರಂಪರಿಕ ನಿಧಿ ಶೋಧ
ಮೈಸೂರು, ಮೈಸೂರು ದಸರಾ

25 ತಂಡಗಳಿಂದ ಮೈಸೂರಲ್ಲಿ ಪಾರಂಪರಿಕ ನಿಧಿ ಶೋಧ

October 18, 2018

ಮೈಸೂರು: ಮೈಸೂ ರಲ್ಲಿ 25 ತಂಡದ ನೂರು ಮಂದಿ ಯುವಕ -ಯುವತಿಯರು ಇಂದು ಪಾರಂಪರಿಕ ನಿಧಿ ಶೋಧ (ಟ್ರೆಷರ್ ಹಂಟ್) ನಡೆಸಿದರು.

ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ದ್ವಿಜ ಕನ್ಸರ್ವೇಷನ್ ಸೊಸೈಟಿ ಆಫ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅದ್ಭುತ ಪಾರಂಪರಿಕ ನಿಧಿ ಶೋಧ ಕಾರ್ಯಕ್ರಮಕ್ಕೆ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ.ಜನಾರ್ಧನ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಗ್ರೂಫಿ ಸಂಸ್ಥೆ ಪ್ರಾಯೋಜಿಸಿದ್ದ ಟಿ-ಶರ್ಟ್ ಧರಿಸಿ ದ್ವಿಜ ಸಂಸ್ಥೆಯ ಆಯೋಜಕರು ನೀಡಿದ ಸುಳಿವಿನ ಜಾಡು ಹಿಡಿದು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ 25 ತಂಡದ 100 ಮಂದಿ (4 ಮಂದಿಯ ತಂಡ) ಯುವಕರು ನಿಧಿ ಹುಡುಕಿಕೊಂಡು ತಮ್ಮ ವಾಹನಗಳಲ್ಲಿ ಪಾರಂಪರಿಕ ಕಟ್ಟಡಗಳತ್ತ ಹೊರಟರು.
ಆಯೋಜಕರು ಸನ್ನೆ, ಸಂಗೀತ, ಕಥೆ, ಚಿತ್ರಗಳು, ಒಗಟುಗಳ ಮೂಲಕ ನಿಧಿಯ ಬಗ್ಗೆ ಸಣ್ಣ ಸುಳಿವು ನೀಡಿದ್ದನ್ನು ಗ್ರಹಿಸಿ ಕೊಂಡು ಅದನ್ನು ಬೆನ್ನತ್ತಿ ಸೂಚಿಸಿದ ಪಾರಂಪರಿಕ ಕಟ್ಟಡಕ್ಕೆ ಹೋಗಿ ಅಲ್ಲಿ ದೊರೆತ ಮತ್ತೊಂದು ಸುಳಿವನ್ನು ಆಧರಿಸಿ ಮತ್ತೆ ಶೋಧ ಮುಂದುವರೆಸಿದರು.

ಒಂದೊಂದು ತಂಡವೂ ನಾಲ್ಕರಿಂದ ಐದು ಪಾರಂಪರಿಕ ಕಟ್ಟಡಗಳಿಗೆ ತೆರಳಿ ಮಾಹಿತಿ ಕಲೆಹಾಕಿ ಕಡೆಗೆ ಸಂಜೆ ವೇಳೆಗೆ ಆಯೋಜಕರು ಗುರುತಿಸಿದ ನಿಧಿಯನ್ನು ಪತ್ತೆ ಮಾಡಿ ತಂದು ಕೊಡ ಬೇಕು. ಆ ನಿಧಿ ಸರಿಯಾಗಿದೆ ಎಂಬುದು ದೃಢಪಟ್ಟರೆ ಮಾತ್ರ ಆ ತಂಡಕ್ಕೆ ಬಹು ಮಾನ ಮತ್ತು ಟ್ರೆಷರ್ ಹಂಟ್ ಪ್ರಮಾಣ ಪತ್ರವನ್ನು ಪ್ರವಾಸೋದ್ಯಮ ಇಲಾಖೆ ನೀಡುತ್ತದೆ.ಆದರೆ ಈ ಆಟದಲ್ಲಿ ನಿಧಿ ಪತ್ತೆ ಮಾಡಿ ಗೆದ್ದವರ್ಯಾರು ಎಂಬುದು ತಡವಾಗಿ ಪ್ರಕಟವಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇ ಶಕ ಜನಾರ್ಧನ್ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಕೆ.ಆರ್.ಆಸ್ಪತ್ರೆ, ದೇವ ರಾಜ ಮಾರುಕಟ್ಟೆ, ಮೈಸೂರು ಮೆಡಿಕಲ್ ಕಾಲೇಜು, ದೊಡ್ಡ ಗಡಿಯಾರ, ಕ್ರಾಫರ್ಡ್ ಹಾಲ್ ಸೇರಿದಂತೆ ಮೈಸೂರಿನ 35 ಪಾರಂ ಪರಿಕ ಕಟ್ಟಡಗಳನ್ನು ಗುರುತಿಸಲಾಗಿತ್ತು.

Translate »