ಮದವೇರಿದ ಲಕ್ಷ್ಮೀಶ ಆನೆ ಸೆರೆ ಸಿಕ್ಕರೂ ಕುಸಿದು ಸಾವು
ಮೈಸೂರು

ಮದವೇರಿದ ಲಕ್ಷ್ಮೀಶ ಆನೆ ಸೆರೆ ಸಿಕ್ಕರೂ ಕುಸಿದು ಸಾವು

September 19, 2018

ಮೈಸೂರು: ಮದವೇರಿದ್ದ ಗಂಡಾನೆಯೊಂದು ಸೆರೆಯಾದ ಬಳಿಕ ಮೃತಪಟ್ಟಿರುವ ಘಟನೆ ನಾಗರಹೊಳೆ ಕೊಲ್ಲಂಗೇರಿ ಅರಣ್ಯ ಪ್ರದೇಶದಲ್ಲಿ ವರದಿಯಾಗಿದೆ.

ಮತ್ತಿಗೋಡು ಶಿಬಿರದಲ್ಲಿದ್ದ 23 ವರ್ಷದ ಲಕ್ಷ್ಮೀಶ ಎಂಬ ಆನೆ ಮಂಗಳವಾರ ಸಂಜೆ ಮೃತಪಟ್ಟಿದೆ. ಮದವೇರಿದ್ದ ಲಕ್ಷ್ಮೀಶ, ಆತಂಕ ಮೂಡಿಸಿದ್ದ. ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಕ್ಕೆ ಆನೆ ಹೋಗದಂತೆ ಎಚ್ಚರಿಕೆ ವಹಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಬೇರೆ ಆನೆಗಳ ಸಹಾಯ ದಿಂದ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಕಡೆಗೂ ಲಕ್ಷ್ಮೀಶನನ್ನು ಸೆರೆಹಿಡಿದು, ಶಿಬಿರದತ್ತ ಕರೆತರುವ ಸಂದರ್ಭ ದಲ್ಲಿ ಇದ್ದಕ್ಕಿದ್ದಂತೆ ಕುಸಿದು ಮೃತಪಟ್ಟಿದೆ. ಲಕ್ಷ್ಮೀಶನನ್ನು ಪುತ್ತೂರಿನ ದೇವಾಲಯದಿಂದ ಅರಣ್ಯ ಇಲಾಖೆಗೆ ನೀಡ ಲಾಗಿತ್ತು. ಸಂಜೆಯಾಗಿದ್ದ ಕಾರಣಕ್ಕೆ ನಾಳೆ(ಸೆ.19) ಮರ ಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ವೈದ್ಯರ ವಿರುದ್ಧ ಆರೋಪ: ಲಕ್ಷ್ಮೀಶ ಆನೆ ಮೂರ್ನಾಲ್ಕು ದಿನಗಳ ಹಿಂದೆ ಶಿಬಿರದಿಂದ ತಪ್ಪಿಸಿಕೊಂಡು ಅರಣ್ಯ ಸೇರಿತ್ತು. ಇಂದು ಪತ್ತೆಯಾದ ಆನೆಯನ್ನು ಸೆರೆ ಹಿಡಿಯುವ ಸಂದರ್ಭ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರವಳಿಕೆ ಚುಚ್ಚುಮದ್ದನ್ನು ನೀಡಲಾಗಿದೆ. ಅಲ್ಲದೆ ಆನೆಯ ಕಾಲಿನಲ್ಲಿದ್ದ ಸರಪಳಿಯನ್ನೂ ತೆಗೆಯದೆ ಅದನ್ನು ಎಳೆ ತರಲಾಗಿದೆ.
ಇದರಿಂದ ತೀವ್ರ ನಿತ್ರಾಣವಾಗಿದ್ದ ಆನೆ ಮಾರ್ಗಮಧ್ಯೆ ಮೃತಪಟ್ಟಿದೆ ಎಂಬ ಆರೋಪವೂ ಕೇಳಿ ಬಂದಿದೆ. ಆದರೆ ಮದವೇರಿದ್ದ ಆನೆಗೆ ಚುಚ್ಚುಮದ್ದು ನೀಡುವುದಿಲ್ಲ. ಸೆರೆ ಹಿಡಿಯುವ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಇತರೆ ಆನೆಗಳು ಗುದ್ದುತ್ತವೆ. ಇದರಿಂದ ದೇಹದೊಳಗೆ ರಕ್ತಸ್ರಾವವಾಗಿ ಮೃತಪಟ್ಟಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಆನೆಯ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Translate »