ಅಪಾಯಕಾರಿ ಕೊಂಬೆ ಹೆಸರಲ್ಲಿ ಬೃಹತ್ ಮರಗಳ ಹನನ ಆರೋಪ
ಮೈಸೂರು

ಅಪಾಯಕಾರಿ ಕೊಂಬೆ ಹೆಸರಲ್ಲಿ ಬೃಹತ್ ಮರಗಳ ಹನನ ಆರೋಪ

September 19, 2018

ಮೈಸೂರು:  ಮೈಸೂರಿನ ನಜರ್‍ಬಾದ್‍ನಲ್ಲಿ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವ ನೆಪದಲ್ಲಿ ಗಟ್ಟಿಮುಟ್ಟಾದ ದೊಡ್ಡ ಮರಗಳನ್ನೇ ಕಡಿದುರುಳಿಸಿದ್ದಾರೆಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಜರ್‍ಬಾದ್ ಶ್ರೀವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜು ಸಮೀಪ ವಿರುವ ದೊಡ್ಡ ಮರಗಳನ್ನು ಕತ್ತರಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪರಿಸರವಾದಿಗಳು, ಅರಣ್ಯ ಇಲಾಖೆ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕಾಲೇಜು ಸಮೀಪವಿರುವ ಮರಗಳ ಅಪಾಯ ಸ್ಥಿತಿಯಲ್ಲಿರುವ 5 ಕೊಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಹರಾಜು ಪಡೆದಿರುವ ವ್ಯಕ್ತಿ ಇಂದು ಕೊಂಬೆಗಳನ್ನು ಕತ್ತರಿಸುವುದರ ಜೊತೆಗೆ ಮರಗಳನ್ನೇ ಕಡಿದು ಲಾರಿಯಲ್ಲಿ ಸಾಗಿಸುತ್ತಿ ದ್ದಾರೆ ಎಂದು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಬಾನುಮೋಹನ್ ಆರೋಪಿಸಿದರು.

20 ದಿನದ ಹಿಂದೆಯೇ ಮರ ಕಡಿಯಲು ಪ್ರಾರಂಭಿಸಿದ್ದರು. ಅಂದಿನಿಂದ ಮರದ ದೊಡ್ಡ ದೊಡ್ಡ ದಿಮ್ಮಿಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿದೆ. ಇಂದೂ ಸಹ ದೊಡ್ಡ ಮರಗಳನ್ನು ಕಡಿಯುತ್ತಿದ್ದು, ಕೇಳಿದರೇ ಅನುಮತಿ ಪತ್ರ ಹಿಡಿದು ತೋರಿಸುತ್ತಾರೆ. ಸರಿ ಅನುಮತಿ ಪಡೆದಂತೆ ಕೇವಲ ಸಣ್ಣ ಪುಟ್ಟ ಕೊಂಬೆಗಳನ್ನು ಕಡಿಯಬೇಕಾಗಿತ್ತು. 2500 ರೂ.ಗೆ ಕೊಂಬೆಗಳನ್ನು ಹರಾಜು ಹಾಕಿದ್ದು, ಅಷ್ಟಕ್ಕೆ ಸೀಮಿತವಾದ ಕೊಂಬೆಗಳನ್ನು ಮಾತ್ರ ಕಡಿಯಬೇಕಿತ್ತು, ಆದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೃಹತ್ ಗಾತ್ರದ ಮರಗಳನ್ನು ಕಡಿಯುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿ ಗಳನ್ನು ಕೇಳಿದರೇ ನಮ್ಮ ಬಳಿ ನೌಕರರಿಲ್ಲ. ಆದ್ದರಿಂದ ಹರಾಜು ಮಾಡಿದ್ದೇವೆ ಎನ್ನುತ್ತಾರೆ. ಹಾಗೆಯೇ ನಗರ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ ನಮ್ಮಲ್ಲಿರುವ ವಾಹನದಿಂದ ಎತ್ತರದ ಮರಗಳನ್ನು ಕಡಿಯಲು ಸಾಧ್ಯವಾಗುವುದಿಲ್ಲ ಎಂಬ ಉತ್ತರ ನೀಡುತ್ತಾರೆ. ಇದೇ ರೀತಿ ಮುಂದುವರಿದರೇ ಪರಿಸರದ ಗತಿ ಏನು? ಪರಿಸರವನ್ನು ಉಳಿಸುವುದಾದರೂ ಹೇಗೆ? ಎಂದು ಕಳವಳ ವ್ಯಕ್ತಪಡಿಸಿದರು.

Translate »