ಕೃಷಿಗೆ ಟ್ರ್ಯಾಕ್ಟರ್, ಟಿಲ್ಲರ್, ಎತ್ತಿನಗಾಡಿ ಖರೀದಿಸಲು ಮಾಡಿದ ಸಾಲ ಮನ್ನಾ: ಸಿಎಂ ಕುಮಾರಸ್ವಾಮಿ ನಿರ್ಧಾರ
ಮೈಸೂರು

ಕೃಷಿಗೆ ಟ್ರ್ಯಾಕ್ಟರ್, ಟಿಲ್ಲರ್, ಎತ್ತಿನಗಾಡಿ ಖರೀದಿಸಲು ಮಾಡಿದ ಸಾಲ ಮನ್ನಾ: ಸಿಎಂ ಕುಮಾರಸ್ವಾಮಿ ನಿರ್ಧಾರ

June 15, 2018

ಬೆಂಗಳೂರು: ಕೃಷಿ ಉದ್ದೇಶಗಳಿಗೆ ರೈತರು ಟ್ರ್ಯಾಕ್ಟರ್, ಟಿಲ್ಲರ್, ಎತ್ತಿನ ಬಂಡಿ ಸೇರಿದಂತೆ ಆಧುನಿಕ ಯಂತ್ರ ಗಳನ್ನು ಸಾಲ ಮಾಡಿ ಖರೀದಿಸಿದ್ದರೆ ಅದನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಈಗಾಗಲೇ ಪ್ರಕಟಿಸಿರುವಂತೆ ಮೊದಲ ಹಂತದಲ್ಲಿ 15,000 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಲಿದ್ದು, ತದನಂತರ ಕೃಷಿ ಉತ್ತೇಜನಕ್ಕಾಗಿ ಆಧುನಿಕ ಯಂತ್ರ ಗಳಿಗೆ ಮಾಡಿರುವ ಸಾಲ ಮನ್ನಾ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಬೆಳೆ ಹೆಸರಿನಲ್ಲಿ ಸಾಲ ಪಡೆದು ಐಷಾರಾಮಿ ಜೀವನದ ಸವಲತ್ತುಗಳನ್ನು ಖರೀದಿಸಿದ್ದರೆ, ಅಂತಹ ವರಿಗೆ ಕೃಷಿ ಸಾಲ ಮನ್ನಾ ಸೌಲಭ್ಯ ಇಲ್ಲ. ವಿಧಾನಸಭಾ ಚುನಾವಣೆಗೂ ಮುನ್ನ ರೈತರಿಗೆ ನೀಡುವ ಆಶ್ವಾಸನೆಯನ್ನು ತಾವು ಜುಲೈನಲ್ಲಿ ಮಂಡಿಸಲಿರುವ ಬಜೆಟ್‍ನಲ್ಲಿ ಘೋಷಿಸು ವುದಲ್ಲದೆ, ಕೃಷಿ ಸಾಲದ ಬಾಬ್ತನ್ನು ಹೇಗೆ ತೀರಿಸಲಾಗುವುದು ಎಂಬ ಮಾಹಿತಿ ಯನ್ನೂ ಜನರ ಮುಂದಿಡಲಿದ್ದಾರೆ.
ಈಗಾಗಲೇ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‍ಗಳ ಆಡಳಿತ ಮಂಡಳಿ ಸದಸ್ಯ ರೊಂದಿಗೆ ಚರ್ಚೆ ಮಾಡಿ ಸರ್ಕಾರದ ನಿರ್ಧಾ ರವನ್ನು ತಿಳಿಸಿ ಸಹಕಾರವನ್ನೂ ಕೋರಿ ದ್ದಾರೆ. ರೈತರು ಪಡೆದಿರುವ ಸಾಲದ ಮೇಲೆ ಬಡ್ಡಿ ಮತ್ತು ಚಕ್ರಬಡ್ಡಿ ಮನ್ನಾ ಮಾಡಿ, ನಿಮ್ಮ ಪೂರ್ಣ ಅಸಲನ್ನು ನಾವು ತುಂಬುತ್ತೇವೆ.

ಸಾಧ್ಯವಾದರೆ ಅಸಲಿನಲ್ಲೂ ರಿಯಾ ಯಿತಿ ನೀಡಿ, ಸರ್ಕಾರ ನಿಮ್ಮ ಬಾಬ್ತಿಗೆ ಹಣ ಸಂದಾಯ ಮಾಡುತ್ತದೆ ಎಂಬ ದೃಢೀಕರಣ ಪತ್ರ ಬರುತ್ತಿದ್ದಂತೆ ಸಾಲ ಋಣಮುಕ್ತ ಪತ್ರ ತಲುಪಿಸಬೇಕು. ಸರ್ಕಾರದ ಈ ಕ್ರಮಕ್ಕೆ ಬಹುತೇಕ ಬ್ಯಾಂಕ್‍ಗಳ ಆಡಳಿತ ಮಂಡಳಿ ತಲೆದೂಗಿವೆ. ಆದರೆ ಅವರು ಕೆಲವು ಷರತ್ತು ಮತ್ತು ಸಲಹೆಗಳನ್ನು ನೀಡಿದ್ದಾರೆ. ಸರ್ಕಾರದ ಆದೇಶ ಹೊರಡಿಸಿದ ನಂತರ ರೈತರು ತಾವು ಪಡೆದ ಸಾಲದ ಮೊಬಲಗಿನ ಮಾಹಿತಿ ಮತ್ತು ವಿವರವನ್ನು ಸಿದ್ಧಪಡಿಸಿದ ಅರ್ಜಿಗೆ ದಾಖಲೆ ಸಮೇತ ಭರ್ತಿ ಮಾಡಿ ನೀಡಬೇಕು. ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಕೊಠಡಿ ತೆರೆದು ಅಧಿಕಾರಿಗಳ ದಂಡೇ ಕಾರ್ಯ ನಿರ್ವಹಿಸಲಿದೆ. ಅರ್ಜಿಗಳ ಪರಿಶೀಲನೆಗೂ ಸರ್ಕಾರ ಕೆಲವು ಮಾನದಂಡಗಳನ್ನು ವಿಧಿಸಲಿದ್ದು, ಅದಕ್ಕೆ ಪೂರಕವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.

ರೈತರ ಕೃಷಿ ಸಾಲದ ಅರ್ಜಿ ಪರಿಶೀಲನೆ ನಂತರ ಸರ್ಕಾರದ ಗಮನಕ್ಕೆ ತಂದು ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ರವಾನೆ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಸುಬ್ರಮಣ್ಯ ಅವರು ಕೃಷಿ ಸಾಲ ಮನ್ನಾ ಕಾರ್ಯದ ಪೂರ್ಣ ಜವಾಬ್ದಾರಿ ವಹಿಸಿಕೊಂಡು, ಕಾರ್ಯ ಪ್ರವೃತ್ತರಾಗಲಿದ್ದಾರೆ.

Translate »