ಬೆಂಗಳೂರು: ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕಮಟಹಳ್ಳಿ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೆ ರಮೇಶ್ ಜಾರಕಿಹೊಳಿ, ಮಹೇಶ್ ಕಮಟಹಳ್ಳಿ, ಬಿ.ನಾಗೇಂದ್ರ ಮತ್ತು ಡಾ. ಉಮೇಶ್ ಜಾಧವ್ ಗೈರು ಹಾಜರಾಗಿದ್ದರು.
ಇವರಲ್ಲಿ ಆರೋಗ್ಯ ಸಮಸ್ಯೆಯಿಂದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಉಮೇಶ್ ಜಾಧವ್ ಅವರು ಸಿದ್ದರಾಮಯ್ಯ ಅವರಿಗೆ ಫ್ಯಾಕ್ಸ್ ಮೂಲಕ ಸಂದೇಶ ರವಾನಿಸಿದ್ದರು. ಕೋರ್ಟ್ ಕೇಸ್ ಕಾರಣದಿಂದಾಗಿ ತಾವು ಸಭೆಗೆ ಹಾಜರಾಗಲು ಆಗುತ್ತಿಲ್ಲ ಎಂದು ಬಿ.ನಾಗೇಂದ್ರ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ತಿಳಿಸಿದ್ದರು ಎಂದು ಹೇಳಲಾಗಿದೆ.
ಗೈರು ಹಾಜರಾದ ನಾಲ್ವರು ಶಾಸಕರಿಗೂ ಕಾರಣ ಕೇಳಿ ನೋಟೀಸ್ ನೀಡುವುದು, ತಮ್ಮ ಗೈರು ಹಾಜರಿ ಬಗ್ಗೆ ತಿಳಿಸಿರುವ ಇಬ್ಬರು ಶಾಸಕರಿಗೆ ವಿನಾಯಿತಿ ನೀಡಿ, ಯಾವುದೇ ಮಾಹಿತಿಯನ್ನೂ ನೀಡದೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ್ದ ವಿಪ್ಹ್ ಉಲ್ಲಂಘಿಸಿರುವ ರಮೇಶ್ ಜಾರಕಿ ಹೊಳಿ ಮತ್ತು ಮಹೇಶ್ ಕಮಟಹಳ್ಳಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಶಿಫಾರಸು ಮಾಡುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.