ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಮಿಷ: ಸಿದ್ದರಾಮಯ್ಯ ಕಿಡಿ
ಮೈಸೂರು

ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಮಿಷ: ಸಿದ್ದರಾಮಯ್ಯ ಕಿಡಿ

January 19, 2019

ಬೆಂಗಳೂರು: ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ರಕ್ಷಣೆಗಾಗಿ ತಾವೂ ಕೂಡ ರೆಸಾರ್ಟ್‍ಗೆ ಹೋಗುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆಪರೇಷನ್ ಕಮಲ ನಡೆಸಿ ಎರಡು-ಮೂರು ಬಾರಿ ಮುಖಭಂಗ ಅನುಭವಿಸಿದ್ದರೂ, ಬಿಜೆಪಿಯವರು ಪ್ರಜಾಪ್ರಭುತ್ವದ ಹಾದಿಗೆ ವಿರುದ್ಧವಾಗಿ ನಡೆಯುವುದನ್ನು ಬಿಟ್ಟಿಲ್ಲ. ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ನಮ್ಮ ಶಾಸಕರಿಗೆ ಕೋಟ್ಯಾಂತರ ರೂ. ಹಣ ಮತ್ತು ಮಂತ್ರಿ ಸ್ಥಾನ ಕೊಡುವ ಆಮಿಷ ಒಡ್ಡಲಾಗುತ್ತಿದೆ. 25, 50, 100 ಕೋಟಿ ರೂ.ಗಳವರೆಗೆ ಆಸೆ ತೋರಿಸಿದ್ದಾರೆ. ಬಿಜೆಪಿಯವರು ನಮ್ಮ ಶಾಸಕರಿಗೆ ಆಮಿಷ ಒಡ್ಡಿರುವ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳೂ ಇವೆ. ಬಿಜೆಪಿಯ ಕುದುರೆ ವ್ಯಾಪಾರದಿಂದ ನಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ನಾವೂ ಕೂಡ ರೆಸಾರ್ಟ್‍ಗೆ ಹೋಗುತ್ತಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ, ರೆಸಾರ್ಟ್‍ನಲ್ಲಿ ರಾಜ್ಯದ ಬರ ಪರಿಸ್ಥಿತಿ ಮತ್ತು ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

Translate »