ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಗೆ ನಾಲ್ವರು ಶಾಸಕರು ಚಕ್ಕರ್
ಮೈಸೂರು

ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಗೆ ನಾಲ್ವರು ಶಾಸಕರು ಚಕ್ಕರ್

January 19, 2019

ಬೆಂಗಳೂರು: ಆಪರೇಷನ್ ಕಮಲದ ಸುಳಿಯಿಂದ ಪಾರಾಗಲು ಮತ್ತು ಪರ್ಯಾಯ ತಂತ್ರ ರೂಪಿಸುವ ಸಲುವಾಗಿ ಇಂದು ಕರೆಯಲಾಗಿದ್ದ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆಗೆ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಅತೃಪ್ತ ಶಾಸಕರು ಗೈರು ಹಾಜರಾಗುವುದರ ಮೂಲಕ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ.

ರಮೇಶ್ ಜಾರಕಿಹೊಳಿ ಅಲ್ಲದೆ, ಬಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಉಮೇಶ್ ಜಾಧವ್ (ಚಿಂಚೋಳಿ), ಮಹೇಶ್ ಕಮಟಹಳ್ಳಿ (ಅಥಣಿ) ಗೈರು ಹಾಜರಾಗಿದ್ದರು. ಅತೃಪ್ತರ ಗೈರು ಹಾಜರಾತಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ನೀಡಿರುವುದಲ್ಲದೆ, ಆ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಗಂಡಾಂತರದ ಶಾಕ್ ಭೀತಿ ಮೂಡಿಸಿದೆ.

ಬಂಡಾಯ ಎದ್ದು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಅತೃಪ್ತ ಶಾಸಕರಾದ ಭೀಮಾನಾಯಕ್, ಪ್ರತಾಪ್‍ಗೌಡ ಪಾಟೀಲ್, ಜಿ.ಎನ್. ಗಣೇಶ್, ಬಸವರಾಜ್ ದದ್ದಲ್, ಶಿವರಾಮ್ ಹೆಬ್ಬಾರ್, ಶ್ರೀಮಂತ ಪಾಟೀಲ್, ಆನಂದ್‍ಸಿಂಗ್, ಅಮರೇಗೌಡ ಬಯ್ಯಾಪುರ ಸಭೆಗೆ ಹಾಜರಾಗಿ ಗಾಳಿ ಸುದ್ದಿ ದೂರ ಮಾಡಿದರು.

ರಮೇಶ್ ಜಾರಕಿಹೊಳಿ ಸಮೀಪವೇ ಕಾಣಿಸಿಕೊಳ್ಳುತ್ತಿದ್ದ ಕಂಪ್ಲಿ ಗಣೇಶ್ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿ, ಸಭೆಗೆ ಹಾಜರಾದರು. ಇಂದಿನ ಸಭೆಗೆ ಗೈರು ಹಾಜರಾಗಿರುವ ಸದಸ್ಯರ ವಿರುದ್ಧ ಪಕ್ಷಾಂತರ ನಿಷೇಧ ಕಲಂ 10ರ ಪ್ರಕಾರ ಶಿಸ್ತುಕ್ರಮ ಕೈಗೊಳ್ಳಲು ಪಕ್ಷ ಮುಂದಾಗಿದೆ. ತಡ ರಾತ್ರಿ ವೇಳೆಗೆ ಈ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅವರ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಪತ್ರ ಬರೆಯುವ ಸಾಧ್ಯತೆ ಇದೆ.

ಇಂದು ಬೆಳಿಗ್ಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಭೆಗೆ ಹಾಜರಾಗದ ಭಿನ್ನ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಪಕ್ಷ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
ರಾಹುಲ್‍ಗಾಂಧಿ ಅವರೇ ಸೂಚಿಸಿದ್ದಾರೆ. ಅದರನ್ವಯ ಕ್ರಮ ಕೈಗೊಳ್ಳೋಣ, ಇದು ಬೇರೆಯವರಿಗೂ ಎಚ್ಚರಿಕೆಯಾಗುತ್ತದೆ ಎಂದು ರಾಜ್ಯ ಉಸ್ತುವಾರಿ ಹೊಣೆ ಹೊತ್ತ ವೇಣುಗೋಪಾಲ್ ತಿಳಿಸಿದ್ದರು. ಇದರ ಸುಳಿವು ತಿಳಿಯುತ್ತಿದ್ದಂತೆ ಬೆಳಗಾವಿ ಯಲ್ಲಿರುವ ರಮೇಶ್ ಜಾರಕಿಹೊಳಿ ಅವರು, ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಯವರನ್ನು ಸಂಪರ್ಕಿಸಿ ನಾನು ಇಂದಿನ ಸಭೆಗೆ ಹಾಜರಾಗುತ್ತಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಗೊಳ್ಳುವುದಿಲ್ಲ. ವೇಣುಗೋಪಾಲ್ ಅವರನ್ನು ಸಂಪರ್ಕಿಸಿ, ಈ ಮಾಹಿತಿಯನ್ನು ನೀಡಿ, ನನ್ನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದಂತೆ ಅವರ ಮನವೊಲಿಸಿ ಎಂದು ಮುಖ್ಯಮಂತ್ರಿಯವರನ್ನು ದೂರವಾಣಿ ಮೂಲಕವೇ ಕೋರಿದ್ದರು.

ಅವರ ಕೋರಿಕೆಯನ್ನು ಕಾಂಗ್ರೆಸ್ ಯಾವ ರೀತಿ ಮನ್ನಿಸುತ್ತದೆಯೋ ತಿಳಿಯದು. ಕಳೆದ ಮೂರು ದಿನಗಳ ಹಿಂದೆಯೇ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆದಿರುವ ಮಾಹಿತಿಯನ್ನು ತಮ್ಮೆಲ್ಲ 80 ಸದಸ್ಯರಿಗೂ ತಿಳಿಸಿದ್ದಲ್ಲದೆ, ಸಭೆಗೆ ಗೈರು ಹಾಜರಾಗುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.

ದೂರದ ಊರಿನಿಂದ ಕೆಲವರು ಬರುತ್ತಿರುವುದಾಗಿ ಪಕ್ಷದ ನಾಯಕರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಮೂರು ಗಂಟೆ 30 ನಿಮಿಷಕ್ಕೆ ಆರಂಭಗೊಳ್ಳಬೇಕಿದ್ದ ಸಭೆಯನ್ನು 4.50ಕ್ಕೆ ಆರಂಭಿಸಿದರು. ಸಭೆ ಆರಂಭಕ್ಕೂ ಮುನ್ನ ಶಾಸಕಾಂಗ ಪಕ್ಷದ ಹಾಜರಾತಿ ಪುಸ್ತಕದಲ್ಲಿ ಎಲ್ಲರ ಹೆಸರು ಮತ್ತು ಸಹಿಯನ್ನು ಪಡೆದುಕೊಂಡು ಪಕ್ಷ ದಾಖಲಿಸಿಕೊಂಡಿದೆ. ಪಕ್ಷಕ್ಕೆ ಸೆಡ್ಡು ಹೊಡೆಯುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಉದ್ದೇಶದಿಂದಲೇ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಬೇಕಿದ್ದ ಸಭೆಯನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಸಲಾಯಿತು.

ವಿಧಾನಸಭಾಧ್ಯಕ್ಷರ ವ್ಯಾಪ್ತಿಯಲ್ಲಿ ಬರುವ ಕಟ್ಟಡದಲ್ಲೇ ಸಭೆ ನಡೆಸಿ, ಹಾಜರಾತಿ ತೆಗೆದುಕೊಳ್ಳುವುದರಿಂದ ಸಭೆಗೆ ಹಾಜರಾಗದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಕಾನೂನು ತಜ್ಞರ ಸಲಹೆಯಂತೆ ಇಂದಿನ ಸಭೆಯನ್ನು ನಡೆಸಲಾ ಗಿದೆ. ಸಭೆ ಆರಂಭವಾಗುತ್ತಿದ್ದಂತೆ ಸಭಾ ನಾಯಕ ಸಿದ್ದರಾಮಯ್ಯ ತುರ್ತಾಗಿ ಸಭೆ ಕರೆದಿದ್ದ ಔಚಿತ್ಯವನ್ನು ವಿವರಿಸಿದರು. ಆಮಿಷಗಳಿಗೆ ಒಳಗಾಗಿ ಬಿಜೆಪಿ ಪಕ್ಷ ಸೇರುವ ಕಡೆ ಗಮನಹರಿಸಬೇಡಿ. ಅದು ಮುಳುಗುವ ಹಡಗು, ನಿಮಗೆ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ. ಅಧಿಕಾರ ಎಲ್ಲರಿಗೂ ನೀಡಲಾಗದು. ಒಂದಲ್ಲ ಒಂದು ದಿನ ಎಲ್ಲರಿಗೂ ಅಧಿಕಾರ ಲಭ್ಯವಾಗುತ್ತದೆ. ಅಲ್ಲಿಯವರಿಗೂ ಕಾಯಬೇಕಾಗುತ್ತದೆ. ವಿಧಾನಸಭಾ ಸದಸ್ಯರಾಗುವುದೇ ಒಂದು ದೊಡ್ಡ ಸಾಧನೆ. ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ನೀವು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿ, ಮರು ಆಯ್ಕೆಗೆ ಮೊದಲು ದಾರಿ ಮಾಡಿಕೊಳ್ಳಿ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಆ ಪಕ್ಷದ ನಾಯಕರು ಅಧಿಕಾರದ ಲಾಲಸೆಗೆ ನಿಮ್ಮನ್ನು ಸೆಳೆದುಕೊಳ್ಳುತ್ತಾರೆ. ನಂತರ ನಾಯಿಗಿಂತ ಕಡೆಯಾಗಿ ನೋಡಿಕೊಳ್ಳುತ್ತಾರೆ.

ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಶಾಸಕರನ್ನು ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಅವರ ಗತಿ ಏನಾಯಿತು. ವೈಯುಕ್ತಿಕವಾಗಿ ವಚ್ರ್ಚಸ್ಸು ಉಳ್ಳವರು ಅಲ್ಲಿ ಉಳಿದುಕೊಂಡಿದ್ದಾರೆ. ಉಳಿದವರು ರಾಜಕೀಯವಾಗಿ ಪರದೆ ಹಿಂದೆ ಸರಿದಿದ್ದಾರೆ.

ಬಿಜೆಪಿಗೆ ಸದಾ ಕಾಲ ಆಪರೇಷನ್ ಕಮಲವೇ ಚಿಂತೆ, ಅವರು ಇದನ್ನು ಕರಗತ ಮಾಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ನಮಗೆ ಪೂರ್ಣ ಬಹುಮತ ಬಂದಿದ್ದರೆ, ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಮುಂದೆ ಒಳ್ಳೆ ದಿನಗಳು ಬರುತ್ತವೆ. ಎಚ್ಚರಿಕೆಯಿಂದ ರಾಜಕೀಯ ಹೆಜ್ಜೆ ಇಡಿ. ಗೈರು ಹಾಜರಾದವರ ವಿರುದ್ಧ ಕಠಿಣ ಕ್ರಮಕ್ಕೆ ರಾಷ್ಟ್ರೀಯ ಅಧ್ಯಕ್ಷರು ಸೂಚಿಸಿದ್ದಾರೆ. ಇದು ನಿಮ್ಮೆಲ್ಲರ ಗಮನದಲ್ಲಿರಲಿ ಎಂದು ಸಿದ್ದರಾಮಯ್ಯ ಭಿನ್ನರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಲೋಕ ಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಪುಟದ ಸದಸ್ಯರು, ಸಂಸತ್ ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಹಾಜರಿದ್ದರು.

Translate »