ಮೈಸೂರು: ಚಾಮುಂಡಿಬೆಟ್ಟದ ಮೀಸಲು ಅರಣ್ಯ ಸಂರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ, ಬೆಟ್ಟದ ಮೇಲೆ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳುವುದನ್ನು ತಡೆಗಟ್ಟಲು ಬೇಲಿ ನಿರ್ಮಾಣ ಮಾಡಿ ಅರಣ್ಯದ ಸರಹದ್ದು ಭದ್ರಪಡಿಸಿಕೊಳ್ಳಲು ಮುಂದಾಗಿದೆ.
ಬೆಟ್ಟದ ಮೇಲೆ ಅರಣ್ಯ ಪ್ರದೇಶಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಗ್ರಾಮಸ್ಥರು ಮನೆ ನಿರ್ಮಿಸಿ ಕೊಳ್ಳಲು ಮುಂದಾಗುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಮೀಸಲು ಅರಣ್ಯ ಒತ್ತುವರಿಯಾಗು ವುದನ್ನು ತಡೆಗಟ್ಟಲು ಹಾಗೂ ಬೆಟ್ಟದಲ್ಲಿರುವ ಕಾಡುಹಂದಿ, ಮುಳ್ಳುಹಂದಿ, ಚಿರತೆಗಳು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ ಬೆಟ್ಟದ ಮೇಲೆ ಗ್ರಾಮದ ಸುತ್ತ 1.3 ಕಿಮೀ ವಿಸ್ತೀರ್ಣ ದಲ್ಲಿ ಬೇಲಿ ಅಳವಡಿಸುವುದಕ್ಕೆ ಕ್ರಮ ಕೈಗೊಂಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ
ನಡೆಯುತ್ತಿದ್ದು, ಒಂದೂವರೆ ತಿಂಗಳಲ್ಲಿ ಬೇಲಿ ನಿರ್ಮಿಸಿ, ಅರಣ್ಯ ಮೀಸಲು ಪ್ರದೇಶ ಸರಹದ್ದು ಗುರುತಿಸಿ ಒತ್ತುವರಿಗೆ ಶಾಶ್ವತ ಕಡಿವಾಣ ಹಾಕಲಾಗುತ್ತದೆ.
ಒತ್ತುವರಿ ತಡೆ ಅರಣ್ಯ ಸಂರಕ್ಷಣೆ: ಮೈಸೂರು ವಿಭಾಗದ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಶುಕ್ರವಾರ ಬೆಟ್ಟಕ್ಕೆ ಭೇಟಿ ನೀಡಿ, ಅರಣ್ಯ ಪ್ರದೇಶದ ಒತ್ತುವರಿ ತಡೆಗೆ ಬೇಲಿ ಹಾಕುವ ಸ್ಥಳವನ್ನು ಪರಿಶೀಲಿಸಿದರು. ಅಲ್ಲದೆ ಯಾವುದೇ ಕಾರಣಕ್ಕೂ ಅಧಿಕಾರಿಗಳು ಒತ್ತುವರಿಗೆ ಅವಕಾಶ ನೀಡದಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಆರ್‍ಎಫ್‍ಒ ಗೋವಿಂದರಾಜು, ಡಿಆರ್‍ಎಫ್‍ಒ ವಿಜಯಕುಮಾರ್, ಗಾರ್ಡ್ ವಿರೂಪಾಕ್ಷ, ವಾಚರ್ ಮಾದಪ್ಪ ಉಪಸ್ಥಿತರಿದ್ದರು.
ಇದೇ ವೇಳೆ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಒತ್ತುವರಿ ತಡೆಗಟ್ಟಿ, ಅರಣ್ಯವನ್ನು ಸಂರಕ್ಷಿಸುವುದರೊಂದಿಗೆ ವನ್ಯಜೀವಿಗಳಿಂದ ಗ್ರಾಮಸ್ಥರಿಗೆ ಆಗುವ ತೊಂದರೆ ತಪ್ಪಿಸಲು ಬೆಟ್ಟದ ಗ್ರಾಮದ ಸುತ್ತಲೂ ಮೀಸಲು ಅರಣ್ಯ ಪ್ರದೇಶದಲ್ಲಿ ಚೈನ್ ಲಿಂಕ್ ಮೆಶ್ ಬೇಲಿಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಡಿಸಿಎಫ್ ಆಗಿದ್ದ ಡಾ.ಕೆ.ಟಿ.ಹನುಮಂತಪ್ಪ ಬೆಟ್ಟದ ಮೇಲೆ ಬೇಲಿ ನಿರ್ಮಾಣ ಕುರಿತಂತೆ ಪ್ರಸ್ತಾವನೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮದ ಸುತ್ತಲೂ 1.3 ಕಿಮೀವರೆಗೆ ಅಂದಾಜು 28 ಲಕ್ಷ ರೂ. ವೆಚ್ಚದಲ್ಲಿ ಬೇಲಿ ನಿರ್ಮಿಸಲಾಗುತ್ತದೆ. ಏಳು ಅಡಿ ಎತ್ತರ ಬೇಲಿ ಅಳವಡಿಸುವುದರಿಂದ ಕಾಡು ಪ್ರಾಣಿಗಳು ಗ್ರಾಮಕ್ಕೆ ನುಸುಳುವುದನ್ನು ತಪ್ಪಿಸಬಹುದಾಗಿದೆ. ಚಾಮುಂಡಿಬೆಟ್ಟದ ಮೀಸಲು ಅರಣ್ಯ ಪ್ರದೇಶ 1,516 ಎಕರೆ ವಿಸ್ತೀರ್ಣ ಹೊಂದಿದೆ. ಹಲವು ವರ್ಷಗಳ ಹಿಂದೆಯೇ ಬೆಟ್ಟದ ಸುತ್ತಲೂ ಚೈನ್ ಲಿಂಕ್ ಮೆಶ್ ಬೇಲಿಯನ್ನು ಅಳವಡಿಸಲಾಗಿದೆ ಎಂದರು.
ಪರಿಸರ ಪ್ರೇಮಿಗಳ ಸ್ವಾಗತ: ಚಾಮುಂಡಿಬೆಟ್ಟ ಗ್ರಾಮದಲ್ಲಿ ಹೊಸ ಮನೆಗಳ ನಿರ್ಮಾಣವಾಗುತ್ತಿದೆ. ಕೆಲವರು ಚಿಕ್ಕ ಮನೆ ಕೆಡವಿ ಮಹಡಿ ಮನೆಗಳನ್ನು ನಿರ್ಮಿಸಿ ಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಮನೆಯ ಮುಂದೆ ಇದ್ದ ಖಾಲಿ ಜಾಗದಲ್ಲಿ ಹೊಸ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಪ್ರಭಾವ ಬಳಸಿ ಮೀಸಲು ಅರಣ್ಯ ಪ್ರದೇಶವನ್ನೇ ನಿವೇಶನವನ್ನಾಗಿ ಪರಿವರ್ತಿಸಿಕೊಂಡು ಮನೆ ನಿರ್ಮಿಸಲು ಮುಂದಾಗುತ್ತಿದ್ದಾರೆ ಎಂಬ ದೂರು ಸಲ್ಲಿಕೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹೊಸದಾಗಿ ನಿರ್ಮಿಸಲಾಗುತ್ತಿದ್ದ ಎರಡು ಮನೆಗಳ ಕಾಮಗಾರಿಯನ್ನು ತಡೆದಿದ್ದರು. ಇದೀಗ ಮೀಸಲು ಅರಣ್ಯ ಒತ್ತುವರಿಗೆ ಕಡಿವಾಣ ಹಾಕಲು ಬೇಲಿ ನಿರ್ಮಿಸುತ್ತಿರುವುದನ್ನು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ.
ನಿರ್ಮಿಸಲಿ: ಬೆಟ್ಟದಲ್ಲಿ ಕಾಡುಹಂದಿ, ಮುಳ್ಳುಹಂದಿ ರಾತ್ರಿ ವೇಳೆ ಜನವಸತಿ ಬರುತ್ತವೆ. ಈ ವೇಳೆ ದಾಳಿ ನಡೆಸುವ ಸಂದರ್ಭವೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಬೇಲಿ ನಿರ್ಮಿಸು ವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದೆವು. ಇದೀಗ ಬೇಲಿ ನಿರ್ಮಾಣಕ್ಕೆ ಸರ್ವೆ ನಡೆಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ವಿಳಂಬ ಮಾಡದೆ ಕಾಮಗಾರಿ ಬೇಗ ಪೂರ್ಣಗೊಳಿಸಲಿ ಎಂದು ಬೆಟ್ಟದ ನಿವಾಸಿಯೊಬ್ಬರು ಒತ್ತಾಯಿಸಿದರು.