ಶ್ರವಣಬೆಳಗೊಳ ಮಾರ್ಗ ರಸ್ತೆ ದುರಸ್ತಿಗೆ ವರ್ತಕರ ಆಗ್ರಹ
ಮಂಡ್ಯ

ಶ್ರವಣಬೆಳಗೊಳ ಮಾರ್ಗ ರಸ್ತೆ ದುರಸ್ತಿಗೆ ವರ್ತಕರ ಆಗ್ರಹ

July 15, 2018

ಕೆ.ಆರ್.ಪೇಟೆ:  ಪಟ್ಟಣದ ಬಸವೇಶ್ವರ ವೃತ್ತದಿಂದ ಶ್ರವಣಬೆಳಗೊಳಕ್ಕೆ ಹೋಗುವ ನಡು ರಸ್ತೆಯಲ್ಲಿ ಕೊಳೆತು ನಾರುತ್ತಿರುವ ಮಳೆ ನೀರಿನಿಂದ ಸಾರ್ವ ಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಹೀಗಾಗಿ ತಕ್ಷಣ ರಸ್ತೆ ದುರಸ್ತಿಗೆ ಕ್ರಮ ವಹಿಸ ಬೇಕೆಂದು ಆಗ್ರಹಿಸಿ ಸದರಿ ರಸ್ತೆಯ ವರ್ತಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕಳೆದ 3 ತಿಂಗಳ ಹಿಂದೆ ಈ ರಸ್ತೆಯನ್ನು ದುರಸ್ಥಿ ಮಾಡಲಾಗಿತ್ತು. ಈ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತೆ ಯಿಂದ ಗುತ್ತಿಗೆದಾರರು ಮನಬಂದಂತೆ ರಸ್ತೆ ದುರಸ್ಥಿ ಮಾಡಿದ್ದಾರೆ. ಆದರೆ ಮಳೆ ನೀರು ರಸ್ತೆ ಯಿಂದ ಹೊರ ಹೋಗಲು ಸಾಧ್ಯವಾಗದೇ ವಾರಗಟ್ಟಲೆ ರಸ್ತೆ ಮಧ್ಯದಲ್ಲೇ ನಿಂತು ಗಬ್ಬೆದ್ದು ನಾರುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ. ಅಲ್ಲದೇ ನೀರು ರಸ್ತೆಯಲ್ಲೇ ನಿಂತಿರುವ ಕಾರಣ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಸಾಂಕ್ರಾಮಿಕ ರೋಗ ಹರಡಬಹುದಾದ ಭೀತಿ ಎದುರಾಗಿದೆ. ಅಲ್ಲದೇ ಈ ಸ್ಥಳದಲ್ಲಿ 3 ಮೆಡಿಕಲ್ ಸ್ಟೋರ್‍ಗಳಿವೆ.

2 ಹೋಟೆಲ್ ಗಳಿವೆ, 2 ಖಾಸಗಿ ಕ್ಲಿನಿಕ್‍ಗಳಿಗೆ ಅಲ್ಲಿಗೆ ಬರುವ ರೋಗಿಗಳಿಗೂ ರಸ್ತೆಯಲ್ಲಿ ನಿಂತಿರುವ ಕೊಳಚೆ ನೀರಿನ ದುರ್ವಾಸನೆ ಉಚಿತವಾಗಿ ದೊರೆಯುತ್ತಿದೆ. ಹಾಗಾಗಿ ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳು ತಕ್ಷಣ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ರಸ್ತೆ ದುರಸ್ತಿಗೊಳಿಸಬೇಕೆಂದು ಈ ಭಾಗದ ವರ್ತಕರು ಕೊಳಚೆ ನೀರು ನಿಂತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.

Translate »