ಮೈಸೂರು ವಿವಿಯಲ್ಲಿ ಟಿಪ್ಪು ಅಧ್ಯಯನ ಪೀಠ ಸ್ಥಾಪಿಸಿ: ಶಾಸಕ ತನ್ವೀರ್ ಸೇಠ್ ಆಗ್ರಹ
ಮೈಸೂರು

ಮೈಸೂರು ವಿವಿಯಲ್ಲಿ ಟಿಪ್ಪು ಅಧ್ಯಯನ ಪೀಠ ಸ್ಥಾಪಿಸಿ: ಶಾಸಕ ತನ್ವೀರ್ ಸೇಠ್ ಆಗ್ರಹ

November 11, 2018

ಮೈಸೂರು: ನಾಡು, ನುಡಿ ಹಾಗೂ ದೇಶದ ರಕ್ಷಣೆಗಾಗಿ ಹೋರಾಡಿ, ಪ್ರಾಣತ್ಯಾಗ ಮಾಡಿದ ಹಜರತ್ ಟಿಪ್ಪು ಸುಲ್ತಾನ್ ಅವರ ಬಗ್ಗೆ ಸಂಶೋಧನೆ ನಡೆಸಲು ಮೈಸೂರು ವಿಶ್ವವಿದ್ಯಾನಿಲಯ ದಲ್ಲಿ ಟಿಪ್ಪು ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಶಾಸಕ ತನ್ವೀರ್ ಸೇಠ್ ಅವರು ಇಂದಿಲ್ಲಿ ಒತ್ತಾಯಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಶಿಕ್ಷಣ ನೀತಿ, ಸಾರಾಯಿ ನಿಷೇಧ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಕೆಆರ್‍ಎಸ್ ಶಂಕುಸ್ಥಾಪನೆಯಂತಹ ಮಹಾ ಯೋಜನೆಗಳನ್ನು ಅಂದೇ ಜಾರಿಗೆ ತಂದಿದ್ದ ಟಿಪ್ಪು ಅವರ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಿ ಸಂಶೋಧನೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು. ಮುಸ್ಲಿಂ ಎಂಬ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸಲಾಗುತ್ತಿದೆ. ಅವ ರಂತಹ ಸಾಧನೆಯನ್ನು ಅನ್ಯ ಜಾತಿಯವರು ಮಾಡಿದ್ದರೆ ಪ್ರತಿಮೆ ಸ್ಥಾಪಿಸುತ್ತಿದ್ದರು. ಯುದ್ಧ ಮಾಡಿ ಪ್ರಜೆಗಳು ಹಾಗೂ ಸಾಮ್ರಾಜ್ಯ ರಕ್ಷಣೆ ಮಾಡಿದ ಟಿಪ್ಪು ಪ್ರಾಣ ತ್ಯಜಿಸಿದ್ದರೂ ಅವರ ಜಯಂತಿಗೆ ವಿರೋಧಿಸುತ್ತಿರುವುದು ವಿಷಾದನೀಯ ಎಂದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಅವರ ಪ್ರಾಣ ತೆಗೆದ ಜನ ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ. ಮೈಸೂರು ದೊರೆಗಳ ರಕ್ಷಣೆಗೆ ಬಂದವರು ಹೈದರಾಲಿ, ರಾಜರು ನೀಡಿದ 200 ಹಳ್ಳಿಗಳುಳ್ಳ ಸಾಮ್ರಾಜ್ಯ ರಕ್ಷಣೆ ಮಾಡಿದ್ದಾರೆ ಎಂದು ನುಡಿದರು. ಈ ನಾಡಿನ ಯಾವುದೇ ರಾಜರೂ ಯುದ್ಧದಲ್ಲಿ ಸತ್ತ ಉದಾಹರಣೆ ಗಳಿಲ್ಲ. ದುಡಿಯುವವರ ಕೈಗೆ ಕೆಲಸ ಕೊಟ್ಟು ಬಸವಣ್ಣನವರ ಕಾಯಕವೇ ಕೈಲಾಸ ಎಂಬುದನ್ನು ಸಾಕಾರಗೊಳಿಸಿದ ಟಿಪ್ಪು ಸುಲ್ತಾನ್, ಕೇರಳದಲ್ಲಿ ನಡೆಯುತ್ತಿದ್ದ ಅರೆಬೆತ್ತಲೆಯನ್ನು ಹೋಗಲಾಡಿಸಿ, ಬಟ್ಟೆ ತೊಡಿಸಿದರು. ಕೇವಲ ಸಂಘರ್ಷದಲ್ಲೇ ದೇಶದ ರಕ್ಷಣೆಗೆ ಹೋರಾಡಿದರೇ ಹೊರತು ರಾಜಿಗೆ ಒಪ್ಪಲಿಲ್ಲ ಎಂದೂ ತನ್ವೀರ್ ಸೇಠ್ ತಿಳಿಸಿದರು.

ಬಹಿರಂಗ ಚರ್ಚೆಗೆ ಸಿದ್ಧ: ಟಿಪ್ಪು ಸುಲ್ತಾನ್ ಅವರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಟಿಪ್ಪು ಅವರ ಬಗ್ಗೆ ವಿರೋಧ ಮಾಡು ತ್ತಿರುವ ಬಿಜೆಪಿಯವರಿಗೆ ಸುಲ್ತಾನನಾಗಿ ಟಿಪ್ಪು ಈ ದೇಶಕ್ಕೆ ನೀಡಿರುವ ಕೊಡುಗೆ ಬಗ್ಗೆ ತಿಳಿಸಿಕೊಡಲು ನಾನು ಸಿದ್ಧನಿದ್ದೇನೆ. ಯಾವುದೇ ವೇದಿಕೆಗೂ ಬರಲು ಸಿದ್ಧನಿದ್ದೇನೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಪ್ರಾಣ ತೆಗೆದ ನೀವು ಟಿಪ್ಪು ಜಯಂತಿ ವಿರೋಧಿಸಿ ರಾಜಕೀಯ ಲಾಭ ಪಡೆಯಬೇಕೆಂದಿದ್ದರೆ ಅದು ನಿಮಗೇ ತಿರುಗುಬಾಣವಾಗಲಿದೆ ಎಂದು ತನ್ವೀರ್ ಸೇಠ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಮಾಧ್ಯಮದ ಮೇಲೂ ಹರಿ ಹಾಯ್ದ ಶಾಸಕರು, ಮಾಧ್ಯಮಗಳು ಸಮಾಜವನ್ನು ಕೆರಳಿಸುವ ಕೆಲಸ ಮಾಡುತ್ತಿವೆ. ವ್ಯಾಪಾ ರವೇ ಪ್ರಧಾನವಾಗಿದೆ. ಟಿಆರ್‍ಪಿಗಾಗಿ ಅಥವಾ ಪ್ರಸರಣ ಹೆಚ್ಚಿಸಿಕೊಂಡು ಹಣ ಗಳಿಕೆ ವಹಿವಾಟುಗಳನ್ನು ಧರ್ಮವಾಗಿಸಿಕೊಂಡರೆ ನ್ಯಾಯ ದೊರಕಿಸುವವರ್ಯಾರು ಎಂದು ಪ್ರಶ್ನಿಸಿದರು.

Translate »