ಮೈಸೂರಿನಲ್ಲಿ ವಿಶ್ವದರ್ಜೆ ಕ್ರಿಕೆಟ್ ಮೈದಾನ ನಿರ್ಮಾಣ
News

ಮೈಸೂರಿನಲ್ಲಿ ವಿಶ್ವದರ್ಜೆ ಕ್ರಿಕೆಟ್ ಮೈದಾನ ನಿರ್ಮಾಣ

March 18, 2021

ಬೆಂಗಳೂರು,ಮಾ.16- ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ತನ್ವಿರ್ ಸೇಠ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಹೊರತುಪಡಿಸಿದರೆ ಮೈಸೂರು 2ನೇ ಅತೀ ದೊಡ್ಡ ನಗರವಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟು ಗಳನ್ನು ಉತ್ತೇಜಿಸಲು ಅನುವಾಗುವಂತೆ ಕ್ರೀಡಾಂಗಣವನ್ನು ನಿರ್ಮಾಣ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಶೀಘ್ರದಲ್ಲೇ ಅಧಿಕಾರಿಗಳು ಮತ್ತು ಜನಪ್ರತಿನಿಗಳ ಸಭೆಗೆ ಕರೆಯುವುದಾಗಿ ತಿಳಿಸಿದರು.
ಕ್ರೀಡಾಂಗಣ ನಿರ್ಮಿಸಲು ರಾಜ್ಯ ಸರ್ಕಾರ 25 ಕೋಟಿ ಹಾಗೂ ಕೇಂದ್ರ 25 ಕೋಟಿ ರೂ. ಅನುದಾನವನ್ನು ನೀಡಲಿದೆ ಎಂದರು.

ಇದಕ್ಕೂ ಮುನ್ನ ಶಾಸಕ ತನ್ವೀರ್ ಸೇಠ್ ಮಾತನಾಡಿ, ಬೆಂಗಳೂರು ಹೊರತುಪಡಿಸಿದರೆ ಮೈಸೂರು 2ನೇ ದೊಡ್ಡ ನಗರವಾಗಿದೆ. ಬೆಂಗಳೂರಿ ನಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾದರಿಯಲ್ಲಿ ಮೈಸೂರಿನಲ್ಲಿ ಕ್ರಿಕೆಟ್ ಮೈದಾನವನ್ನು ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

Translate »