ಟಿಪ್ಪು ಸುಲ್ತಾನ್ ಮೊದಲು ತಿಪ್ಪೇಸ್ವಾಮಿ ಆಗಿದ್ದ!
ಮೈಸೂರು

ಟಿಪ್ಪು ಸುಲ್ತಾನ್ ಮೊದಲು ತಿಪ್ಪೇಸ್ವಾಮಿ ಆಗಿದ್ದ!

November 11, 2018

ಬಳ್ಳಾರಿ: ಮೈಸೂರಿನ ಟಿಪ್ಪು ಸುಲ್ತಾನ್‍ನ ಮುಂಚಿನ ಹೆಸರು ತಿಪ್ಪೇಸ್ವಾಮಿ ಎಂದಾಗಿತ್ತು! ಹೀಗೊಂದು ಆಶ್ಚರ್ಯಕರವಾದ ಮಾತು ಹೇಳಿದ್ದು ಬೇರಾರೂ ಅಲ್ಲ, ಬಳ್ಳಾರಿಯಲ್ಲಿ ಇತ್ತೀಚೆಗಷ್ಟೇ ನಡೆದ ಉಪ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ.

ಟಿಪ್ಪು ಸುಲ್ತಾನ್ ನಾಯಕನಹಟ್ಟಿಯ ತಿಪ್ಪೇಸ್ವಾಮಿ ವರಪ್ರಸಾದ ದಿಂದ ಹುಟ್ಟಿದವರು. ಅದಕ್ಕೇ ಅವರಿಗೆ ತಿಪ್ಪೇಸ್ವಾಮಿ ಅಂತಾ ಮೊದಲು ಹೆಸರಿಟ್ಟಿದ್ದರು. ಇದನ್ನು ಅಲ್ಲಿನ ಜನರೇ ಹೇಳುತ್ತಾರೆ. ಬಳಿಕ ಅವರ ಹೆಸರು ಟಿಪ್ಪು ಎಂದು ಪರಿವರ್ತನೆಯಾಗಿದೆ ಎಂದು ನೂತನ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಂಟಿಯಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ನಾನು ಇತ್ತೀಚೆಗೆ ನಾಯಕನಹಟ್ಟಿಗೆ ಹೋಗಿದ್ದಾಗ ನನಗೆ ಅಲ್ಲಿನ ಜನರೇ ಹೇಳಿದರು. ತಿಪ್ಪೇಸ್ವಾಮಿಯ ವರಪ್ರಸಾದವಾಗಿ ಟಿಪ್ಪುಸುಲ್ತಾನ್ ಜನಿಸಿದರು. ಹೀಗಾಗಿ, ಅವರಿಗೆ ಮೊದಲು ತಿಪ್ಪೇಸ್ವಾಮಿ ಅಂತಾ ಹೆಸರಿಟ್ಟಿದ್ದರು. ನಂತರ ಟಿಪ್ಪುವಾಗಿದೆ.

ಆಗ ಯುದ್ಧ ಅಗತ್ಯವಾಗಿತ್ತು: ಯಾವುದೇ ಜಯಂತಿ ಇರಲಿ, ಹುಳುಕು ಹುಡುಕುವುದಕ್ಕಿಂತ ಆ ವ್ಯಕ್ತಿಯ ಆದರ್ಶ ಗಮನಿಸಬೇಕು. ಟಿಪ್ಪು ಸುಲ್ತಾನ್ ಆ ಕಾಲದಲ್ಲಿ ಶೃಂಗೇರಿ, ಶ್ರೀರಂಗಪಟ್ಟಣ, ನಾಯಕನಹಟ್ಟಿ ದೇಗುಲಕ್ಕೆ ಸಹಾಯಹಸ್ತ ಚಾಚಿದ್ದರು. ರಾಜರ ಕಾಲದಲ್ಲಿ ನಡೆದ ಘಟನೆಗಳು ರಾಜ್ಯದ ವಿಸ್ತರಣೆಗೆ ಅಥವಾ ಬೇರೆ ಕಾರಣಗಳಿಗಾಗಿ ಆಗಿರಬಹುದು. ಆದರೆ, ಬ್ರಿಟಿಷರು ದೇಶದ ಮೇಲೆ ದಾಳಿ ನಡೆಸಿ, ನೂರಾರು ವರ್ಷ ನಮ್ಮವರನ್ನು ಗುಲಾಮರಂತೆ ಇಟ್ಟುಕೊಂಡಿದ್ದರು. ಆಗ ಒಂದೆಡೆ ಕಿತ್ತೂರು ರಾಣಿ ಚನ್ನಮ್ಮ, ಇನ್ನೊಂದೆಡೆ ಸುರಪುರದ ಪಾಳೆಗಾರ ವೆಂಕಟಪ್ಪ ನಾಯಕ, ಮತ್ತೊಂದೆಡೆ ಮೈಸೂರಿನ ಟಿಪ್ಪು ಸುಲ್ತಾನ್ ಆಧುನಿಕ ಯುದ್ಧ ತಂತ್ರಗಳನ್ನು ಬಳಸಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದರು. ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೇ ಈ ವಿಚಾರ ಹೇಳಿದ್ದರು. ಟಿಪ್ಪು ಸುಲ್ತಾನ್ ರಾಷ್ಟ್ರ ಭಕ್ತ. ಆ ಕಾಲದಲ್ಲಿಯೇ ರಾಕೆಟ್ ತಂತ್ರಜ್ಞಾನ ಬಳಸಿದ್ದ ಎಂದು ಹೊಗಳಿದ್ದರು ಎಂದು ಉಗ್ರಪ್ಪ ನೆನಪಿಸಿದರು.

Translate »