ಲ್ಯಾಬ್ ಖಾಸಗೀಕರಣ ಮಾಡದಂತೆ ಆಗ್ರಹ, ವಾಗ್ವಾದ
ಹಾಸನ

ಲ್ಯಾಬ್ ಖಾಸಗೀಕರಣ ಮಾಡದಂತೆ ಆಗ್ರಹ, ವಾಗ್ವಾದ

August 9, 2018

ಹಾಸನ: ನಗರದ ಮಿಷನ್ ಆಸ್ಪತ್ರೆ ಯಲ್ಲಿರುವ ಲ್ಯಾಬ್‍ನ ಖಾಸಗೀಕರಣ ನಿರ್ಧಾರ ಖಂಡಿಸಿ ಆಸ್ಪತ್ರೆ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದರು. ಈ ವೇಳೆ ವಾಗ್ವಾದ ಏರ್ಪಟ್ಟಿತು.

ನಗರದ ಮಿಷನ್ ಆಸ್ಪತ್ರೆ ಆಡಳಿತ ಮಂಡಳಿಯು ಅಲ್ಲಿರುವ ಲ್ಯಾಬ್ ಖಾಸಗೀಕರಣಗೊಳಿಸಲು ನಿರ್ಧರಿಸಿದ್ದು, ಈ ಹಿನ್ನೆಲೆ ಲ್ಯಾಬ್‍ನ ಇಬ್ಬರು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಹಿಸಿದೆ. ಇದರಿಂದ ಅಸಮಾಧಾನಗೊಂಡ ಆಸ್ಪತ್ರೆಯ ಇತರ ಸಿಬ್ಬಂದಿ ಆಡಳಿತ ಮಂಡಳಿ ಯವರ ವಿರುದ್ಧ ಇಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಆಸ್ಪತ್ರೆ ಆಡಳಿತಾಧಿಕಾರಿ ರೋಹನ್, ಮ್ಯಾನೇಜ್‍ಮೆಂಟ್‍ನ ಮುಖ್ಯಸ್ಥೆ ಜ್ಯೋತಿ ಸಿಬ್ಬಂದಿಯೊಂದಿಗೆ ಚರ್ಚಿಸಲು ಮುಂದಾದರು. ಇದರಿಂದ ವಾಗ್ವಾದ ಏರ್ಪಟ್ಟಿತು. ವಿಷಯ ತಿಳಿದು ಸ್ಥಳಕ್ಕಾಗಮಿ ಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಿಷನ್ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಯಲ್ಲಿನ ಲ್ಯಾಬ್ ಅನ್ನು ಖಾಸಗೀಕರಣಗೊಳಿಸಲು 36 ವರ್ಷದಿಂದ ಲ್ಯಾಬ್ ಇನ್‍ಚಾರ್ಜ್ ಆಗಿದ್ದ ಸಿಬ್ಬಂದಿ ದೊರೆರಾಜು ಮತ್ತು 20 ವರ್ಷದಿಂದ ಸೇವೆ ಸಲ್ಲಿಸಿದ್ದ ವಿಜಯ ಕುಮಾರಿಯನ್ನು ಏಕಾಏಕಿ ಇಲ್ಲಿಂದ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ದೂರಿದರಲ್ಲದೆ, ಆಸ್ಪತ್ರೆಯಲ್ಲಿನ ಲ್ಯಾಬ್ ಖಾಸಗಿಯವರಿಗೆ ನೀಡುವ ಮೂಲಕ ಆಡಳಿತ ಮಂಡಳಿ ಹಳೇ ಸಿಬ್ಬಂದಿಗೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಲ್ಯಾಬ್ ಅನ್ನು ಖಾಸಗೀಕರಣಗೊಳಿಸ ಬಾರದು. ಇಲ್ಲಿಂದ ವರ್ಗಾಯಿಸಿರುವ ಸಿಬ್ಬಂದಿಯನ್ನು ಇಲ್ಲೇ ಮುಂದುವರೆಸ ಬೇಕು. ಜೊತೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಮೂಲಕ ಲ್ಯಾಬ್ ಅಭಿವೃದ್ಧಿಗೊಳಿಸಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಿಷನ್ ಆಸ್ಪತ್ರೆ ಆಡಳಿತಾಧಿಕಾರಿ ಫಾದರ್ ರೋಹನ್ ಮಾತನಾಡಿ, ಲ್ಯಾಬ್‍ನಿಂದ ನಾವು ಯಾರನ್ನು ತೆಗೆದು ಹಾಕಿಲ್ಲ. ಬೇರೆ ವಿಭಾಗಕ್ಕೆ ವರ್ಗಾಯಿಸಿದ್ದೇವೆ. ಮೇಲಧಿಕಾರಿಗಳ ಆದೇಶ ನಾವು ಪಾಲಿಸಿದ್ದೇವೆ. ಆಸ್ಪತ್ರೆಯಲ್ಲಿರುವ ಲ್ಯಾಬ್ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಹೊರಗಿನಿಂದ ಒಂದು ತಂಡವನ್ನು ಕರೆಯಿಸುತ್ತಿದ್ದೇವೆ. 35 ಲಕ್ಷ ರೂ.ಗಳ ವೆಚ್ಚದಲ್ಲಿ ಲ್ಯಾಬ್ ಅನ್ನು ಅಭಿವೃದ್ಧಿಪಡಿಸಲು ಆಸ್ಪತ್ರೆಯಿಂದ ಸಾಧ್ಯವಿಲ್ಲ. ಈ ಕಾರಣದಿಂದ ಖಾಸಗಿಯವರಿಗೆ ಲ್ಯಾಬ್ ವಹಿಸಲಾಗುತ್ತಿದೆ. ಅವರೇ ಸಿಬ್ಬಂದಿಯನ್ನು ನೇಮಿಸಿಕೊಂಡು ಕೆಲಸ ಮಾಡಿಸುತ್ತಾರೆ. ಆಸ್ಪತ್ರೆ ಅಭಿವೃದ್ಧಿ ಆಗಲಿ ಎಂಬುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

Translate »