ಕೊಳವೆ ಬಾವಿ ಕೊರೆಯಲು ಅನುಮತಿ ಕಡ್ಡಾಯ
ಹಾಸನ

ಕೊಳವೆ ಬಾವಿ ಕೊರೆಯಲು ಅನುಮತಿ ಕಡ್ಡಾಯ

August 9, 2018

ಹಾಸನ:  ಅಂತರ್ಜಲ ಪ್ರಮಾಣ ಕುಸಿದಿಸಿದಿರುವ ಜಿಲ್ಲೆಯ ಅರಸೀಕೆರೆಯು ಅಧಿಸೂಚಿತ ಅತೀ ಬಳಕೆ ಪ್ರದೇಶ ಆಗಿರುವುದರಿಂದ ಬಾವಿ/ಕೊಳವೆ ಬಾವಿಯನ್ನು ಕೊರೆದು ಅಂತರ್ಜಲವನ್ನು ತೆಗೆಯಲು ಮತ್ತು ಬಳಸಲು ನಿಯೋಜಿತ ಸಮಿತಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ.

ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ 43 ಅಂತರ್ಜಲ ಅತೀ ಬಳಕೆ ತಾಲೂಕುಗಳನ್ನು ಅಧಿಸೂಚಿಸಿದ್ದು, ಅದರಲ್ಲಿ ಅರಸೀಕೆರೆ ತಾಲೂಕು ಅತೀ ಬಳಕೆ ಪ್ರದೇಶವಾಗಿದ್ದು, ತಾಲೂಕಿನಲ್ಲಿ ಸಾರ್ವಜನಿಕ ಕುಡಿಯುವ ನೀರು ಯೋಜನೆ ಕೊಳವೆ ಬಾವಿಗಳಿರುವ 500 ಮೀ. ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಕೊಳವೆ ಬಾವಿ ಕೊರೆಸಲು ಅನುಮತಿ ನೀಡಬಾರದು ತಿಳಿಸಿದರು.

ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ಹೆಸರು ನೋಂದಾಯಿಸದೆ ಹಾಗೆಯೇ ಜಿಲ್ಲೆ ಯಲ್ಲಿ ಕೊಳವೆ ಬಾವಿ ಕೊರೆಯುತ್ತಿರುವ ರಿಗ್ ಯಂತ್ರಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದ ಅವರು, ವಿಫಲ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬಿದ್ದು ಸಾವಿಗೀಡಾಗುವ ಅವಘಡಗಳನ್ನು ತಪ್ಪಿಸಲು ಘನ ಉಚ್ಛನ್ಯಾಯಾಲಯದ ಆದೇಶ ಪಾಲನೆ ಮಾಡಲು ಸರ್ಕಾರವು ಸುತ್ತೋಲೆಯನ್ನು ಹೊರಡಿಸಿದೆ. ಅದರಂತೆ ಕೊಳವೆ ಬಾವಿ ವಿಫಲವಾದಲ್ಲಿ ಮಣ್ಣಿನಿಂದ-ಕಲ್ಲಿನಿಂದ ಸಂಪೂರ್ಣವಾಗಿ ಮುಚ್ಚಲು ಕೊಳವೆ ಬಾವಿ ಕೊರೆಯುವ ರಿಗ್ ಯಂತ್ರಗಳ ಮಾಲೀಕರು ಜವಾಬ್ದಾರಿವಹಿಸಬೇಕು ಎಂದರಲ್ಲದೆ, ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚಿ ಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿದರು.

ಸಫಲ/ವಿಫಲ ಕೊಳವೆ ಬಾವಿಗಳ ಬಗ್ಗೆ ಪರಿಶೀಲನೆ ನಡೆಸಿ, ನಿಗದಿತ ನಮೂನೆಯಲ್ಲಿ ನೋಂದಾಯಿಸತಕ್ಕದ್ದು, ಪ್ರತಿ ತಿಂಗಳ ಮೊದಲನೇ ತಾರೀಖು ತಿಂಗಳ ಕ್ರೋಢೀಕೃತ ಮಾಹಿತಿಯನ್ನು ತಾಪಂಗೆ ಸಲ್ಲಿಸತಕ್ಕದ್ದು, ಹಾಗೇ ತಾಪಂ ಈ ಮಾಹಿತಿಯನ್ನು ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇಗೆ ಕಳುಹಿಸುವಂತೆ, ಅದೇ ರೀತಿ ನಗರ ಸ್ಥಳೀಯ ಪ್ರಾಧಿಕಾರಗಳು ತಿಂಗಳ ಕ್ರೋಢೀಕೃತ ಮಾಹಿತಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ಸಲ್ಲಿಸುವಂತೆ ಸೂಚಿಸಿದರು.

ಜಿಪಂ ಉಪಕಾರ್ಯದರ್ಶಿ ಎನ್.ಆರ್. ರಮೇಶ್, ಸಣ್ಣ ನೀರಾವರಿ ಇಲಾಖೆ ಇಇ ಡಿ.ಕುಮಾರಸ್ವಾಮಿ, ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಶಿವಕುಮಾರ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜೇಶ್, ಹಿರಿಯ ಭೂವಿಜ್ಞಾನಿ ಜಿಲ್ಲಾ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಸುಧಾ ಮತ್ತಿತರರು ಸಭೆಯಲ್ಲಿದ್ದರು.

Translate »