ಹಾಸನ ನಗರಸಭೆಯ 35 ವಾರ್ಡ್‍ನಲ್ಲೂ ಸ್ಪರ್ಧೆ:ಸಚಿವ ಹೆಚ್.ಡಿ.ರೇವಣ್ಣ
ಹಾಸನ

ಹಾಸನ ನಗರಸಭೆಯ 35 ವಾರ್ಡ್‍ನಲ್ಲೂ ಸ್ಪರ್ಧೆ:ಸಚಿವ ಹೆಚ್.ಡಿ.ರೇವಣ್ಣ

August 9, 2018

ಹಾಸನ: ಆಗಸ್ಟ್ 29ರಂದು ನಡೆಯುವ ಹಾಸನ ನಗರಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗದಂತೆ 35 ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

ನಗರದ ಎಂ.ಜಿ ರಸ್ತೆಯ ಶ್ರೀ ಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‍ನಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಜೆಡಿಎಸ್ ನಾಯಕರ ಅಭಿಪ್ರಾಯ ಪಡೆದು ನಗರಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಜಿಲ್ಲೆಯಲ್ಲಿ 2 ನಗರ ಸಭೆ ಸೇರಿದಂತೆ ಪುರಸಭೆಗಳಿಗೆ ಚುನಾವಣೆ ನಡೆಯಲಿದೆ. ಯಾವ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಅಡಚಣೆಯಾಗದಂತೆ ನಿಗಾವಹಿಸಲಾಗುತ್ತದೆ ಎಂದರು.

ಸ್ಥಳೀಯ ಚುನಾವಣೆಯಲ್ಲಿ ರಾಜ್ಯದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಜನ ಪರ ಯೋಜನೆಯನ್ನು ಸಾರ್ವಜನಿಕರ ಮುಂದಿಡಲಾಗುವುದು. ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲಮನ್ನಾ ಮಾಡುವ ಮೂಲಕ ರೈತರಿಗೆ ಕುಮಾರಸ್ವಾಮಿ ಅನುಕೂಲ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಧ ಜನಪರ ಕಾರ್ಯಕ್ರಮಗಳ ಬಗ್ಗೆ ಈಗಾಗಲೇ ಪಟ್ಟಿ ಮಾಡಿದ್ದು, ಅವುಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ, ಜಿಲ್ಲೆಯ ಜನತೆಗೆ ಅನುಕೂಲವಾಗಿದೆ ಎಂದರು.

ಹಾಸನ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್, ನಗರಸಭಾಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್, ಮುಖಂಡ ರಾದ ಪಟೇಲ್ ಶಿವರಾಂ, ಮತ್ತು ಕೆ.ಎಂ. ರಾಜೇಗೌಡ ಇತರರು ಚರ್ಚಿಸಿ ಆಯ್ಕೆ ಮಾಡುವರು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರು ಇದ್ದು, ಹಾಸನ ಕ್ಷೇತ್ರದಲ್ಲಿ ಮಾತ್ರ ಬೇರೆ ಪಕ್ಷದವರು ಇದ್ದಾರೆ ಎಂದು ಕಾರ್ಯಕರ್ತರಲ್ಲಿ ಯಾವ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಾರದು. ನಮ್ಮಲ್ಲೇ ಭಿನ್ನಾಭಿ ಪ್ರಾಯ ಇದ್ದುದ್ದರಿಂದ ವಿಧಾನ ಸಭೆ ಚುನಾವಣೆಯಲ್ಲಿ ಹೆಚ್.ಎಸ್.ಪ್ರಕಾಶ್ ಸೋಲು ಅನುಭವಿಸಬೇಕಾಯಿತು ಎಂದು ವಿಷಾದಿಸಿದರಲ್ಲದೆ, ಮುಂದೆ ಹಾಸನ ಕ್ಷೇತ್ರದಲ್ಲೂ ನಾನೇ ಶಾಸಕನಂತೆ ಕೆಲಸ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಕಾರ್ಯ ಕರ್ತರಿಗೆ ಧೈರ್ಯ ತುಂಬಿದರು. ಈ ವೇಳೆ ಅಭ್ಯರ್ಥಿಗಳ ಆಯ್ಕೆ ಯಲ್ಲಿ ತಳ ಮಟ್ಟದ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ನೆರೆದಿದ್ದ ಕಾರ್ಯರ್ತರು ಒತ್ತಾಯಿಸಿದರು. ಇದಕ್ಕೆ ಹೆಚ್.ಡಿ.ರೇವಣ್ಣ ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ಮಾಜಿ ಎಂಎಲ್‍ಸಿ ಸದಸ್ಯ ಪಟೇಲ್ ಶಿವರಾಂ, ಮುಖಂಡ ಕೆ.ಎಂ. ರಾಜೇ ಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ದ್ಯಾವೇ ಗೌಡ, ಹೆಚ್‍ಡಿಸಿಸಿ ಬ್ಯಾಂಕ್, ಎಪಿಎಂ ಸಿಯ ಜಯರಾಂ, ಲಕ್ಷ್ಮಣ್, ನಗರ ಸಭಾಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್, ಜಿಪಂ ಸದಸ್ಯ ಹೆಚ್.ಎಸ್. ಸ್ವರೂಪ್ ಇತರರಿದ್ದರು.

ಟೀಕಿಸುವವರು ಟ್ವೀಟ್ ಮಾಡುತ್ತಿರಲಿ: ಟೀಕಿಸುವವರು ಟ್ವೀಟ್ ಮಾಡುತ್ತಿರಲಿ… ನಾನು ಜನಪರ ಕೆಲಸಕ್ಕೆ ಮಾಡುತ್ತಿರುತ್ತೇನೆ. ಹೊಟ್ಟೆ ತುಂಬಿದವರು ಟ್ವೀಟ್ ಮಾಡ್ತಾರೆ ಎಂದು ಬಿಎಸ್‍ವೈ ವಿರುದ್ಧ ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.

ಜೆಡಿಎಸ್‍ನಲ್ಲಿ ಮೂವರು ಸಿಎಂ ಇದ್ದಾರೆಂಬ ಬಿಜೆಪಿ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅವರು, ಟೀಕಿಸುವವರಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಡುತ್ತಿರೋ ಕೆಲಸದಿಂದ ಹೊಟ್ಟೆ ಉರಿ ಶುರುವಾಗಿದೆ. ಯಡಿಯೂರಪ್ಪ ತಾವು ವಿಪಕ್ಷ ನಾಯಕ ಅನ್ನೋ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ ಎಂದು ಛೇಡಿಸಿದರಲ್ಲದೆ, ಯಡಿಯೂರಪ್ಪ ಅವರ ಒತ್ತಾಯದಂತೆ ಒಂದೇ ಸಲ ರೈತರದ ಎಲ್ಲಾ ಸಾಲಮನ್ನಾ ಮಾಡಲು ಕುಮಾರ ಸ್ವಾಮಿ ಏನು ಮಂತ್ರವಾದಿಯಾ?. ಯಡಿಯೂರಪ್ಪ ಅವರ ಬಳಿ ನೋಟ್ ಪ್ರಿಂಟ್ ಮಿಷನ್ ಇದೆ. ನಮ್ಮ ಬಳಿ ಅದು ಇಲ್ಲ. ಅಷ್ಟು ಕಾಳಜಿ ಇದ್ದರೇ ಕೇಂದ್ರ ದಿಂದ ರೈತರ ಉಳಿದ ಸಾಲ ಮನ್ನಾ ಮಾಡಿಸಲಿ ಎಂದು ಟಾಂಗ್ ನೀಡಿದರು.

Translate »