ಗುಂಡ್ಲುಪೇಟೆ-ತಮಿಳುನಾಡು ಗಡಿ ಭಾಗದಲ್ಲಿ ವಾಹನಗಳಿಗೆ ತಡೆ
ಚಾಮರಾಜನಗರ

ಗುಂಡ್ಲುಪೇಟೆ-ತಮಿಳುನಾಡು ಗಡಿ ಭಾಗದಲ್ಲಿ ವಾಹನಗಳಿಗೆ ತಡೆ

August 9, 2018

ಗುಂಡ್ಲುಪೇಟೆ:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಿಂದ ತಮಿಳುನಾಡಿನತ್ತ ತೆರಳುವ ಎಲ್ಲಾ ವಾಹನಗಳನ್ನೂ ಕರ್ನ ಟಕದ ಗಡಿಭಾಗವಾದ ಕೆಕ್ಕನಹಳ್ಳ ಪ್ರದೇಶದಲ್ಲಿ ಸಂಜೆಯವರೆವಿಗೂ ತಡೆ ಹಿಡಿಯಲಾಯಿತು.

ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಮೇಲುಕಾಮನಹಳ್ಳಿ ಹಾಗೂ ಕೆಕ್ಕನ ಹಳ್ಳ ಚೆಕ್ ಪೋಸ್ಟ್ ಬಳಿ ಬೆಳಗ್ಗಿನಿಂದಲೇ ಎಲ್ಲಾ ವಾಹನಗಳನ್ನೂ ತಡೆ ಹಿಡಿಯಲಾಯಿತು. ಇದರಿಂದ ಸುಮಾರು ಮೂರು ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳನ್ನು ತಡೆದಿದ್ದರಿಂದ ಈ ಮಾರ್ಗದಲ್ಲಿ ಹೊರಟಿದ್ದ ಪ್ರವಾಸಿಗರು ಆಹಾರಕ್ಕಾಗಿ ಪರದಾಡುವಂತಾಯಿತು. ಸಾರಿಗೆ ಬಸ್ಸುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದ್ದರಿಂದ ತಮಿಳುನಾಡಿನತ್ತ ಹೊರಟಿದ್ದ ಪ್ರಯಾಣಿಕರು ಪರದಾಡಿದರು.

ತಮಿಳುನಾಡಿನಿಂದ ರಾಜ್ಯಕ್ಕೆ ಬರುವ ವಾಹನಗಳನ್ನು ಬಿಡುತ್ತಿದ್ದೀರಿ. ನಮ್ಮನ್ನೂ ಹೋಗಲು ಅವಕಾಶ ನೀಡಿ ಎಂದು ಹಲವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರವಾಸಿಗರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಸರ್ಕಾರದ ಆದೇಶದಂತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶ ಬಂದ ನಂತರ ಬಿಡಲಾಗುವುದು ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

ಸಂಜೆಯ ನಂತರ ವಾಹನ ಸಂಚಾರವನ್ನು ಮುಕ್ತಗೊಳಿಸಲಾಯಿತು. ಸರ್ಕಲ್ ಇನ್ಸ್‍ಪೆಕ್ಟರ್ ಎಚ್.ಎನ್.ಬಾಲಕೃಷ್ಣ, ಪಟ್ಟಣ ಠಾಣೆಯ ಪಿಎಸ್‍ಐ ಬಿ.ಎಸ್.ಶಿವರುದ್ರ ಸ್ಥಳದಲ್ಲಿಯೇ ಮೊಕ್ಕಾಂ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

Translate »