ಜಿಲ್ಲಾಧಿಕಾರಿಗಳು ವಾರದಲ್ಲೊಮ್ಮೆ ಸಾರ್ವಜನಿಕರ ಸಂಕಷ್ಟ ಆಲಿಸಿ
ಮೈಸೂರು

ಜಿಲ್ಲಾಧಿಕಾರಿಗಳು ವಾರದಲ್ಲೊಮ್ಮೆ ಸಾರ್ವಜನಿಕರ ಸಂಕಷ್ಟ ಆಲಿಸಿ

July 8, 2018

ಬೆಂಗಳೂರು: ಜಿಲ್ಲಾಧಿಕಾರಿಗಳು ವಾರದಲ್ಲಿ ಒಮ್ಮೆ ಸಾರ್ವಜನಿಕರ ಸಂಕಷ್ಟಗಳನ್ನು ಆಲಿಸಿ ಪರಿಹಾರ ದೊರಕಿ ಸುವಂತೆ ಸರ್ಕಾರ ಕಟ್ಟಾದೇಶ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.

ಜಿಲ್ಲಾ ಅಧಿಕಾರಿಗಳಷ್ಟೇ ಅಲ್ಲದೆ, ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ತಮ್ಮ ಜಿಲ್ಲಾ ಕೇಂದ್ರಗಳಲ್ಲಿ ಜನರ ಸಮಸ್ಯೆ ಆಲಿಸಿ ಪರಿಹಾರ  ಕಂಡುಕೊಳ್ಳಬೇಕು.

ಸ್ಥಳೀಯವಾಗಿ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ, ನನ್ನ ಬಳಿಗೆ ಕಳು ಹಿಸಲಿ. ಜನರ ಕಷ್ಟಗಳ ಬಗ್ಗೆ ಆಲಿಸಲು ಅಸಡ್ಡೆ ತೋರಿದರೆ ಅಂತಹ ಅಧಿಕಾರಿಗಳಿಗೆ ಗ್ರಹಚಾರ ಬಿಡಿಸಬೇಕಾಗುತ್ತದೆ ಎಂದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿ ಬಳಿಕ ಮಾತನಾಡಿದ ಅವರು, ನನ್ನ ಜನತಾ ದರ್ಶನಕ್ಕೆ ಸಾಲ ಮಾಡಿ ದೂರದ ಊರುಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಜನ ಸಾಮಾನ್ಯರ ಸಮಸ್ಯೆಗಳನ್ನು ಅಲ್ಲೇ ಬಗೆಹರಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದೇನೆ ಎಂದು ತಿಳಿಸಿದರು.

ಯಾವ ರೀತಿ ಜನ ಸಾಮಾನ್ಯರ ಜೊತೆ ಚರ್ಚೆ ನಡೆಸುತ್ತಾರೆ ಅಂತ ವೀಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಬೇಕು. ಜಿಲ್ಲೆಯ ಸಮಸ್ಯೆ ಪಟ್ಟಿ ಮಾಡಿ ನನ್ನ ಗಮನಕ್ಕೆ ತರಬೇಕು. ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆಯುತ್ತೇನೆ ಎಂದು ಎಚ್ಚರಿಸಿದ್ದಾರೆ. ಈ ಸಂಬಂಧ ಪ್ರಧಾನ ಕಾರ್ಯದರ್ಶಿಗಳಿಗೆ ಉಸ್ತುವಾರಿ ಕೊಟ್ಟಿದ್ದೇವೆ. ಅವರು ಜಿಲ್ಲೆಗಳಿಗೆ ಹೋಗಿ ಅಲ್ಲೇ ಒಂದು ದಿನ ಇದ್ದು, ಎಲ್ಲ ಮಾಹಿತಿಯನ್ನು ಕಲೆ ಹಾಕಿ ಮುಖ್ಯ ಕಾರ್ಯದರ್ಶಿಗಳಿಗೆ ನೀಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಮೊದಲ ಹಂತದಲ್ಲಿ 250 ವಿಕಲಚೇತನರು ಮತ್ತು ಬಡ ಯುವ ಜನರನ್ನು ನೇಮಕಾತಿ ಮಾಡಲಾಗುತ್ತದೆ ಎಂದು ಇದೇ ವೇಳೆ ಮುಖ್ಯಮಂತ್ರಿ ಅವರು ತಿಳಿಸಿದರು.

Translate »