ಚಾಮರಾಜೇಶ್ವರ ರಥೋತ್ಸವಕ್ಕೆ ಆಗ್ರಹಿಸಿ ಭಕ್ತರ ಪ್ರತಿಭಟನೆ
ಚಾಮರಾಜನಗರ

ಚಾಮರಾಜೇಶ್ವರ ರಥೋತ್ಸವಕ್ಕೆ ಆಗ್ರಹಿಸಿ ಭಕ್ತರ ಪ್ರತಿಭಟನೆ

July 29, 2018

ಚಾಮರಾಜನಗರ: ಆಷಾಢ ಮಾಸದ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವ ಈ ಬಾರಿಯೂ ನಡೆಯದಿರುವುದನ್ನು ಖಂಡಿಸಿ ಹಾಗೂ ಸರ್ಕಾರ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ಒತ್ತಾಯಿಸಿ ಶ್ರೀ ಚಾಮರಾಜೇಶ್ವರಸ್ವಾಮಿಯ ಭಕ್ತಮಂಡಳಿ ಕಾರ್ಯಕರ್ತರು ನಗರದ ಶ್ರೀಚಾಮರಾಜೇಶ್ವರ ದೇವಾಲಯ ಆವರಣದಲ್ಲಿರುವ ರಥದ ಮುಂದೆ ಈಡುಗಾಯಿ ಒಡೆದು ಅರಿಶಿನ, ಕುಂಕುಮ ಎರಚಿ ಅಘೋರಿವೇಷ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಆಗಲಿ ಆಗಲಿ ರಥೋತ್ಸವ ಆಗಲಿ ಎಂದು ಘೋಷಣೆ ಕೂಗಿ ಈ ಬಾರಿ ರಥೋತ್ಸವ ನಡೆಸದೇ ಇರುವ ಜಿಲ್ಲಾಡಳಿತ, ಸರ್ಕಾರದ ಕ್ರಮವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಘೋರಿವೇಷ ಧರಿಸಿದ ಪಡೆಯ ಗೌರವ ಅಧ್ಯಕ್ಷ ಶಾ.ಮುರಳಿ ಮಾತನಾಡಿ, ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ಶ್ರೀಚಾಮರಾಜೇಶ್ವರ ರಥೋತ್ಸವ ನಡೆಯದೆ ಇರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಥ ನಿರ್ಮಾಣ ಸಂಬಂಧ ಇಂದು ಮೊದಲ ಹಂತ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಕೂಡಲೇ ಜಿಲ್ಲಾಡಳಿತ ರಥ ನಿರ್ಮಾಣಕ್ಕೆ ಚಾಲನೆ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಸಾರ್ವ ಜನಿಕರು, ಎಲ್ಲಾ ಕೋಮಿನ ಮುಖಂಡರ ಸಹಕಾರದೊಂದಿಗೆ ಉಗ್ರ ಹೋರಾಟ ಮಾಡುವ ಜೊತೆಗೆ, ಚಾಮರಾಜನಗರ ಬಂದ್‍ಗೆ ಕರೆ ನೀಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ನಿಜಧ್ವನಿಗೋವಿಂದ ರಾಜು, ಕಾರ್ ಬಸವರಾಜ್, ಚಾ.ಹ.ಶಿವರಾಜ್, ರಾಚಯ್ಯ, ಬಸವರಾಜು, ಜಯರಾಂನಾಯಕ, ಕಾರ್‍ದೇವರಾಜ್, ವಿಜಯಕುಮಾರ್‍ಗೌಡ, ಡಾ.ಶಿವರುದ್ರಸ್ವಾಮಿ, ವೀರಭದ್ರ, ತಾಂಡವಮೂರ್ತಿ, ರಮೇಶ್ ಕಾರ್ಮಿಕ್, ಶಿವು ಇತರರು ಭಾಗವಹಿಸಿದ್ದರು.

Translate »