ನೇರ ಫೊನ್-ಇನ್: 35 ದೂರು ದಾಖಲು: ಸದ್ದು ಮಾಡಿದ ಅಕ್ರಮ ಮರಳು ದಂಧೆ, ಮೂಲ ಸೌಲಭ್ಯಗಳ ಕೊರತೆ
ಚಾಮರಾಜನಗರ

ನೇರ ಫೊನ್-ಇನ್: 35 ದೂರು ದಾಖಲು: ಸದ್ದು ಮಾಡಿದ ಅಕ್ರಮ ಮರಳು ದಂಧೆ, ಮೂಲ ಸೌಲಭ್ಯಗಳ ಕೊರತೆ

August 26, 2018

ಚಾಮರಾಜನಗರ:  ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಒಟ್ಟು 35 ದೂರುಗಳು ದಾಖಲಾಗಿವೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತವಾಗಿ ಒಂದು ಗಂಟೆಗಳ ಕಾಲ ಜಿಲ್ಲೆಯ ನಾನಾ ಭಾಗದಿಂದ ದೂರುಗಳು, ಸಮಸ್ಯೆಗಳನ್ನು ಕರೆ ಮಾಡಿ ತಿಳಿಸಲಾಯಿತು.

ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ, ನಗರದ ಸಂಚಾರ ವ್ಯವಸ್ಥೆ, ಇ-ಸ್ವತ್ತು, ಸ್ವಚ್ಛತೆ ಸೇರಿದಂತೆ ಇತರೆ ವಿಷಯಗಳನ್ನು ಜಿಲ್ಲೆಯ ವಿವಿಧ ಭಾಗಗಳ ಜನರು ಫೋನ್-ಇನ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.

ಯಳಂದೂರಿನಿಂದ ಕರೆ ಮಾಡಿದ ಸ್ಥಳೀಯರೊಬ್ಬರು ಸುವರ್ಣಾವತಿ ನದಿ ಅಂಚಿನ ತೋಟದಲ್ಲಿ ಮರಳು ತೆಗೆಯಲಾಗುತ್ತಿದೆ ಎಂದರು. ಹರದನಹಳ್ಳಿಯಿಂದ ಮತ್ತೊಬ್ಬರು ಕರೆ ಮಾಡಿ ತಮ್ಮ ಭಾಗದಲ್ಲೂ ಮರಳು ತೆಗೆಯುತ್ತಿರುವ ಬಗ್ಗೆ ದೂರು ನೀಡಿದ್ದೇನೆ. ಆದರೂ ಕ್ರಮ ತೆಗೆದುಕೊಂಡಿಲ್ಲ ಎಂದರು. ಸತ್ತೇಗಾಲ ಪಂಚಾಯಿತಿ ವ್ಯಾಪ್ತಿಗೊಳಪಡುವ ಶಿವನಸಮುದ್ರ ಬಳಿ ಸಹ ಅಕ್ರಮವಾಗಿ ಮರಳು ಸಂಗ್ರಹಣಾ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ದೂರು ನೀಡಿದವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಮತ್ತೊಬ್ಬರು ಗಮನ ಸೆಳೆದರು.ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.

ಚಾಮರಾಜನಗರದ 26ನೇ ವಾರ್ಡ್, 10ನೇ ವಾರ್ಡ್ ಇತರೆ ಕೆಲವೆಡೆ ಸ್ವಚ್ಛತೆಗೆ ಕ್ರಮ ತೆಗೆದುಕೊಂಡಿಲ್ಲ. ಗಿಡಗಂಟಿಗಳು ಬೆಳೆದು ಸೊಳ್ಳೆ ಹಾವಳಿ ವಿಪರೀತವಾಗಿದೆ ಎಂದು ಸ್ಥಳೀಯರೊಬ್ಬರು ಕರೆ ಮಾಡಿದರು. ಕರಿನಂಜನಪುರ ಹೊಸ ಬಡಾವಣೆಯಲ್ಲಿ ನೀರು, ರಸ್ತೆ ಸೌಲಭ್ಯ ಕಲ್ಪಿಸುವಂತೆ ಇದುವರೆಗೆ 2 ಬಾರಿ ಕೋರಲಾಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಉತ್ತರ ನೀಡಿದ ಜಿಲ್ಲಾಧಿಕಾರಿಯವರು ಟೆಂಡರ್ ಪ್ರಕ್ರಿಯೆ ಆಗಿದೆ. ಕಾಮಗಾರಿ ಆರಂಭ ಪ್ರಕ್ರಿಯೆಯು ನಡೆಯಲಿದೆ ಎಂದರು.

ನಗರದಲ್ಲಿ ಮುಖ್ಯ ರಸ್ತೆಗಳಲ್ಲಿ ಆಟೋಗಳು ಸಂಚಾರ ನಿಯಮ ಪಾಲನೆ ಮಾಡದೇ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರಿಗೆ, ಇತರೆ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರು ನೀಡಿದರು. ಮತ್ತೊಬ್ಬರು ಕರೆ ಮಾಡಿ ದೊಡ್ಡಂಗಡಿ ಬೀದಿಯಲ್ಲಿ ವಾಹನಗಳ ನಿಲುಗಡೆ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಅಳವಡಿಸಬೇಕು ಎಂದು ಕೋರಿದರು.

ಈ ಸಂಬಂಧ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಸಂಚಾರ ನಿಯಮವನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮವಹಿಸಲಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಇ-ಸ್ವತ್ತು ಅರ್ಜಿ ವಿಲೇವಾರಿಯನ್ನು ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ಸಹ ಕಾರ್ಯಕ್ರಮದಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ ಎಂದರು.

ಕುಡಿಯುವ ನೀರು, ರಸ್ತೆ ದುರಸ್ತಿ, ಶೌಚಾಲಯ, ಸ್ವಚ್ಛತೆ ಇತರೆ ವಿಷಯಗಳಿಗೆ ಸಂಬಂಧಿಸಿದ ಕುಂದುಕೊರತೆಗಳು ಸಹ ಫೊನ್-ಇನ್ ಕಾರ್ಯಕ್ರಮದಲ್ಲಿ ಪ್ರಸ್ತಾಪವಾದವು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Translate »