ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

May 24, 2020

ಮೈಸೂರು: ಮೈಸೂರಿನ ಅವಧೂತ ದತ್ತಪೀಠ ಗಣಪತಿ ಸಚ್ಚಿದಾ ನಂದ ಆಶ್ರಮ ಹಾಗೂ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಸಹಯೋಗ ದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬದವರಿಗೆ ದಿನಸಿ ಕಿಟ್ ವಿತರಿಸಲಾಯಿತು.

ಇಟ್ಟಿಗೆಗೂಡಿನಲ್ಲಿರುವ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಕಿಟ್ ವಿತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಕೊರೊನಾದಿಂದ ಎಲ್ಲರೂ ಸಂಕಷ್ಟಕ್ಕೀಡಾಗಿದ್ದಾರೆ. ಲಾಕ್‍ಡೌನ್‍ನಿಂದಾಗಿ 2 ತಿಂಗಳಿಂದ ದೇವಾಲಯಗಳು ಮುಚ್ಚಿವೆ. ಸಮಾರಂಭಗಳು ನಡೆಯುತ್ತಿಲ್ಲ. ಪರಿಣಾಮ ಅರ್ಚಕರು ಹಾಗೂ ಪುರೋಹಿತರ ಕುಟುಂಬ ತೀವ್ರ ಸಂಕಷ್ಟದಲ್ಲಿವೆ. ಈಗಾಗಲೇ ಮೈಸೂರು ಬ್ರಾಹ್ಮಣ ಸಂಘವು, ಅವಧೂತ ದತ್ತಪೀಠ ಗಣಪತಿ ಆಶ್ರಮ, ಟಿವಿಎಸ್ ಕಂಪನಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು, ತಾಲೂಕು ಮಟ್ಟದಲ್ಲಿ 6 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿ ಹಾಗೂ ಮೆಡಿಕಲ್ ಕಿಟ್ ನೀಡಿದೆ ಎಂದು ತಿಳಿಸಿದರು.

ಮೈಸೂರು ಭಾಗದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ. ಆದರೆ ಇವರ ಬಗ್ಗೆ ಸ್ಥಳೀಯ ಅಧಿಕಾರಿಗಳಾಗಲೀ, ಸರ್ಕಾರವಾಗಲೀ ಗಮನ ಹರಿಸುತ್ತಿಲ್ಲ. ಅರ್ಚಕರಿಗೆ, ಪುರೋಹಿತರಿಗೆ ಎಂದಿನಂತೆ ತ್ವಸ್ಥಿಕ್ ಹಣ ಬಂದಿದೆಯೇ ಹೊರತು, ಕೊರೊನಾ ಹಿನ್ನೆಲೆ ಯಾವುದೇ ನೆರವು ನೀಡಿಲ್ಲ. ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರುವ ಬಾಣಸಿಗರು, ಸಹಾಯಕರು, ಊಟ ಬಡಿಸುವವರು, ಅವರ ಅವಲಂಬಿತರಿಗೆ ಕಾರ್ಮಿಕ ಇಲಾಖೆ ನೆರವಾಗಬೇಕು. ವಿವಾಹ, ಶ್ರಾದ್ಧ ಇನ್ನಿತರ ಕಾರ್ಯಗಳನ್ನು ನಡೆಸಿಕೊಡುವ ಅರ್ಚಕರಿಗೆ ಮುಜರಾಯಿ ಇಲಾಖೆ ಸಹಾಯ ಧನ ನೀಡಬೇಕೆಂದು ಡಿ.ಟಿ.ಪ್ರಕಾಶ್ ಆಗ್ರಹಿಸಿದರು. ಸಂಘದ ಗ್ರಾಮಾಂತರ ಅಧ್ಯಕ್ಷ ಎಸ್.ಆರ್.ಗೋಪಾಲ ರಾವ್, ವಿನಯ್ ಬಾಬು, ಬೋಸ್ಲೆ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ಸುಚೀಂದ್ರ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

Translate »