ಜಿಲ್ಲಾ ಉಸ್ತುವಾರಿ ಸಚಿವರ ನೇಮಕ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

August 1, 2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ನಾಲ್ವರು ಸಚಿವರುಗಳಿಗೆ ತಲಾ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ನಿರೀಕ್ಷೆಯಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಮೈಸೂರು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಹಾಸನ ಜಿಲ್ಲೆಗೆ ಹೆಚ್.ಡಿ.ರೇವಣ್ಣ, ಮಂಡ್ಯಕ್ಕೆ ಸಿ.ಎಸ್.ಪುಟ್ಟರಾಜು, ಚಾಮರಾಜನಗರಕ್ಕೆ ಸಿ.ಪುಟ್ಟರಂಗಶೆಟ್ಟಿ, ಕೊಡಗಿಗೆ ಸಾ.ರಾ.ಮಹೇಶ್ ಅವರನ್ನು ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ.

ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಬೆಂಗಳೂರು ನಗರ ಮತ್ತು ತುಮಕೂರು, ಆರ್.ವಿ.ದೇಶಪಾಂಡೆ ಅವರಿಗೆ ಉತ್ತರ ಕನ್ನಡ ಮತ್ತು ಧಾರವಾಡ, ಡಿ.ಕೆ.ಶಿವಕುಮಾರ್ ಅವರಿಗೆ ರಾಮನಗರ ಮತ್ತು ಬಳ್ಳಾರಿ, ಕೃಷ್ಣಭೈರೇಗೌಡ ಅವರಿಗೆ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ನೀಡಲಾಗಿದೆ.

ಉಳಿದಂತೆ ರಮೇಶ್ ಜಾರಕಿಹೊಳಿ ಬೆಳಗಾವಿ, ಡಿ.ಸಿ.ತಮ್ಮಣ್ಣ ಶಿವಮೊಗ್ಗ, ಎನ್.ಮಹೇಶ್ ಗದಗ ಜಿಲ್ಲೆ, ಕೆ.ಜೆ.ಜಾರ್ಜ್ ಚಿಕ್ಕಮಗಳೂರು, ಶಿವಾನಂದ ಪಾಟೀಲ್ ಬಾಗಲಕೋಟೆ, ಪ್ರಿಯಾಂಕ್ ಖರ್ಗೆ ಕಲಬುರ್ಗಿ, ವೆಂಕಟರಮಣಪ್ಪ ಚಿತ್ರದುರ್ಗ, ಯು.ಟಿ.ಖಾದರ್ ದಕ್ಷಿಣ ಕನ್ನಡ ಜಿಲ್ಲೆ, ಜಯಮಾಲ ಉಡುಪಿ, ಎಸ್.ಆರ್.ಶ್ರೀನಿವಾಸ್ ದಾವಣಗೆರೆ, ಎಂ.ಪಿ.ಮನಗೂಳಿ ವಿಜಯಪುರ, ರಾಜಶೇಖರ ಪಾಟೀಲ್ ಯಾದಗಿರಿ, ಜಮೀರ್ ಅಹಮದ್ ಹಾವೇರಿ, ಆರ್.ಶಂಕರ್ ಕೊಪ್ಪಳ, ವೆಂಕಟರಾವ್ ನಾಡಗೌಡ ರಾಯಚೂರು, ಬಂಡೆಪ್ಪ ಕಾಶಂಪೂರ್ ಬೀದರ್, ಎನ್.ಹೆಚ್.ಶಿವಶಂಕರ ರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ.

ನುಡಿದಂತೆ ನಡೆದ ಸಿಎಂ: ಕಳೆದ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ ಅವರು, ಜಿ.ಟಿ.ದೇವೇಗೌಡರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡುವ ವಾಗ್ದಾನವನ್ನು ಕ್ಷೇತ್ರದ ಜನತೆಗೆ ನೀಡಿದ್ದರು. ಜಿ.ಟಿ.ದೇವೇಗೌಡರು ಜಿಲ್ಲಾ ಉಸ್ತುವಾರಿ ಜೊತೆಗೆ ಕಂದಾಯ ಖಾತೆಯನ್ನು ನಿರೀಕ್ಷಿಸಿದ್ದರು. ಆದರೆ ಅವರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಿದ್ದರಿಂದ ಸಹಜವಾಗಿಯೇ ಕ್ಷೇತ್ರದ ಕಾರ್ಯಕರ್ತರು ಸ್ವಲ್ಪ ಅಸಮಾಧಾನಗೊಂಡಿದ್ದರು. ಅದೇ ವೇಳೆ ಜಿಲ್ಲಾ ಉಸ್ತುವಾರಿ ಜಿ.ಟಿ.ದೇವೇಗೌಡರಿಗೆ ಸಿಗುವುದೇ ಇಲ್ಲವೇ ಎಂಬ ಆತಂಕದಲ್ಲಿದ್ದರು. ಆದರೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಗೌಡರಿಗೆ ನೀಡುವ ಮೂಲಕ ತಾವು ನುಡಿದಂತೆ ನಡೆದಿದ್ದಾರೆ.

Translate »