ಮೈತ್ರಿ ಸರ್ಕಾರ ಉಳಿಸಲು ಜಾರಕಿಹೊಳಿ ಕುಟುಂಬದೊಂದಿಗೆ ಡಿಕೆಶಿ ರಾಜೀಯತ್ನ
ಮೈಸೂರು

ಮೈತ್ರಿ ಸರ್ಕಾರ ಉಳಿಸಲು ಜಾರಕಿಹೊಳಿ ಕುಟುಂಬದೊಂದಿಗೆ ಡಿಕೆಶಿ ರಾಜೀಯತ್ನ

September 6, 2018

ಬೆಂಗಳೂರು:  ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉಳಿಸುವ ಉದ್ದೇಶದಿಂದ ಸಚಿವ ಡಿ.ಕೆ. ಶಿವಕುಮಾರ್, ಜಾರಕಿಹೊಳಿ ಕುಟುಂಬದೊಟ್ಟಿಗಿದ್ದ ಮನಸ್ತಾಪ ಬಗೆಹರಿಸಿ ಕೊಳ್ಳಲು ಮುಂದಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಶಿವಕುಮಾರ್ ಹಸ್ತ ಕ್ಷೇಪ ಮಾಡುತ್ತಿದ್ದಾರೆ ಎಂಬ ಏಕೈಕ ಉದ್ದೇಶ ದಿಂದ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿ ಹೊಳಿ ಮತ್ತು ಅವರ ಸಹೋದರರು ಬಿಜೆಪಿ ಜೊತೆ ಕೈಜೋಡಿಸಿ ಕುಮಾರಸ್ವಾಮಿ ಸರ್ಕಾರವನ್ನೇ ಉರುಳಿಸಲು ಕಾರ್ಯತಂತ್ರ ರೂಪಿಸಿದ್ದರು.

ಎಷ್ಟರ ಮಟ್ಟಿಗೆ ಎಂದರೆ ತಮ್ಮ ಬೇಡ ಸಮುದಾಯದಿಂದ ಪಕ್ಷದಲ್ಲೇ ಆಯ್ಕೆಗೊಂಡಿರುವ ಎಲ್ಲಾ ಶಾಸಕರನ್ನು ಒಗ್ಗೂಡಿಸಿ, ಅವರ ಮನವೊಲಿಕೆ ಮಾಡಿ ಎಲ್ಲರನ್ನು ಕಾಂಗ್ರೆಸ್‍ನಿಂದ ಬಿಜೆಪಿಗೆ ಪಕ್ಷಾಂತರಿಸಲು ಹೊರಟಿದ್ದರು. ಇದರ ಸುಳಿವು ಅರಿತ ಮುಖ್ಯಮಂತ್ರಿಯವರು ಸಚಿವ ಶಿವಕುಮಾರ್ ಒಟ್ಟಿಗೆ ಕಳೆದ ಎರಡು ದಿನಗಳ ಹಿಂದೆ ಸುದೀರ್ಘ ಸಮಾಲೋಚನೆ ನಡೆಸಿ, ಸರ್ಕಾರ ಉಳಿಸಿಕೊಳ್ಳುವ ಪ್ರತಿ ತಂತ್ರಗಾರಿಕೆ ಮಾಡಿದರು. ಇದರ ಮೊದಲ ತಂತ್ರಗಾರಿಕೆಯಾಗಿ ಶಿವಕುಮಾರ್ ತಮ್ಮ ಸಹೋದರ ಸಂಸದ ಡಿ.ಕೆ. ಸುರೇಶ್ ಅವರನ್ನು ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ ಕಳಿಸಿದ್ದಾರೆ. ಸುಮಾರು 90 ನಿಮಿಷಗಳ ಕಾಲ ಮುಖಾಮುಖಿ ಚರ್ಚೆ ಮಾಡಿ, ತಮ್ಮ ಸಹೋದರ ಮತ್ತು ಜಾರಕಿಹೊಳಿ ಕುಟುಂಬದ ನಡುವೆ ಇದ್ದ ಬಿನ್ನಾಭಿಪ್ರಾಯ ಬಗೆಹರಿಸಲು ಮೊದಲ ಪ್ರಯತ್ನ ಮಾಡಿದ್ದಾರೆ.

ಶಿವಕುಮಾರ್ ಯಾವುದೇ ಕಾರಣಕ್ಕೂ ನಿಮ್ಮ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುತ್ತಿಲ್ಲ. ನೀವು ತಪ್ಪು ತಿಳಿದಿದ್ದೀರಿ. ನಾವು ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಸೀಮಿತವಾಗಿ ರಾಜಕೀಯ ಮಾಡಿಕೊಂಡಿದ್ದೇವೆ.
ಬೇರೆ ಯಾವುದೇ ಜಿಲ್ಲೆಗಳಲ್ಲಿ ನಾವು ಹಸ್ತಕ್ಷೇಪ ಮಾಡುತ್ತಿಲ್ಲ. ಕೆಲವರು ನಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಸುರೇಶ್, ಜಾರಕಿಹೊಳಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಸಹೋದರರ ಜೊತೆ ಒಳ್ಳೆಯ ಸ್ನೇಹ ಭಾವದಿಂದಿದ್ದಾರೆ. ಹಾಗೆಂದು ಅವರ ಹಿಂದೆ ನಿಂತು ಬೆಳಗಾವಿಯಲ್ಲಿ ನಿಮ್ಮನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಅವರಿಂದ ನಡೆದಿಲ್ಲ. ನೀವು ತಪ್ಪು ತಿಳಿದಿದ್ದೀರಿ. ಏನೇ ಸಮಸ್ಯೆ ಇದ್ದರೂ, ಕುಳಿತು ಬಗೆಹರಿಸಿಕೊಳ್ಳೋಣ. ನಾನೇ ಇದರ ಹೊಣೆಗಾರಿಕೆ ತೆಗೆದುಕೊಳ್ಳುತ್ತೇನೆ.

ದುಡುಕಿ ನೀವು ಯಾವುದೇ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವುದು ಬೇಡ. ನಿಮಗಿರುವ ಸಂಶಯಗಳನ್ನು ನಿವಾರಿಸುವುದರ ಜೊತೆಗೆ ನೀವು ಯಾರನ್ನು ದ್ವೇಷಿಸುತ್ತೀರೋ ಅವರ ಜೊತೆ ಕೈ ಜೋಡಿಸುವ ಪ್ರಶ್ನೆಯು ಇಲ್ಲ. ಅವರನ್ನು ಬೆಂಬಲಿಸುವ ಮಾತೇ ಇಲ್ಲ ಎಂದಿದ್ದಾರೆ. ಸುರೇಶ್ ಮನವೊಲಿಕೆಗೆ ರಮೇಶ್ ಜಾರಕಿಹೊಳಿ ಪೂರ್ಣವಾಗಿ ತೃಪ್ತರಾಗಿಲ್ಲ. ಆದರೆ ತಮ್ಮ ಕೋಪತಾಪ ಕಡಿಮೆ ಮಾಡಿಕೊಂಡು ಕೆಲವು ಷರತ್ತುಗಳನ್ನು ವಿಧಿಸಿ, ಇವುಗಳನ್ನು ಸರಿಪಡಿಸಿದರೆ, ನಮ್ಮ ಅಭ್ಯಂತರವಿಲ್ಲ. ಮೊದಲು ನಿಮ್ಮ ಸಹೋದರನನ್ನು ಒಪ್ಪಿಸಿ, ನಂತರ ಮುಂದೇ ನೋಡೋಣ ಎಂದು ರಮೇಶ್, ಸುರೇಶ್‍ಗೆ ಹೇಳಿ ಕಳುಹಿಸಿದ್ದಾರೆ.

ಜಾರಕಿಹೊಳಿ ಕುಟುಂಬದೊಟ್ಟಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೈಜೋಡಿಸಿ ಸರ್ಕಾರ ಉರುಳಿಸಲು ಹೊರಟಿದ್ದರ ಸುಳಿವರಿತ ಕುಮಾರಸ್ವಾಮಿ ಮೊದಲ ಯತ್ನವಾಗಿ ಈ ಎರಡು ಕುಟುಂಬಗಳನ್ನು ಒಂದು ಮಾಡಲು ಹೊರಟಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಪರೋಕ್ಷ ಬೆಂಬಲ ನೀಡಿದ್ದಲ್ಲದೆ, ಹಿರಿಯ ನಾಯಕ ಶ್ರೀರಾಮುಲು, ಜಾರಕಿಹೊಳಿ ಕುಟುಂಬ ಮತ್ತು ಪಕ್ಷದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ರಮೇಶ್ ಜಾರಕಿಹೊಳಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರವನ್ನು ಪಡೆದಿದ್ದರೂ ಎನ್ನಲಾಗಿದೆ. ಇತ್ತೀಚೆಗೆ ಮೈಸೂರಿನಲ್ಲಿ ಇವರಿಬ್ಬರೇ ಮುಖಾಮುಖಿ ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದರು.

ಸಿದ್ದರಾಮಯ್ಯ ವಿದೇಶ ಪ್ರವಾಸ ತೆರಳುತ್ತಿದ್ದಂತೆ ಇತ್ತ ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸಲು ಜಾರಕಿಹೊಳಿ ಕುಟುಂಬ ಭಾರೀ ಕಸರತ್ತು ನಡೆಸಿತ್ತು. ಇದೇ ಕಾಲಕ್ಕೆ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರದ ಇಡಿ ತನಿಖೆ ವ್ಯಾಪ್ತಿಯಲ್ಲಿ ಅವರನ್ನು ಬಂಧಿಸುವ ಎಲ್ಲಾ ಪ್ರಯತ್ನ ನಡೆದಿದೆ. ಅಲ್ಲದೆ ಯಡಿಯೂರಪ್ಪ ಕರ್ನಾಟಕಕ್ಕೆ ಸೀಮಿತವಾಗಿ ಸಿಬಿಐ, ಇಡಿ ಹಾಗೂ ಕೇಂದ್ರ ಆದಾಯ ತೆರಿಗೆ ಇಲಾಖೆಯಲ್ಲಿ ತಮಗೆ ಬೇಕಾದ ಕೆಲವು ಅಧಿಕಾರಗಳನ್ನು ನಿಯೋಜಿಸಿಕೊಂಡು ಅವರು ಸರ್ಕಾರ ತೆಗೆಯಲು ಪರೋಕ್ಷವಾಗಿ ಮುಂದಾಗಿರುವುದು ಮುಖ್ಯಮಂತ್ರಿಯವರ ಗಮನಕ್ಕೆ ಬಂದಿತ್ತು. ಇದನ್ನೇ ನಿನ್ನೆ ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಎಲ್ಲವನ್ನು ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ.

Translate »