ದಸರಾ ಗಜಪಡೆ ಮೊದಲ ತಂಡ ಅರಮನೆ ಆವರಣ ಪ್ರವೇಶ
ಮೈಸೂರು

ದಸರಾ ಗಜಪಡೆ ಮೊದಲ ತಂಡ ಅರಮನೆ ಆವರಣ ಪ್ರವೇಶ

September 6, 2018

ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಅರ್ಜುನ ನೇತೃತ್ವದ ಗಜಪಡೆಯ ಮೊದಲ ತಂಡವನ್ನು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಬುಧವಾರ ಸ್ವಾಗತಿಸಲಾಯಿತು.

ಸೆಪ್ಟೆಂಬರ್ 2ರಂದು ವೀರನಹೊಸಹಳ್ಳಿಯಿಂದ ಬಂದು ಅಶೋಕಪುರಂನ ಅರಣ್ಯ ಭವನದಲ್ಲಿ ತಂಗಿದ್ದ ಗಜಪಡೆಯನ್ನು ಅರಮನೆ ಜಯಮಾರ್ತಾಂಡ ದ್ವಾರದ ಬಳಿ ಮೈಸೂರು ಜಿಲ್ಲಾ ಉಸ್ತುವಾರಿ ಜಿ.ಟಿ. ದೇವೇಗೌಡ, ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.

ಈ ವೇಳೆ ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಜೆಡಿಎಸ್ ರಾಜ್ಯಾದ್ಯಕ್ಷ ಅಡಗೂರು ಹೆಚ್. ವಿಶ್ವನಾಥ್, ಶ್ರೀಮತಿ ಲಲಿತಾ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರೆ ಗಣ್ಯರು ಪಾಲ್ಗೊಂಡಿದ್ದರು.

ಈ ವೇಳೆ ಸಶಸ್ತ್ರ ಪೊಲೀಸ್ ಪಡೆ ಹಾಗೂ ಅಶ್ವಾರೋಹಿ ಪೊಲೀಸ್ ಪಡೆಗಳು ಗೌರವ ವಂದನೆ ಸಲ್ಲಿಸಿದವು. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಆರ್ಚಕರಾದ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.

ಈ ವೇಳೆ ನಗಾರಿ ಮೇಳ, ಪಟ ಕುಣಿತ ತಂಡಗಳು ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದವು. ಕಾರ್ಯ ಕ್ರಮದ ಅಂಗವಾಗಿ ಅರ ಮನೆಯ ಹೊರ ಆವ ರಣವನ್ನು ತಳಿರು ತೋರಣಗಳಿಂದ ಅಲಂಕರಿಸ ಲಾಗಿತ್ತು. “ಮೈಸೂರು ದಸರಾ ಕ್ರಿಸ್ತಶಕ 1810ರಿಂದ ಆಚರಣೆ” ಬ್ಯಾನರ್‍ಗಳನ್ನು ಅರಮನೆ ಮಂಡಳಿ ವತಿಯಿಂದ ಹೆಬ್ಬಾಗಿಲಿನಿಂದ ಅರಮನೆಯವರೆಗೆ ಆಳವಡಿಸಲಾಗಿತ್ತು. ನಂತರ ಮಾಧ್ಯಮದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತ ನಾಡಿ, ನಾಡಹಬ್ಬ ದಸರಾ ಆರಂಭವಾಗಿದ್ದು, ಈ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಮೈಸೂರಿನಲ್ಲಿ ಉನ್ನತಮಟ್ಟದ ಸಭೆ ನಡೆಸಿ ಎಲ್ಲಾ ಮಂತ್ರಿಗಳು, ಶಾಸಕರು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು. ಸೆ.2ರಂದು ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ್ದು, ಇಂದು ಅರಮನೆ ಅಂಗಳಕ್ಕೆ ಆಗಮಿಸಿದ ಗಜಪಡೆಯನ್ನು ನಾನು ಸೇರಿದಂತೆ ಮೈಸೂರಿನ ಎಲ್ಲಾ ಶಾಸಕರು, ಅಧಿಕಾರಿಗಳು ಪ್ರೀತಿಯಿಂದ ಸ್ವಾಗತಿಸಿದ್ದೇವೆ. ಹಾಗೆಯೇ ತಾಯಿ ಚಾಮುಂಡೇಶ್ವರಿ ಸಂತೋಷಪಡುವಂತೆ ದಸರಾ ಮಹೋತ್ಸವ ನಡೆಸಬೇಕೆಂದು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ ಎಂದರು.

ಹಳ್ಳಿ-ಹಳ್ಳಿಗಳಲ್ಲೂ ದಸರಾ: ಈ ಬಾರಿ ದಸರಾ ಮಹೋ ತ್ಸವದಲ್ಲಿ ನಡೆಯುವ ಕ್ರೀಡಾಕೂಟ, ಮಹಿಳಾ ಕಾರ್ಯಕ್ರಮಗಳು, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ರೈತ ದಸರಾ ಕಾರ್ಯಕ್ರಮಗಳನ್ನು ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ಆಯೋಜಿಸಲಾಗುವುದು ಎಂದರು.

ಸಂಪೂರ್ಣ ಪಾವತಿ: ಕಳೆದ ಬಾರಿಯ ದಸರಾ ಮಹೋತ್ಸವದ ಬಾಕಿ ಹಣವನ್ನು ಸಂಪೂರ್ಣ ಪಾವತಿಸಲಾಗಿದೆ. ಹಾಗೆಯೇ ಈ ಬಾರಿಯ ದಸರಾಗೆ ಎಷ್ಟು ಹಣಬೇಕೆಂದು ಕೇಳಿದರೆ ಅಷ್ಟು ಹಣವನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಾಗೆಯೇ ಇನ್‍ಫೋಸಿಸ್ ಪೌಂಡೇಶನ್ ಮುಖ್ಯಸ್ಥರಾದ ಸುಧಾ ನಾರಾಯಣಮೂರ್ತಿ ಅವರೇ ಈ ಬಾರಿಯ ದಸರಾ ಉತ್ಸವ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಅರಣ್ಯ ಭವನದಲ್ಲಿ ಪೂಜೆ: ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಮೊದಲ ತಂಡದ 6 ಆನೆಗಳನ್ನು ಅರಮನೆ ಪ್ರವೇಶಿಸುವ ಮೊದಲು ಅಶೋಕಪುರಂ ನಲ್ಲಿರುವ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಡೊಳ್ಳು, ವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಗಜಪಡೆ, ಬಲ್ಲಾಳ್ ವೃತ್ತ, ಜೆಎಲ್‍ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆಯ ಮೂಲಕ ಅರಮನೆ ಜಯಮಾರ್ತಾಂಡ ದ್ವಾರಕ್ಕೆ ಕರೆತರಲಾಯಿತು. ರಸ್ತೆಯಲ್ಲಿ ಶಿಸ್ತಿನಿಂದ ಸಾಗಿದ ಆನೆಗಳನ್ನು ಸಾರ್ವಜನಿಕರು ರಸ್ತೆ ಇಕ್ಕೆಲಗಳಲ್ಲಿ ನಿಂತು ಕಂಡು, ಖುಷಿಪಟ್ಟರು.

ತಪ್ಪಾಗಿ ಮುದ್ರಿಕೆ: ಆಹ್ವಾನ ಪತ್ರಗಳಲ್ಲಿ 1610ರಿಂದ ದಸರಾ ಆಚರಣೆ ಎಂದು ನಮೂದಾಗಿದ್ದರೆ, ಅರಮನೆ ಆವರಣದಲ್ಲಿ ಹಾಕಿರುವ ಬಾವುಟಗಳಲ್ಲಿ ದಸರಾ ಮಹೋತ್ಸವ 1810ರಿಂದ ಎಂದು ತಪ್ಪಾಗಿ ಮುದ್ರಿಸಲಾಗಿದೆ.

ಅರಮನೆ ಅಂಗಳ ಪ್ರವೇಶಿಸಲು ನಕಾರ: ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ 37 ವರ್ಷದ ಧನಂಜಯ, ಜಯಮಾರ್ತಾಂಡ ದ್ವಾರ ಪ್ರವೇಶ ಮಾಡಲು ಹಿಂದೇಟು ಹಾಕಿದ. ಈ ವೇಳೆ ಮಾವುತ ಅಂಕುಶದಿಂದ ತಿವಿದು ಒಳ ಕರೆದೊಯ್ದ.

Translate »