ರಾಮಕೃಷ್ಣನಗರದಲ್ಲಿ ಕಂಡ ಕಂಡವರ ಕಚ್ಚಿದ ನಾಯಿ
ಮೈಸೂರು

ರಾಮಕೃಷ್ಣನಗರದಲ್ಲಿ ಕಂಡ ಕಂಡವರ ಕಚ್ಚಿದ ನಾಯಿ

September 7, 2018

ಮೈಸೂರು:  ನಾಯಿಯೊಂದು ಕಂಡ ಕಂಡವರ ಮೇಲೆ ದಾಳಿ ನಡೆಸಿದ ಪರಿಣಾಮ ಪುಟ್ಟ ಮಗು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ಮೈಸೂರಿನ ರಾಮಕೃಷ್ಣನಗರದಲ್ಲಿ ಗುರುವಾರ ನಡೆದಿದೆ.

ರಾಮಕೃಷ್ಣನಗರ ಹೆಚ್ ಬ್ಲಾಕ್‍ನ ನಟರಾಜು ಎಂಬು ವರ 4 ವರ್ಷದ ಮೊಮ್ಮಗ ಮನೆಯ ಮುಂಭಾಗ ಆಟವಾಡು ತ್ತಿದ್ದ ವೇಳೆ ನಾಯಿ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿದೆ. ಬಳಿಕ ಅದೇ ನಾಯಿ ಇ ಅಂಡ್ ಎಫ್ ಬ್ಲಾಕ್‍ನ ನಿವಾಸಿ ಯೊಬ್ಬರಿಗೂ ಕಚ್ಚಿದೆ. ಎಲ್ಲೆಂದರಲ್ಲಿ ಅಡ್ಡಾಡಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿದ್ದ ನಾಯಿಯನ್ನು ಬೆನ್ನತ್ತಿದ ಸ್ಥಳೀಯರು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಸಂಜೆ ಸುಮಾರು 4 ರಿಂದ ರಾತ್ರಿ 8ರವ ರೆಗೂ ನಾಯಿಯನ್ನು ಬೆನ್ನತ್ತಿ, ಜನರಿಗೆ ಸೂಚನೆ ನೀಡಿದ್ದೇವೆ. ನಾಯಿಯನ್ನು ಬೆದರಿಸಲು ಹೋದರೆ ತಿರುಗಿ ಬರುತ್ತದೆ. ಕೋಲು ತೋರಿಸಿದರೆ ಅದನ್ನೇ ಕಚ್ಚಿ, ನಮ್ಮ ಮೇಲೆಯೇ ಎಗರಲು ಪ್ರಯತ್ನಿಸಿತು. ರಾಮಕೃಷ್ಣನಗರದ ಹೆಚ್ ಬ್ಲಾಕ್, ಇ ಅಂಡ್ ಎಫ್ ಬ್ಲಾಕ್ ಸೇರಿದಂತೆ ಇಡೀ ಬಡಾವಣೆಯಲ್ಲಿ ಆತಂಕ ಹುಟ್ಟಿಸಿದೆ. ಈ ಬಗ್ಗೆ ನಗರ ಪಾಲಿಕೆ ಹಾಗೂ ಜಿಲ್ಲಾ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಮಾಹಿತಿ ತಿಳಿಸಿದೆವು. ಅಲ್ಲದೆ ಪೊಲೀಸರಿಗೂ ವಿಷಯ ತಿಳಿಸಿ, ಸಹಕಾರ ಕೋರಿ ದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪಾಲಿಕೆ ಕಂಟ್ರೋಲ್‍ನವರು ಯಾವುದೋ ಎನ್‍ಜಿಓ ದೂರವಾಣಿ ಸಂಖ್ಯೆ ನೀಡಿ, ಸಂಪರ್ಕಿಸುವಂತೆ ಹೇಳಿದರು. ಅವರು ನೀಡಿದ್ದ ಸಂಖ್ಯೆಯನ್ನು ಸಂಪರ್ಕಿಸಿದರೆ, ಅವರು ಕರೆ ಸ್ವೀಕರಿಸಲಿಲ್ಲ. ಇಷ್ಟೊಂದು ಬೇಜವಾಬ್ದಾರಿ ವ್ಯವಸ್ಥೆಯಡಿ ಸಾರ್ವಜನಿಕರು ನೆಮ್ಮದಿಯಿಂದ ಬದುಕುವುದು ಹೇಗೆ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ದಾಳಿ ನಡೆಸಿದ ನಾಯಿಯನ್ನು ಯಾರೋ ಮನೆಯಲ್ಲಿ ಸಾಕಿರುವಂತೆ ಕಾಣಿಸುತ್ತದೆ. ನಾಯಿಯಲ್ಲಿ ಆರೋಗ್ಯ ವ್ಯತ್ಯಯ ಕಾಣಿಸಿಕೊಂಡ ಕಾರಣಕ್ಕೆ ಅದನ್ನು ಬೀದಿಗೆ ಬಿಟ್ಟಿರಬಹುದು. ಹಾಗಾಗಿ ಕಂಡಕಂಡವರ ಮೇಲೆ ದಾಳಿ ನಡೆಸುತ್ತಿದೆ. ರಾಮಕೃಷ್ಣನಗರ ಹೆಚ್ ಬ್ಲಾಕ್‍ನಲ್ಲೇ ಸುಮಾರು 20 ಬೀದಿ ನಾಯಿಗಳಿವೆ. ಆಗಾಗ್ಗೆ ಮಕ್ಕಳ ಮೇಲೆ ದಾಳಿ ನಡೆಸುತ್ತವೆ. ಆಟವಾಡಲು ಮಕ್ಕಳನ್ನು ಹೊರಗೆ ಕಳುಹಿಸುವುದಕ್ಕೆ ಭಯವಾಗುತ್ತದೆ. ಈ ಬಗ್ಗೆ ಅನೇಕ ಬಾರಿ ಪಾಲಿಕೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ನಾಯಿಗಳನ್ನು ಸೆರೆ ಹಿಡಿಯಲು ಕಾನೂ ನಾತ್ಮಕ ಅಡೆತಡೆಯಿದೆ ಎಂದು ಹೇಳುತ್ತಾರೆ. ಪ್ರಾಣಿ ಗಳನ್ನು ಕೊಲ್ಲುವುದು ಸರಿಯಲ್ಲ. ಆದರೆ ಮನುಷ್ಯರ ಮೇಲೆ ದಾಳಿ ನಡೆಸದಂತೆ ಏನಾದರೂ ಕ್ರಮ ಕೈಗೊಳ್ಳಬೇಕು. ಕನಿಷ್ಠ ಪಕ್ಷ ಈ ರೀತಿ ಘಟನೆ ನಡೆದ ಸಂದರ್ಭ ದಲ್ಲಾದರೂ ಸಂಬಂಧಪಟ್ಟವರು ಸಾರ್ವಜನಿಕರ ರಕ್ಷಣೆಗೆ ಧಾವಿಸಬೇಕು. ಆದರೆ ಯಾರೂ ತಲೆ ಕೆಡಿಸಿಕೊಳ್ಳುವು ದಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಇಂಜೆಕ್ಷನ್ ಇಲ್ಲ ಎಂದರಂತೆ
ರೇಬಿಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಾ ಸಂಸ್ಥೆ, ಭಾರತ 2030ರ ವೇಳೆಗೆ ರೇಬಿಸ್ ಮುಕ್ತ ದೇಶವಾಗ ಬೇಕೆಂಬ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ನಾಯಿ ಕಡಿತಕ್ಕೆ ನೀಡಲಾಗುವ ರೇಬಿಸ್ ವಿರೋಧಿ ಲಸಿಕೆ(ಎಆರ್‍ವಿ) ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಆದರೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಈ ಲಸಿಕೆ ಇಲ್ಲವೆಂದು ವಾಪಸ್ಸು ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ರಾಮಕೃಷ್ಣನಗರದಲ್ಲಿ ನಾಯಿ ಕಡಿತಕ್ಕೆ ಒಳಗಾದ ಮಗುವನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಾಗ ಇಂಜೆ ಕ್ಷನ್ ಇಲ್ಲ ಎಂದು ಹೇಳಿದ್ದರಿಂದ ಖಾಸಗಿ ಆಸ್ಪತ್ರೆಗೆ ಹೋಗಿ ಲಸಿಕೆ ಕೊಡಿಸಲಾಯಿತು. ದೊಡ್ಡಾಸ್ಪತ್ರೆಯಲ್ಲೇ ಹೀಗಾದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಆ ಮಗುವಿನ ತಾತ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಕೆ.ಆರ್. ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ. ರಾಜೇಶ್, ಆಸ್ಪತ್ರೆಯಲ್ಲಿ ರೇಬಿಸ್ ವಿರೋಧಿ ಲಸಿಕೆಗೆ ಕೊರತೆಯಿಲ್ಲ. ಒಂದು ಇಂಜೆಕ್ಷನ್ ಬಾಟಲ್‍ನಲ್ಲಿರುವ ಔಷಧಿಯನ್ನು 6 ಮಂದಿಗೆ ನೀಡಬಹುದು. ತೆರೆದ ಔಷಧಿಯನ್ನು ಹೆಚ್ಚು ಸಮಯ ಬಳಸಲು ಸಾಧ್ಯವಿಲ್ಲ. ಸಂಜೆ 6 ಗಂಟೆ ನಂತರ ಆಸ್ಪತ್ರೆಗೆ ಬರುವವರಲ್ಲಿ ಕೆಲವರು ಲಸಿಕಾ ಕೊಠಡಿಯ ಮುಚ್ಚಿರುವುದನ್ನು ಕಂಡು ಬೇರೆ ಯಾರನ್ನೂ ವಿಚಾರಿಸದೆ ವಾಪಸ್ಸು ಹೋಗುತ್ತಾರೆ. ನಾಯಿ ಕಚ್ಚಿದ ಸಮಯದಿಂದ 24 ಗಂಟೆಯೊಳಗೆ ಲಸಿಕೆ ಪಡೆಯಬಹುದು. ಇಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ, ಇಲ್ಲದವರಿಗೆ ಕೇವಲ 100 ರೂ. ಶುಲ್ಕ ಪಡೆದು ಲಸಿಕೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Translate »