ಮೈಸೂರು: ಮನೆಯ ಬಾಗಿಲು ಮೀಟಿ, ಲಕ್ಷಾಂತರ ರೂ. ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿರುವ ಘಟನೆ ಮೈಸೂರಿನ ರಾಮಕೃಷ್ಣನಗರದಲ್ಲಿ ನಡೆದಿದೆ. ರಾಮಕೃಷ್ಣನಗರ ಜಿ ಬ್ಲಾಕ್, 18ನೇ ಕ್ರಾಸ್ ನಿವಾಸಿ ವೀಣಾ ಗಣೇಶ್ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಸುಮಾರು 214 ಗ್ರಾಂ ತೂಕದ ಚಿನ್ನಾಭರಣ, ಸುಮಾರು 4 ಕೆಜಿ ತೂಕದ ಬೆಳ್ಳಿ ವಸ್ತುಗಳು, 18 ಸಾವಿರ ರೂ. ನಗದು ಹಾಗೂ 10 ವಾಚ್‍ಗಳು ಸೇರಿದಂತೆ ಸುಮಾರು 5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖದೀಮರು ಕದ್ದೊಯ್ದಿದ್ದಾರೆ.
ವೀಣಾ ಗಣೇಶ್ ಅವರು ತಮ್ಮ ಪತಿ ವೈ.ಎಸ್.ಗಣೇಶ್ ಅವರೊಂದಿಗೆ ಅ.16 ರಂದು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದರು. ಅ.20ರಂದು ಮನೆಗೆ ವಾಪಸ್ಸಾದಾಗ ಮುಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆರೆಯ ಲಾಗಿತ್ತು. ಆತಂಕದಿಂದ ಒಳಹೋಗಿ ನೋಡಿದಾಗ ಕೊಠಡಿಯಲ್ಲಿದ್ದ ಗಾಡ್ರೆಜ್ ಬೀರು ಸಹ ತೆರೆದಿತ್ತು. ಪರಿಶೀಲಿಸಿದಾಗ ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಚಿನ್ನದ ಬಳೆಗಳು, ಸರಗಳು, ಓಲೆಗಳು, ನೆಕ್ಲೆಸ್, ಉಂಗುರಗಳು, ಬ್ರಾಸ್ಲೈಟ್ ಸೇರಿದಂತೆ 19 ಮಾದರಿಯ ಒಟ್ಟು 214 ಗ್ರಾಂ ತೂಕದ ಒಡವೆಗಳು, ಬೆಳ್ಳಿಯ ತಟ್ಟೆಗಳು, ಕುಂಕುಮದ ಬಟ್ಟಲುಗಳು, ಹೂ ಬುಟ್ಟಿ, ದೀಪಗಳು, ಲೋಟಗಳು ಸೇರಿದಂತೆ ಸುಮಾರು 4 ಕೆಜಿ ತೂಕದ ಬೆಳ್ಳಿ ವಸ್ತುಗಳು, 18 ಸಾವಿರ ರೂ. ನಗದು ಹಾಗೂ ವಿವಿಧ ಕಂಪನಿಗಳ ವಾಚ್‍ಗಳನ್ನು ಕಳವು ಮಾಡಲಾಗಿದೆ ಎಂದು ವೀಣಾ ಗಣೇಶ್ ಅವರು, ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳರ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.