ಮೈಸೂರು ವಿವಿ ಸ್ವಚ್ಛತಾಗಾರರ ಅಹೋರಾತ್ರಿ ಧರಣಿ ಮುಂದುವರಿಕೆ
ಮೈಸೂರು

ಮೈಸೂರು ವಿವಿ ಸ್ವಚ್ಛತಾಗಾರರ ಅಹೋರಾತ್ರಿ ಧರಣಿ ಮುಂದುವರಿಕೆ

September 7, 2018

ಮೈಸೂರು: 14 ವರ್ಷಗಳಿಂದ ಕಸ ಗುಡಿಸಿಕೊಂಡು ಬಂದ ಮಹಿಳೆಯರನ್ನು ಮೈಸೂರು ವಿಶ್ವವಿದ್ಯಾಲಯ ಕಸದ ರೀತಿಯೇ ಗುಡಿಸಿ ಹೊರ ಹಾಕಲು ಹೊರಟಿದೆ ಎಂದು ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ವಿವಿ ಮಹಿಳಾ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪ್ರೊ.ಮಹೇಶ್ ಚಂದ್ರಗುರು, 14 ವರ್ಷಗಳಿಂದ ನೂರಾರು ಜನ ಮಹಿಳೆಯರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿ ಮೈಸೂರು ವಿಶ್ವವಿದ್ಯಾಲಯದ ಆರೋಗ್ಯ ಮತ್ತು ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ಸರ್ವೋಚ್ಛ ನ್ಯಾಯಾಲಯದ ತೀರ್ಪು ಮತ್ತು ಸಫಾಯಿ ಕರ್ಮಚಾರಿ ಆಯೋಗದ ಶಿಫಾರಸ್ಸುಗಳಿಗೆ ಅನುಗುಣವಾಗಿ ಖಾಯಂ ಹುದ್ದೆ, ಕನಿಷ್ಟ ವೇತನ, ಭವಿಷ್ಯ ನಿಧಿ ಮತ್ತಿತರ ಮೂಲಭೂತ ಸೌಲಭ್ಯಗಳಿಗೆ ಅರ್ಹರಾಗಿದ್ದಾರೆ.

ಇಂತಹ ಅಸಹಾಯಕ ನೂರಾರು ಮಹಿಳೆಯರು ಮತ್ತು ಸಾವಿರಾರು ಅವಲಂಬಿತ ಕುಟುಂಬದ ಸದಸ್ಯರ ಬದುಕಿನೊಂದಿಗೆ ವಿವಿ ಅಧಿಕಾರಿಗಳು ಚೆಲ್ಲಾಟವಾಡುತಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಂತಹ ಅಮಾಯಕ ಹಾಗೂ ಅಸಹಾಯಕ ಮಹಿಳೆಯರನ್ನು ಅಮಾನುಷವಾಗಿ ಕೆಲಸದಿಂದ ತೆಗೆದುಹಾಕಿ ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸಿ ಹೊಸದಾಗಿ ಗುತ್ತಿಗೆ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಲು ಹೊರಟಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈಗಾಗಲೇ ಶತಮಾನವನ್ನು ಪೂರೈಸಿ ಜ್ಞಾನದಾಸೋಹ ಮತ್ತು ಜನಪರ ಚಳುವಳಿಗಳಿಗೆ ಅನುವು ಮಾಡಿಕೊಟ್ಟಿರುವ ಮೈಸೂರು ವಿಶ್ವವಿದ್ಯಾ ಲಯದ ಘನತೆಯನ್ನು ಇತ್ತೀಚಿನ ವರ್ಷಗಳಲ್ಲಿ ಕೆಲ ವಿವಿಯ ಅಧಿಕಾರಿಗಳು ಹಾಳು ಮಾಡಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದರು.

ವ್ಯರ್ಥ ಚರ್ಚೆ: ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ್ದ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಹಾಗೂ ಕುಲಸಚಿವ ಪ್ರೊ. ರಾಜಣ್ಣ, ಸಂಘದ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸುವುದಾಗಿ ಹೇಳಿದ್ದರು. ಈ ಸಂಬಂಧ ಇಂದು ಸಂಜೆ 4 ಗಂಟೆಗೆ ಚರ್ಚೆ ನಡೆದಿದ್ದು, ಯಾವುದೇ ತಿರ್ಮಾನಗಳನ್ನು ಕೈಗೊಳ್ಳಲಾಗಿಲ್ಲ. ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯಗಳ ಸ್ವಚ್ಛತಾ ಕಾರ್ಯ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮೇಟಿ, ಮೊದಲು ಪ್ರತಿಭಟನೆಯನ್ನು ನಿಲ್ಲಿಸಿ, ನಂತರ ನಿಮ್ಮ ಸಮಸ್ಯೆಗಳ ಪರಿಹರಿಸುತ್ತೇವೆ ಎಂದು ಹೇಳುತ್ತಿದ್ದಾರೆಯೇ ಹೊರತು ಸಮಸ್ಯೆಗಳನ್ನು ಕೇಳಲು ಯಾರು ಸಿದ್ದರಿಲ್ಲ. ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಅವರ ಕಷ್ಟಗಳಿಗೆ ಸ್ಫಂದಿಸಿ ಎಂದು ಕೇಳಿಕೊಂಡರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

Translate »