ಧರ್ಮಸ್ಥಳ ಪಟ್ಟಾಧಿಕಾರಿಯಾಗಿ 50 ವರ್ಷ ಪೂರೈಸಿದ ಹಿನ್ನೆಲೆ: ನಾಳೆ ಮೈಸೂರಿನಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ನಾಗರಿಕ ಗೌರವ ಸಮರ್ಪಣೆ
ಮೈಸೂರು

ಧರ್ಮಸ್ಥಳ ಪಟ್ಟಾಧಿಕಾರಿಯಾಗಿ 50 ವರ್ಷ ಪೂರೈಸಿದ ಹಿನ್ನೆಲೆ: ನಾಳೆ ಮೈಸೂರಿನಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ನಾಗರಿಕ ಗೌರವ ಸಮರ್ಪಣೆ

November 1, 2018

ಮೈಸೂರು:  ಶ್ರೀಕ್ಷೇತ್ರ ಧರ್ಮಸ್ಥಳದ ಪಟ್ಟಾಧಿಕಾರಿಯಾಗಿ 50 ವರ್ಷಗಳನ್ನು ಪೂರೈಸಿರುವ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಸಮರ್ಪಣೆ ಹಾಗೂ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಒಕ್ಕೂಟ ಗಳ ಪದಗ್ರಹಣ ಸಮಾರಂಭವನ್ನು ನ.2ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಗೌರವಾರ್ಪಣೆ ಸಮಿತಿಯ ಗೌರವಾಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮತ್ತು ಕಾರ್ಯಾಧ್ಯಕ್ಷ ಎಚ್.ವಿ. ರಾಜೀವ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಐದು ದಶಕಗಳಿಂದ ಧರ್ಮಸ್ಥಳದ ಪಟ್ಟಾಧಿಕಾರಿಯಾಗಿ ಸಾಮಾಜಿಕ, ಧಾರ್ಮಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಜನಮಾನಸ ರಾಗಿದ್ದಾರೆ. ಜನರಲ್ಲಿ ಶಾಂತಿ, ಸಹಬಾಳ್ವೆಯೊಂದಿಗೆ ಅದೆಷ್ಟೋ ಜನರ ಮನ ಪರಿವರ್ತನೆಯಲ್ಲಿ ತೊಡಗಿರುವ ಅವರಿಗೆ ಮೈಸೂರು ನಾಗರಿಕರ ವತಿಯಿಂದ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದರು.

ನ.2ರಂದು ಬೆಳಿಗ್ಗೆ 11 ಗಂಟೆಗೆ ಮಹಾರಾಜ ಕಾಲೇಜು ಮೈದಾನದಿಂದ ನಂದಿ ಧ್ವಜ, ವೀರಗಾಸೆ ಕುಣಿತ ಸೇರಿದಂತೆ ಹಲವು ಜನಪದ ಕಲಾತಂಡಗಳ ಸಹಿತ ಮೆರವಣಿಗೆ ನಡೆದು, ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ 10,000 ಆಸನ ವ್ಯವಸ್ಥೆ ಮಾಡಲಾಗಿದ್ದು, 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಮಾರಂಭ ಉದ್ಘಾಟಿಸುವರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ್‍ಸಿಂಹ, ಶಾಸಕರಾದ ತನ್ವೀರ್‍ಸೇಠ್, ಎಲ್.ನಾಗೇಂದ್ರ, ಡಾ.ಯತೀಂದ್ರ, ಯುಬಿಐ ಫೀಲ್ಡ್ ಜನರಲ್ ಮ್ಯಾನೇಜರ್ ಎಸ್.ಎನ್.ಕೌಶಿಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ.ಎಲ್.ಎಚ್. ಮಂಜುನಾಥ್ ಇನ್ನಿತರರು ಅತಿಥಿಯಾಗಿ ಭಾಗವಹಿಸುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‍ಗಳಾದ ಪುರುಷೋತ್ತಮ್, ಬಿ.ಎಲ್.ಭೈರಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಎಸ್.ಸೋಮಶೇಖರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಉಪಸ್ಥಿತರಿದ್ದರು.

Translate »