ಡಾ.ಎಂ.ಆರ್.ರವಿ ಅವರ `ಜೀವನ ಪ್ರೀತಿ’ ಕೃತಿ ಲೋಕಾರ್ಪಣೆ
ಮೈಸೂರು

ಡಾ.ಎಂ.ಆರ್.ರವಿ ಅವರ `ಜೀವನ ಪ್ರೀತಿ’ ಕೃತಿ ಲೋಕಾರ್ಪಣೆ

September 16, 2018

ಮೈಸೂರು:  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಲೇಖಕ, `ಮೈಸೂರು ಮಿತ್ರ’ ಅಂಕಣಕಾರ ಡಾ.ಎಂ.ಆರ್. ರವಿ ಅವರ `ಜೀವನ ಪ್ರೀತಿ’ ಕೃತಿ ಶನಿವಾರ ಲೋಕಾ ರ್ಪಣೆಯಾಯಿತು. `ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಪ್ರಕಟ ಗೊಂಡಿರುವ ಡಾ.ಎಂ.ಆರ್.ರವಿ ಅವರ 30 ಅಂಕಣಗಳ ಗುಚ್ಛವಾದ `ಜೀವನ ಪ್ರೀತಿ’ ಕೃತಿಯನ್ನು ಮಹಿಮಾ ಪ್ರಕಾಶನ ಹೊರ ತಂದಿದ್ದು, ಶನಿವಾರ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಸಾಹಿತಿ ಡಾ.ಅರವಿಂದ ಮಾಲಗತ್ತಿ ಅವರು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಜೀವನ ಪ್ರೀತಿ ಹಂಚುವ ಕಾಯಕ ಮೊದಲಿಗೆ ಮನೆಯಿಂದಲೇ ಆರಂಭವಾಗಬೇಕು. ನಂತರ ತಾನಾಗಿಯೇ ನಾಡಿನುದ್ದಕ್ಕೂ ಪಸರಿಸುತ್ತದೆ. ಏಕಾಏಕಿ ನಾಡಿನೆಲ್ಲೆಡೆ ಜೀವನ ಪ್ರೀತಿಯನ್ನು ಹರಡಲು ಮುಂದಾದರೆ ಮುಗ್ಗರಿಸಬೇಕಾಗುತ್ತದೆ. ಡಾ.ಎಂ.ಆರ್.ರವಿ ಅವರ ಬರವಣಿಗೆ ಪ್ರತಿ ಮನದಲ್ಲೂ ಜೀವನ ಪ್ರೀತಿ ಬಿತ್ತುವಂತಿದೆ. ರವಿ ಅವರು ಉತ್ತಮ ಅಧಿಕಾರಿ ಎಂದು ಕೇಳಿದ್ದೆ. ಅವರ ಬರವಣಿಗೆಯನ್ನು ಗಮನಿಸಿದ್ದರೂ, ಅಷ್ಟೇನು ಗಂಭೀರವಾಗಿ ನೋಡಿರಲಿಲ್ಲ. ಆದರೆ ಜೀವನ ಪ್ರೀತಿ ಪುಸ್ತಕವನ್ನು ಓದಿದ ನಂತರ ಇವರ ಮೇಲಿನ ಅಭಿಮಾನ ಇಮ್ಮಡಿಯಾಗಿದೆ. ಈ ಪುಸ್ತಕ ಪರೋಕ್ಷವಾಗಿ ರವಿ ಅವರ ವ್ಯಕ್ತಿತ್ವ, ಆಲೋ ಚನಾ ಕ್ರಮ, ಕಾರ್ಯ ವೈಖರಿ, ಚಲನಶೀಲತೆ, ಕ್ರಿಯಾಶೀಲತೆ ಸ್ವರೂಪವನ್ನು ಬಿಂಬಿಸುತ್ತದೆ ಎಂದು ಬಣ್ಣಿಸಿದರು.

ಜೀವನ ಪ್ರೀತಿ ಕೃತಿ, ಜೀವನ ದರ್ಪಣವೂ ಆಗಿದೆ. ಹೇಗೆ ಬದುಕಬೇಕು ಹಾಗೂ ಹೇಗೆ ಬದುಕಬಾರದು ಎಂಬು ದನ್ನೂ ಪರೋಕ್ಷವಾಗಿ ತಿಳಿಸುತ್ತದೆ. ಸಾಮಾಜಿಕ ಜವಾಬ್ದಾರಿ ಯುಳ್ಳವರಿಂದ ಮಾತ್ರ ಈ ರೀತಿಯ ಬರವಣಿಗೆ ನಿರೀಕ್ಷಿ ಸಲು ಸಾಧ್ಯ. ಬರವಣಿಗೆ ಶೈಲಿ ವಿಶಿಷ್ಟವಾಗಿದೆ. ಪ್ರತಿಭಾತ್ಮಕ ಪರಿಭಾಷೆಯ ನಿರೂಪಣೆಯೊಂದಿಗೆ ಪ್ರತಿಯೊಂದು ಲೇಖ ನವೂ ಆರಂಭವಾಗುತ್ತದೆ. ದ.ರಾ.ಬೇಂದ್ರೆಯವರಂತೆ ಪತ್ರ ಕರ್ತರು ಭಾಷೆಯೊಂದಿಗೆ ಚೆಲ್ಲಾಟವಾಡುತ್ತಾರೆ. ಹಾಗೆಯೇ ರವಿ ಅವರೂ ಪತ್ರಕರ್ತರಾಗಿದ್ದರಿಂದ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ತಳ ಸಮುದಾಯದ ವಸ್ತು ವಿಷಯ ಗಳನ್ನು ಇಟ್ಟುಕೊಂಡು ಮಧ್ಯಮ ವರ್ಗದ ಜೀವನ ಸಂರಚನೆ ಯನ್ನು ಲೇಖನದಲ್ಲಿ ಕಟ್ಟಿದ್ದಾರೆ. ಮಾನವೀಯತೆ, ಬದ್ಧತೆ, ಸಂಸ್ಕøತಿ, ನಾಗರಿಕತೆ, ಶಿಕ್ಷಣದ ಬಗ್ಗೆ ಹೆಚ್ಚು ಚಿಂತನೆ ಮಾಡಿರು ವುದು ಲೇಖನಗಳಲ್ಲಿ ಗೋಚರಿಸುತ್ತದೆ ಎಂದು ತಿಳಿಸಿದರು.

ರವಿ ಅವರ ದೇಹ ಮಂಗಳೂರಿನಲ್ಲಿದ್ದರೂ ಇವರ ಆತ್ಮ ಮೈಸೂರಿನಲ್ಲಿದೆ. ತಮ್ಮ ಲೇಖನಗಳಲ್ಲಿ ಮೈಸೂರಿನ ವಿಚಾರ ವನ್ನು ಪ್ರಸ್ತಾಪಿಸುತ್ತಾರೆ. ಪ್ರತಿ ಲೇಖನದಲ್ಲೂ ವ್ಯಾಖ್ಯಾನ ಸಹಿತ ನಿರೂಪಣೆ ಕಾಣಬಹುದು. ಜೀವನಾನುಭವದ ವ್ಯಾಖ್ಯಾನ ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಅಧಿಕಾರಿಗಳಲ್ಲಿ ಸಾಮಾನ್ಯವಾಗಿ ತಮ್ಮ ಬಗ್ಗೆ ಹೇಳಿಕೊಳ್ಳುವ ಗುಣವನ್ನು ಕಾಣುತ್ತೇವೆ. ಆದರೆ ರವಿ ಅವರು ಹಾಗಲ್ಲ. ಈವರೆಗೆ ಯಾವ ಅಧಿಕಾರಿಯೂ ಭೇಟಿ ನೀಡದ ಪಾವೂರು ನಡುಗಡ್ಡೆಗೆ ಹೋಗಿ ಅಲ್ಲಿನ ಜನರಿಗೆ ಸರ್ಕಾರದ ಯೋಜನೆಗಳು ತಲುಪದಿರುವುದನ್ನು ಮನಗಂಡಿ ದ್ದಾರೆ. ಓರ್ವ ಅಧಿಕಾರಿಯಾಗಿ ಸರ್ಕಾರದ ಯೋಜನೆಗಳ ಲೋಪಗಳನ್ನು ಪರೋಕ್ಷವಾಗಿ ತಮ್ಮ ಲೇಖನದಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಸರ್ಕಾರಗಳಲ್ಲಿ ಮಾನವೀಯತೆ ಇರಬೇಕೆಂಬುದು ರವಿ ಅವರ ಬರವಣಿಗೆಯಲ್ಲಿ ಅರಿವಿಗೆ ಬರುತ್ತದೆ. ಇಡೀ ಸರ್ಕಾರಿ ವ್ಯವಸ್ಥೆ ಹೀಗೆ ಸ್ವ-ವಿಮರ್ಶೆ ಮಾಡಿಕೊಂಡರೆ ಮಾನ ವೀಯತೆ ಮಡುಗಟ್ಟುತ್ತದೆ. ಅಧಿಕಾರಿಯಾಗಿ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ದೊಡ್ಡ ಪರಂಪರೆಯಲ್ಲಿ ಡಾ.ಎಂ.ಆರ್.ರವಿ ಅವರು ಪ್ರಮುಖರಾಗಿ ನಿಂತಿದ್ದಾರೆಂದು ಶ್ಲಾಘನೆ ವ್ಯಕ್ತಪಡಿಸಿದರು.

ಪ್ರಸ್ತುತ ಬಲವಂತವಾಗಿ ಡ್ರೆಸ್‍ಕೋಡ್ ಹೇರಿರುವುದ ರಿಂದಲೇ ಶಾಲೆಯ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸುತ್ತಿ ದ್ದಾರೆ. ದೇವಾಲಯಗಳು ವ್ಯವಹಾರ ಕೇಂದ್ರವಾಗು ತ್ತಿರು ವಾಗ ಡ್ರೆಸ್‍ಕೋಡ್ ಪ್ರಶ್ನಿಸುವ ಅಗತ್ಯವಿದೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಮೊದಲಿಗೆ ಉತ್ತಮ ವಾತಾ ವರಣ ಸೃಷ್ಟಿಯಾಗಬೇಕು ಎಂದು ಇದೇ ವೇಳೆ ಅರವಿಂದ ಮಾಲ ಗತ್ತಿ ಅವರು ಅಭಿಪ್ರಾಯಿಸಿದರು.
ನಮ್ಮೊಂದಿಗೆ ಮಾತನಾಡುತ್ತದೆ: ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಸ್ಕøತಿ ಚಿಂತಕಿ, ಐಪಿಎಸ್ ಅಧಿಕಾರಿ ಡಾ. ಧರಣಿದೇವಿ ಮಾಲಗತ್ತಿ ಅವರು ಮಾತನಾಡಿ, ಡಾ.ಎಂ. ಆರ್.ರವಿ ಅವರ `ಜೀವನ ಪ್ರೀತಿ’ ಪುಸ್ತಕ ಓದಿಸಿಕೊಂಡು ಹೋಗುವುದಷ್ಟೇ ಅಲ್ಲ. ನಮ್ಮೊಂದಿಗೆ ಮಾತನಾಡುತ್ತದೆ. ನಾವೂ ಪುಸ್ತಕದ ಒಂದು ಭಾಗವಾಗುತ್ತೇವೆ. `99 ಪೈಸೆ 1 ರೂ. ಆಗಲ್ಲ’ ಎಂಬ ಲೇಖನ ಜೀವನದ ಪರಿಪೂರ್ಣ ತೆಯ ಬಗ್ಗೆ ಚಿಂತನೆಗೆ ಹಚ್ಚುತ್ತದೆ. ಜೀವನದ ಪ್ರತಿ ಹಂತವೂ ಪ್ರಮುಖವಾದುದು ಎಂಬುದನ್ನು ತಿಳಿಸುತ್ತದೆ. ಪ್ರತಿಯೊಂದು ಲೇಖನದಲ್ಲೂ ಒಂದೊಂದು ಸಂದೇಶವಿದೆ. ಎಲ್ಲರಿಗೂ ಆಪ್ತವಾಗುವ ಲೇಖನಗಳು ಮನಸ್ಸಿನಲ್ಲಿ ಬೇರೂರುತ್ತವೆ. ಅಧಿಕಾರಿಗಳು ದಕ್ಷ ಹಾಗೂ ಪ್ರಾಮಾಣಿಕರಾಗಿದ್ದರೆ ಸಮಾಜ ವನ್ನು ಕ್ಷೋಬೆ ಮುಕ್ತವಾಗಿಸಬಹುದು. ಈ ನಿಟ್ಟಿನಲ್ಲಿ ಸೂಕ್ಷ್ಮಸಂವೇದನೆಯ ಎಂ.ಆರ್.ರವಿ, ಸಮಾಜದ ಒಳಿತಿ ಗಾಗಿ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಇವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.

ವಿಶ್ರಾಂತ ಕಾನೂನು ಪ್ರಾಧ್ಯಾಪಕರಾದ ಡಾ.ಸಿ.ಕೆ.ಎನ್. ರಾಜಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕರಾದ ಡಾ.ಎಂ.ಆರ್.ರವಿ, ಮಹಿಮಾ ಪ್ರಕಾಶನದ ಮಾಲೀಕರಾದ ಕೆ.ವಿ.ಶ್ರೀನಿವಾಸ್, ಕವಿ ಸತೀಶ್ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಮನಸ್ಸಿನಲ್ಲಿ ಪ್ರೀತಿ ಇದ್ದರೆ ಬರವಣಿಗೆ ಮೂಲಕ ಅನುಭವ ಹಂಚಿಕೊಳ್ಳಬಹುದು
ಮೈಸೂರು:  ಎಷ್ಟೇ ಅಡ್ಡಿ, ಆತಂಕ ಗಳು ಎದುರಾದರೂ ನಾಲ್ಕು ಜನರಂತೆ ನಾನೂ ಬದು ಕುತ್ತೇನೆಂಬ ಜೀವನ ಪ್ರೀತಿ ಪ್ರತಿಯೊಬ್ಬರಲ್ಲೂ ಇರಬೇ ಕೆಂದು ದಕ್ಷಿಣ ಕನ್ನಡ ಜಿಪಂ ಸಿಇಓ `ಮೈಸೂರು ಮಿತ್ರ’ ಅಂಕಣಕಾರ ಡಾ.ಎಂ.ಆರ್.ರವಿ ಹೇಳಿದರು.

ಮೈಸೂರಿನಲ್ಲಿ ಶನಿವಾರ ತಮ್ಮ `ಜೀವನ ಪ್ರೀತಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಅಡ್ಡಿ, ಆತಂಕಗಳು ಎದುರಾದಾಗ ಕುಗ್ಗಬಾರದು. ನನ್ನಿಂದ ಮತ್ತೊಬ್ಬರಿಗೆ ಸಹಾಯವಾಗದಿದ್ದರೂ ತೊಂದರೆ ಯಾಗದಂತೆ ಬದುಕುತ್ತೇನೆಂಬ ಜೀವನ ಪ್ರೀತಿ ಬೆಳೆಸಿಕೊಳ್ಳ ಬೇಕು. ಬರವಣಿಗೆ ಒಂದು ಕೌಶಲ್ಯವಲ್ಲ. ಪ್ರತಿಯೊಬ್ಬರಲ್ಲೂ ಓರ್ವ ಓದುಗ ಹಾಗೂ ಬರಹಗಾರ ಇದ್ದೇ ಇರುತ್ತಾನೆ. ಮನಸ್ಸಿ ನಲ್ಲಿ ಪ್ರೀತಿಯಿದ್ದರೆ ಬರವಣಿಗೆ ಮೂಲಕ ತಮ್ಮ ಅನುಭವ ಹಂಚಿಕೊಳ್ಳಬಹುದು ಎಂದು ಅಭಿಪ್ರಾಯಿಸಿದರು.

ಬೇರೆಯವರನ್ನು ವಿಮರ್ಶೆ ಮಾಡುವುದು ಸುಲಭ. ಆದರೆ ನಮ್ಮನ್ನು ನಾವು ಅರ್ಥೈಸಿಕೊಳ್ಳುವುದು ಕಷ್ಟ. ನನ್ನನ್ನು ನಾನು ತಿದ್ದಿಕೊಂಡು, ಪರಿಪೂರ್ಣತೆ ಕಡೆಗೆ ಸಾಗಲು ಬರವಣಿಗೆ ಸಾಧನವಾಗಿದೆ. ಸಂತೋಷ, ಪ್ರೀತಿ ಕಂಡುಕೊಳ್ಳಲು ಬರವಣಿಗೆ ಅಸ್ತ್ರವಾಗಿದೆ. 2 ಕಿವಿ, ಒಂದೇ ಬಾಯಿ ಇರುವುದು, ಹೆಚ್ಚು ಕೇಳಬೇಕು, ಕಡಿಮೆ ಮಾತನಾಡಬೇಕೆಂದು. ಪಿ.ಲಂಕೇಶ್ ಅವರೂ ಹಾಗೆಯೇ ಇದ್ದವರು. ಅವರು ಒಳ್ಳೆಯ ಮಾತುಗಾರರಾಗಿರಲಿಲ್ಲ ಆದರೆ ಅವರ ಪ್ರತಿ ಅಕ್ಷರದಲ್ಲಿ ಜೀವಂತಿಕೆಯಿದೆ. ಕೆಲ ಅಧಿಕಾರಿ ಗಳು ತುಂಬಾ ಬ್ಯುಸಿ, ಸಮಯವೇ ಸಾಲುವುದಿಲ್ಲ ಎನ್ನುತ್ತಾರೆ. ಅದು ನೆಪಮಾತ್ರ. ನಮ್ಮ ಆದ್ಯತೆಗಳನ್ನು ಅರ್ಥ ಮಾಡಿಕೊಂಡರೆ ಎಲ್ಲದಕ್ಕೂ, ಎಲ್ಲರಿಗಾಗಿಯೂ ಸಮಯ ನೀಡಬಹುದು. ಜೀವನ ಪ್ರೀತಿಯಿದ್ದರೆ ಎಲ್ಲವೂ ಸಾಧ್ಯ ಎಂದು ತಿಳಿಸಿದರು.
ಗಣಪತಿ ದೊಡ್ಡ ಶಕ್ತಿ: ನಾನು 27 ವರ್ಷಗಳ ಹಿಂದೆ `ಸ್ಟಾರ್ ಆಫ್ ಮೈಸೂರ್’ನಲ್ಲಿ ಪತ್ರಕರ್ತನಾಗಿದ್ದೆ. ಆಗ ಇಂಗ್ಲಿಷ್‍ನಲ್ಲಿ ಬರೆಯುತ್ತಿದ್ದೆ. ಅಂದಿನಿಂದ ಈವರೆಗೂ `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅವರು, ನನಗೆ ದೊಡ್ಡ ಶಕ್ತಿಯಾಗಿದ್ದಾರೆ. ಒಂದು ಕಾಲದಲ್ಲಿ ನನಗೆ ಜೀವನ ಕೊಟ್ಟ ಪತ್ರಿಕೆ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಆದ್ದ ರಿಂದಲೇ ನಾನು `ಮೈಸೂರು ಮಿತ್ರ’ದಲ್ಲಿ ಮಾತ್ರ ಅಂಕಣ ಬರೆಯುತ್ತಿದ್ದೇನೆ. ಈ ಸಂದರ್ಭದಲ್ಲಿ ಕೆಬಿಜಿಯವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

`ಜೀವನ ಪ್ರೀತಿ’ ಪುಸ್ತಕವನ್ನು 4 ಬಾರಿ ಓದಿದ್ದೇನೆ. ಆದರೂ ತೃಪ್ತಿಯಾಗಿಲ್ಲ. ಇನ್ನೂ 2 ಬಾರಿ ಓದಬೇಕೆಂದಿ ದ್ದೇನೆ. ನನ್ನ ತಾಯಿ ಮಾತಿಗೊಂದು ಗಾದೆ ಹೇಳುತ್ತಿದ್ದರು. ಎಂ.ಆರ್.ರವಿ ಅವರ ಲೇಖನದಲ್ಲಿ ಒಂದೊಂದು ಗಾದೆ ಕಾಣಿಸುತ್ತದೆ. ಅದು ಅವರ ತಾಯಿ ಪ್ರಭಾವವಿರ ಬಹುದು. ಸಾಧನೆ ಹಾದಿಯಲ್ಲಿ ಸಾಗುವವರಿಗೆ ತೃಪ್ತಿ ಇರಬಾರದು. ಪ್ರಮುಖ ವಿಷಯಗಳ ಬಗ್ಗೆ ಪರ ಹಾಗೂ ವಿರೋಧ ವಿಶ್ಲೇಷಣೆ ಮಾಡಿದ್ದಾರೆ. ಪ್ರತಿ ಲೇಖನ ಓದಿದಾಗಲೂ ಹೌದು ಇದು ಸರಿ ಎನಿಸುತ್ತದೆ. ರವಿ ಅವರು ತಮ್ಮನ್ನು ಕಾಡುವ ಸಮಸ್ಯೆಗಳನ್ನು ನಮ್ಮ ತಲೆಗೂ ಬಿತ್ತಿದ್ದಾರೆ. ಈ ಪುಸ್ತಕ ಓದುಗರ ವಿಚಾರಶೀಲತೆಯನ್ನು ಪ್ರಚೋದಿಸುತ್ತದೆ. ಜೀವನಕ್ಕೆ ಹಿಡಿದ ಕನ್ನಡಿಯಂತಿದೆ. ಕೆಲವೊಂದು ಲೇಖನಗಳು ಕಣ್ಣಲಿ ನೀರು ತರಿಸಿವೆ. ರವಿ ತಮ್ಮ ಚಿಂತನಾಶೀಲ ಬರಹದ ಮೂಲಕ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಒಳ್ಳೆಯ ಪುಸ್ತಕ ಬಿಡುಗಡೆಯಾಗಿದೆ ಎಂದು ಸಂತೋಷವಾಗುತ್ತಿದೆ.
-ಡಾ.ಸಿ.ಕೆ.ಎನ್.ರಾಜಾ, ಕಾನೂನು ತಜ್ಞ

Translate »