`ಉತ್ತರ ಕಾಂಡ’ ಸೃಷ್ಟಿಗೆ ಜಿಂಕೆಯ ಚಿತ್ರವೇ ಪ್ರೇರಣೆ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ
ಮೈಸೂರು

`ಉತ್ತರ ಕಾಂಡ’ ಸೃಷ್ಟಿಗೆ ಜಿಂಕೆಯ ಚಿತ್ರವೇ ಪ್ರೇರಣೆ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ

October 1, 2018

ಮೈಸೂರು: ರಾಮಾಯಣ ಕುರಿತಾದ `ಉತ್ತರ ಕಾಂಡ’ ಕಾದಂಬರಿ ಸೃಷ್ಟಿಗೆ ಆಕಸ್ಮಿಕವಾಗಿ ಸಿಕ್ಕ ಜಿಂಕೆಯ ಚಿತ್ರವೇ ಮೂಲ ಪ್ರೇರಣೆ ಎಂದು ಕಾದಂಬರಿ ಕತೃ ಡಾ.ಎಸ್.ಎಲ್. ಭೈರಪ್ಪನವರೇ ಸ್ವತಃ ತಿಳಿಸಿದ್ದಾರೆ.

ಮೈಸೂರಿನ ಶಾರದಾ ವಿಲಾಸ ಕಾಲೇಜು ಶತ ಮಾನೋತ್ಸವ ಭವನದಲ್ಲಿ ಭಾನುವಾರ, ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ `ಉತ್ತರ ಕಾಂಡ’ ಕಾದಂಬರಿ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದ ಅವರು, ಕಾದಂಬರಿ ಸೃಷ್ಟಿಗೆ ಪ್ರೇರಣೆಯಾದ ಜಿಂಕೆ ಚಿತ್ರವನ್ನು ಪ್ರದರ್ಶಿಸಿ, ಹೀಗೆ ವಿವರಿಸಿದರು.

ಆರು ವರ್ಷದ ಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ `ಬೆಡ್ ಅಂಡ್ ಬ್ರೇಕ್‍ಫಾಸ್ಟ್(ಬಿ ಅಂಡ್ ಬಿ)’ವೊಂದರಲ್ಲಿ ಉಳಿದುಕೊಂಡಿದ್ದೆ. `ಬಿ ಅಂಡ್ ಬಿ’ ಎಂದರೆ ಶೌಚಗೃಹ ಸೇರಿದಂತೆ ಮೂಲ ಸೌಕರ್ಯವುಳ್ಳ ಒಂದು ಸಣ್ಣ ಕೊಠಡಿ. ಒಂದೆಡೆ ನಾಲ್ಕೈದು ಕೊಠಡಿಗಳಿರುತ್ತವೆ. ಇವುಗಳನ್ನು ಗೃಹಿಣಿಯರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಹಾಗೆಯೇ ನಾನು 2 ವಾರಗಳ ಕಾಲ ಉಳಿದುಕೊಂಡಿದ್ದ ಬೆಡ್ ಅಂಡ್ ಬ್ರೇಕ್‌ಫಾಸ್ಟ್‌ನಲ್ಲಿ ಒಂದು ಸುಂದರವಾದ ಜಿಂಕೆಯ ಚಿತ್ರವಿತ್ತು. ಈ ಚಿತ್ರ ತುಂಬಾ ಚೆನ್ನಾಗಿದೆ ಎಂದು 2 ಬಾರಿ ಹೇಳಿದ್ದೆ. ಕೊಠಡಿಯನ್ನು ಖಾಲಿ ಮಾಡುವ ಸಂದರ್ಭದಲ್ಲಿ ಬಿ ಅಂಡ್ ಬಿ ಒಡತಿ, ಜಿಂಕೆಯ ಚಿತ್ರವನ್ನು ನನಗೆ ನೀಡಿದರು. ನಾನು ನಿರಾಕರಿಸಿದೆ. ಆದರೆ ಉಡುಗೊರೆಯಾಗಿ ಕೊಡುತ್ತಿದ್ದೇನೆಂದು ವಿಮಾನ ಪ್ರಯಾಣದಲ್ಲಿ ಯಾವುದೇ ಹಾನಿಯಾಗದಂತೆ ಚಿತ್ರವನ್ನು ಪ್ಯಾಕ್ ಮಾಡಿಕೊಟ್ಟರು.

ಆ ಜಿಂಕೆಯ ಚಿತ್ರವನ್ನು ತಂದು ನನ್ನ ಮನೆಯ ಗೋಡೆಗೆ ನೇತು ಹಾಕಿದ್ದೆ. ಯಾವುದೋ ಒಂದು ದಿನ ಆ ಚಿತ್ರವನ್ನು ನೋಡುವಾಗ ರಾಮಾಯಣದಲ್ಲಿ ಸೀತೆ, ಒಂದು ಜಿಂಕೆಗಾಗಿ ಹಠ ಹಿಡಿಯುವ ಕತೆ ನೆನಪಿಗೆ ಬಂದಿತು. ಆ ಬಗ್ಗೆ ಯೋಚಿಸುವಾಗ ಸೀತೆ, ಒಂದು ಜಿಂಕೆಗೆ ಹಠ ಹಿಡಿಯುವಷ್ಟು ಬಾಲಿಶಳೇ ಎನ್ನಿಸಿತು. ಈ ಸಂದರ್ಭದಲ್ಲಿ ಒಂದು ಮಗುವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆಯಲ್ಲಿದ್ದ ಸೀತೆಗೆ, ಮುದ್ದಾದ ಪುಟ್ಟ ಜಿಂಕೆಯನ್ನು ಕಂಡು ಅದನ್ನು ಮುದ್ದಾಡಬೇಕು ಎನ್ನಿಸಿರಬೇಕು. ಹಾಗಾಗಿ ಆ ಜಿಂಕೆಗಾಗಿ ಹಠ ಹಿಡಿದಿರಬಹುದು ಎಂದೆನ್ನಿಸಿತು. ಒಟ್ಟಾರೆ ಆಕಸ್ಮಿಕವಾಗಿ ಸಿಕ್ಕಂತಹ ಈ ಜಿಂಕೆಯ ಚಿತ್ರವೇ `ಉತ್ತರ ಕಾಂಡ’ ಬರೆಯಲು ಪ್ರೇರೇಪಿಸಿತು ಎಂದು ಭೈರಪ್ಪನವರು ಸ್ಮರಿಸಿಕೊಂಡರು.

ಅಧ್ಯಾತ್ಮಕ್ಕೆ ವೇದಗಳೇ ಆಧಾರ: ಅಧ್ಯಾತ್ಮಕ್ಕೆ ವೇದಗಳೇ ಆಧಾರ. ವೇದಗಳು ಮೂಲಭೂತವಾದ ತತ್ವಗಳನ್ನು ಅಖಂಡವಾಗಿ ನೀಡಿವೆ. ಹಾಗೆಯೇ ವಾಲ್ಮೀಕಿ ಅವರೂ ವೇದಗಳ ಸತ್ಯವನ್ನು ಕತೆಯ ರೂಪದಲ್ಲಿ ಹೇಳಬೇಕು. ವೇದಗಳ ತತ್ವ, ಆದರ್ಶಗಳು ಎಲ್ಲರಿಗೂ ಅರ್ಥವಾಗಬೇಕೆಂಬ ಉದ್ದೇಶದಿಂದ ರಾಮಾಯಣ ಮಹಾಕಾವ್ಯ ರಚಿಸಿದರು. ಪುರಾಣ, ಪುಣ್ಯಕತೆಗಳನ್ನು ಬಳಸಿ, ಬೆಳೆಸುವುದರೊಂದಿಗೆ ವೇದದ ಮಹತ್ವವನ್ನು ಸಾರಿದರು. ಆದರ್ಶ ಪಾತ್ರಗಳು ಸೃಷ್ಟಿಯಾದವು. ಇದರೊಂದಿಗೆ ದೇವರ ಅವತಾರ ಎಂಬ ಕಲ್ಪನೆಯೂ ಸೇರಿಕೊಂಡಿತು. ವಾಲ್ಮೀಕಿ ಅವರಲ್ಲಿ ಅಗಾಧವಾದ ಕವಿತಾ ಶಕ್ತಿಯಿತ್ತು. ಈಗಿರುವಂತೆ ರಸಕ್ಕಾಗಿ ಕಾವ್ಯವಲ್ಲ. ವಾಲ್ಮೀಕಿ ಅವರು ಜೀವನ ಧರ್ಮ, ಪುರಾಣಕ್ಕಾಗಿ ಕಾವ್ಯ ರಚಿಸಿದ್ದಾರೆ. ವಾಲ್ಮೀಕಿ ಅವರ `ರಾಮಾಯಣ’, ವೇದವ್ಯಾಸರ `ಮಹಾಭಾರತ’ದಲ್ಲಿರುವ ಪಾತ್ರ, ಸನ್ನಿವೇಶ ಸೃಷ್ಟಿ ಸಾರ್ವಕಾಲಿಕ ಅಂಶಗಳು. ಇಂದಿಗೂ ರಾಮ, ಲಕ್ಷ್ಮಣ, ಸೀತೆ, ಭೀಮ ಎಂದು ನಾಮಕರಣ ಮಾಡುತ್ತಾರೆ. ಗಾದೆಗಳಿಗೂ ಈ ಪಾತ್ರಗಳ ಹೆಸರನ್ನೇ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಹಾಗೆಯೇ ಅರ್ಥಮಾಡಿಕೊಳ್ಳಬೇಕು: ರಾಮ ತನ್ನ ತಮ್ಮ ಭರತನಿಗೆ ಆಳ್ವಿಕೆ ಬಿಟ್ಟುಕೊಟ್ಟು, ವನವಾಸಕ್ಕೆ ತೆರಳುತ್ತಾನೆ. ಆ 14 ವರ್ಷಗಳ ಕಾಲ ಭರತ, ರಾಜಧಾನಿ ಅಯೋಧ್ಯೆಗೆ ಹೋಗುವುದಿಲ್ಲ. ಬದಲಾಗಿ ನಂದಿಗ್ರಾಮದಲ್ಲಿ ಉಳಿದುಕೊಂಡು ಅಣ್ಣ ರಾಮನ ಪಾದುಕೆಗಳನ್ನು ಸಿಂಹಾಸನದಲ್ಲಿಟ್ಟು ಆಳ್ವಿಕೆ ನಡೆಸುತ್ತಾನೆ. ಪಾಪ ಆತನಿಕೆ ರಾಜ್ಯ ಆಳುವ ಶಕ್ತಿ ಇರಲಿಲ್ಲ. ಹಾಗಾಗಿ ಪುಂಡರ ಉಪಟಳ ವಿಪರೀತವಾಗಿರುತ್ತದೆ. ಸರಿಯಾಗಿ ತೆರಿಗೆ ಕಟ್ಟುತ್ತಿರುವುದಿಲ್ಲ. ರಾಮ ವನವಾಸದಿಂದ ಬಂದ ನಂತರ ರಾಜ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ನಂತರದಲ್ಲಿ ಸೀತೆಯ ಬಗ್ಗೆ ಜನ ಕೆಟ್ಟದ್ದಾಗಿ ಮಾತನಾಡುತ್ತಾರೆ.

ಆ ಸಂದರ್ಭದಲ್ಲಿ ಪತ್ನಿಯನ್ನು ಬಿಟ್ಟರೆ, ಪ್ರಜೆಗಳ ಮನಸ್ಸು ಕರಗಬಹುದು ಎಂದು, ಜನರಿಗಾಗಿ ಪತ್ನಿಯನ್ನು ತೊರೆಯುತ್ತಾನೆ. ಈ ಘಟನೆಯನ್ನು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ರಾಮ ಪ್ರಜೆಗಳಿಗಾಗಿ ತ್ಯಾಗ ಮಾಡಿದ. ಪತಿಗಾಗಿ ಸೀತೆಯೂ ತ್ಯಾಗ ಮಾಡಿದಳು. ರಾಮನಲ್ಲಿ ಪತ್ನಿಯ ಮೇಲೆ ಅನುಮಾನವಿತ್ತೇನೋ? ಹೀಗೆ ವಿಭಿನ್ನವಾಗಿ ವ್ಯಾಖ್ಯಾನಿಸುತ್ತಾರೆ. ಹಾಗೆಯೇ ಮಹಾನ್ ಸತ್ಯವಂತ ಎಂದು ಪೂಜಿಸುವ ಸತ್ಯಹರಿಶ್ಚಂದ್ರ, ವಿಶ್ವಾಮಿತ್ರನಿಗೆ ಭರವಸೆ ನೀಡುವ ಮುನ್ನ ಜವಾಬ್ದಾರಿಯುತ ರಾಜನಾಗಿ ಯೋಚಿಸಬೇಕಿತ್ತು ಎಂಬ ಚಿಂತನೆಯೂ ಮೂಡುತ್ತದೆ. ಆದ್ದರಿಂದ ಈ ಮಹಾಕಾವ್ಯಗಳನ್ನು ಆ ಯುಗದ ನಂಬಿಕೆಗಳ ಅನು ಸಾರವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಎಸ್.ಎಲ್.ಭೈರಪ್ಪ ಅವರು ಅಭಿಪ್ರಾಯಿಸಿದರು.

Translate »