ನಮ್ಮ ದೇಶದಲ್ಲಿ ಸುಳ್ಳು ಆರೋಪ ಮಾಡುವವರಿಗೆ ಶಿಕ್ಷೆಯೇ ಇಲ್ಲ
ಮೈಸೂರು

ನಮ್ಮ ದೇಶದಲ್ಲಿ ಸುಳ್ಳು ಆರೋಪ ಮಾಡುವವರಿಗೆ ಶಿಕ್ಷೆಯೇ ಇಲ್ಲ

October 1, 2018

ಮೈಸೂರು:  ನಮ್ಮ ದೇಶದಲ್ಲಿ ಸುಳ್ಳು ಆರೋಪ ಮಾಡುವವರಿಗೆ ಶಿಕ್ಷೆ ಇಲ್ಲವೇ ಇಲ್ಲ ಎಂದು ಸುಪ್ರಸಿದ್ಧ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ, ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ `ಉತ್ತರ ಕಾಂಡ’ ಕಾದಂಬರಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಾಯಣದಲ್ಲಿ ರಾಮ, ಸೀತೆಯನ್ನು ತೊರೆಯಲು ಜನರ ಗುಸು ಗುಸು ಮಾತು ಕಾರಣವಾಗಿತ್ತು. ಈ ಗುಸು ಗುಸು ಕೈಗೆ ಸಿಗುವುದಿಲ್ಲ. ಆದರೆ ದೊಡ್ಡ ಕಸುವಾಗಿ ಬೆಳೆದಿದೆ ಎಂದು ಹೇಳಿದರು.

ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿ ಬಳಿಕ ಮೊರಾರ್ಜಿ ದೇಸಾಯಿ ಅವರು ಪ್ರಧಾನ ಮಂತ್ರಿಯಾಗಿದ್ದರು. ಅತ್ಯಂತ ನಿಷ್ಠಾವಂತ ಹಾಗೂ ಪ್ರಾಮಾಣಿಕರಾಗಿದ್ದರು. ಅವರ ಕೈ ಪರಿಶುದ್ಧವಾಗಿತ್ತು. ಅವರ ಪುತ್ರ, ಮುಂಬೈನಲ್ಲಿ ಇನ್‍ಶ್ಯೂರೆನ್ಸ್ ಸಂಸ್ಥೆಯೊಂದನ್ನು ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಅದರಿಂದೇನು ಅಪಾರ ಆದಾಯವೇನಿರಲಿಲ್ಲ. ಆದರೆ ವಿರೋಧ ಪಕ್ಷದವರು, ಪ್ರಧಾನಿ ಪುತ್ರನಿಗೆ ಅನೇಕ ಉದ್ಯಮಿಗಳ ಒಡನಾಟವಿದ್ದು, ಪ್ರಧಾನಿ ಅವರು ಮಗನ ಮೂಲಕ ಉದ್ಯಮಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಸತ್ಯಾಸತ್ಯತೆ ತಿಳಿಯದೆ ಪತ್ರಿಕೆಗಳಲ್ಲೂ ವರದಿ ಮಾಡ ಲಾಯಿತು. ಕಡೆಗೆ ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಮೊರಾರ್ಜಿ ದೇಸಾಯಿ ಅವರು, ಪುತ್ರನ ಮನೆಯಲ್ಲೇ ಆಶ್ರಯ ಪಡೆದರು. ಅವರು ಭ್ರಷ್ಟಾಚಾರಿಯಾಗಿದ್ದರೆ ಮಗನ ಮನೆಯಲ್ಲಿ ಉಳಿಯುತ್ತಿರಲಿಲ್ಲ ಎಂದರು.

ಅದೇ ರೀತಿಯಲ್ಲಿ ಈಗ ಪ್ರಧಾನಿ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ಆರೋಪ ಮಾಡುತ್ತಿದ್ದಾರೆ. ರಫೆಲ್ ಯುದ್ಧ ವಿಮಾನದ ಬಿಡಿಭಾಗ ತಯಾರಿಕೆಯನ್ನು ಅಂಬಾನಿ ಮಾಲೀಕತ್ವದ ಸಂಸ್ಥೆಗೆ ವಹಿಸಿದ್ದು, ಇದರಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸು ತ್ತಿದ್ದಾರೆ. ರಾಕೆಟ್‍ಗೆ ಬಳಸಲಾಗುತ್ತಿದ್ದ ಕ್ರಯೋಜೆನಿಕ್ ಇಂಜಿನ್‍ಗಳನ್ನು ರಷ್ಯಾದಿಂದ ಕೊಳ್ಳಲಾಗು ತ್ತಿತ್ತು. ಆಗ ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಅವರು, ಆರ್ಥಿಕ ಸಹಕಾರ ನೀಡಿದರೆ ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ವಿಜ್ಞಾನಿಗಳ ತಂಡ ಆ ಕಾರ್ಯದಲ್ಲಿ ಯಶಸ್ವಿಯೂ ಆಯಿತು. ಆದರೆ ನಂಬಿ ನಾರಾಯಣ್ ಅವರು, ಸ್ವದೇಶಿ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿದ್ದಾರೆಂದು ಆರೋಪಿಸಿ, ಕೇರಳ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಹೈಕೋರ್ಟ್ ರದ್ದುಪಡಿ ಸಿದ್ದನ್ನು, ಪೊಲೀಸರು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಅಲ್ಲಿಯೂ ನಂಬಿ ನಾರಾಯಣ್ ಅವರ ಪರವಾದ ತೀರ್ಪು ಬಂದಿತು. ನಾರಾಯಣ್ ಅವರಿಗೆ ಅನ್ಯಾಯವಾಗಿದ್ದು, 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಲಾಯಿತು. ಅಂತೆಯೇ ಅವರಿಗೆ ಪರಿಹಾರವೇನೋ ಸಿಕ್ಕಿತು. ಆದರೆ ಅವರು ಅನುಭವಿಸಿದ ಮಾನಸಿಕ ಕಿರುಕುಳ, ವಿಜ್ಞಾನಿಗಳ ಮೇಲಾಗಿರುವ ದುಷ್ಪರಿಣಾಮ, ದೇಶ ಎದುರಿಸಿದ ಅಪಾಯಕ್ಕೆ ಯಾರು ಹೊಣೆ?. ಸುಳ್ಳು ಆರೋಪ ಮಾಡುವುದು ಸುಲಭ. ಆದರೆ ಅದರಿಂದಾಗುವ ಪರಿಣಾಮ ಗಂಭೀರವಾಗಿರುತ್ತದೆ. ಹೀಗೆ ಸುಳ್ಳು ಆರೋಪ ಮಾಡುವವರಿಗೆ ನಮ್ಮಲ್ಲಿ ಶಿಕ್ಷೆಯಿಲ್ಲ ಎಂದು ಭೈರಪ್ಪ ಅವರು ವಿಷಾದಿಸಿದರು.

Translate »